ಸೋಮವಾರ, ಸೆಪ್ಟೆಂಬರ್ 20, 2021
21 °C
ಉದ್ಯಾವರ ಸಂಘಟನೆಗಳ ಸಹಭಾಗಿತ್ವದಲ್ಲಿ ಹಿರಿಯರ ದಿನ ಆಚರಣೆ

ಏಕಾಂಗಿ ಬದುಕು: ಹಿರಿಯರಲ್ಲಿ ಹೆಚ್ಚಿದ ಖಿನ್ನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಹಿಂದೆಲ್ಲ ಮನೆಯ ತುಂಬಾ ಕುಟುಂಬದ ಸದಸ್ಯರು ಇರುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಹಲವು ಮನೆಗಳಲ್ಲಿ ಏಕಾಂಗಿಯಾಗಿ ಬದುಕುವವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ ಮಾನಸಿಕ ಸಂತುಲನ ಕಳೆದುಕೊಂಡು ಒತ್ತಡಕ್ಕೆ ಸಿಲುಕುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಹೆ ಮಣಿಪಾಲದ ಸ್ಟೂಡೆಂಟ್ ಕೌನ್ಸೆಲರ್ ಡಾ. ರಾಯನ್ ಮಿನೇಜಸ್ ಹೇಳಿದರು.

ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಅಧೀನದಲ್ಲಿರುವ ಕಥೋಲಿಕ್ ಸಭಾ, ಸ್ತ್ರೀ ಸಂಘಟನೆ, ಯುವ ಮತ್ತು ಆರೋಗ್ಯ ಆಯೋಗದ ಸಹಭಾಗಿತ್ವದಲ್ಲಿ ಈಚೆಗೆ ನಡೆದ ಹಿರಿಯರ ದಿನಾಚರಣೆಯಲ್ಲ ಮಾತನಾಡಿದರು.

ಪ್ರಸ್ತುತ ಯುವಕರಿಗಿಂತ ಹಿರಿಯರು ಹೆಚ್ಚು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮನಸ್ಸಿಗೆ ಏಕಾಗ್ರತೆ ಇಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉದ್ಯೋಗ ಹರಸಿ ದೂರದ ಊರುಗಳಲ್ಲಿರುವ ಮಕ್ಕಳು ಹಾಗೂ ಪೋಷಕರ ನಡುವೆ ಸಂಬಂಧಗಳು ಸಡಿಲಗೊಳ್ಳುತ್ತಿವೆ ಎಂದರು.

ಹಿರಿಯ ನಾಗರಿಕರು ಸ್ಮಾರ್ಟ್‌ಫೋನ್ ಉಪಯೋಗ ಅರಿಯದೆ ಅಮಾಯಕರ ವಂಚನೆಯ ಜಾಲಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಹಿರಿಯರನ್ನೇ ಗುರಿಯಾಗಿಸಿಕೊಂಡು ನಡೆಯುವ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯರ ಮಾನಸಿಕ ಸಂತುಲನ ತಪ್ಪುತ್ತಿದ್ದು, ಜಿಲ್ಲೆಯಲ್ಲಿ ಅನಾಥಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ. ಅನಾಥಾಶ್ರಮಗಳು ಹಿರಿಯ ನಾಗರಿಕರಿಂದ ತುಂಬಿ ತುಳುತ್ತಿವೆ. ಈ ವಿಚಾರ ಬಹಳ ಗಂಭೀರವಾದುದು ಎಂದರು.

ಉದ್ಯಾವರ ದೇವಾಲಯದ ಪ್ರಧಾನ ಧರ್ಮಗುರು ಸ್ಟ್ಯಾನಿ ಬಿ.ಲೋಬೊ ಹಾಗೂ ಝೇವಿಯರ್ ಪಿಂಟೊ ನೇತೃತ್ವದಲ್ಲಿ ಕೃತಜ್ಞತಾ ಬಲಿಪೂಜೆ ನಡೆಯಿತು. ಬಳಿಕ ಚರ್ಚ್ ಸಭಾಭವನದಲ್ಲಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಐವತ್ತಕ್ಕೂ ಹೆಚ್ಚು ಜೋಡಿಗಳನ್ನು ಸನ್ಮಾನಿಸಲಾಯಿತು.

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನಾ, ಕಾರ್ಯದರ್ಶಿ ಮೈಕಲ್ ಡಿಸೋಜ, ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಕೇಂದ್ರೀಯ ಸಮಿತಿಯ ಉಪಾಧ್ಯಕ್ಷ ರೊನಾಲ್ಡ್ ಅಲ್ಮೇಡಾ, ಹಿರಿಯರಾದ ಜೋಸೆಫ್ ಮತ್ತು ಗ್ರೇಸಿ ಕರ್ಡೋಜಾ, ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಸ್ತ್ರೀ ಸಂಘಟನೆಯ ಕಾರ್ಯದರ್ಶಿ ಐರಿನ್ ಪಿರೇರಾ, ಯುವ ಆಯೋಗದ ಸಂಚಾಲಕ ರೋಯ್ಸ್ ಫೆರ್ನಾಂಡಿಸ್, ಕಥೋಲಿಕ್ ಸಭಾ ಮಾಜಿ ಅಧ್ಯಕ್ಷ ಲೋರೆನ್ಸ್ ಡೇಸಾ ಉಪಸ್ಥಿತರಿದ್ದರು.

ಆರೋಗ್ಯ ಆಯೋಗದ ಸಂಚಾಲಕ ವಿಲ್ಫ್ರೆಡ್ ಕ್ರಾಸ್ಟೋ ಸ್ವಾಗತಿಸಿದರು. ಕಥೋಲಿಕ್ ಸಭಾ ಕಾರ್ಯದರ್ಶಿ ಟೆರೆನ್ಸ್ ಪಿರೇರಾ ವಂದಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು