ಗುರುವಾರ , ಆಗಸ್ಟ್ 5, 2021
28 °C
ನಾಲ್ಕೂರು ಹಡಿಲು ಭೂಮಿ ಕೃಷಿಗೆ ಚಾಲನೆ ನೀಡಿದ ಸಚಿವ ಲಿಂಬಾವಳಿ

ಭತ್ತದ ಕೃಷಿ ನಮ್ಮ ಸಂಸ್ಕೃತಿಯ ಪ್ರತೀಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಲ್ಕೂರು (ಬ್ರಹ್ಮಾವರ): ‘ಭತ್ತದ ಕೃಷಿ ನಮ್ಮ ಸಂಸ್ಕೃತಿಯ ಪ್ರತೀಕ. ಯುವಜನತೆ ಕೃಷಿಯತ್ತ ಒಲವು ಮೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದು ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ನಾಲ್ಕೂರು ಮಾರಾಳಿಯಲ್ಲಿ ಭಾನುವಾರ ಹಡಿಲು ಭೂಮಿ ಕೃಷಿ ಆಂದೋಲನ ಅಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ 20 ಎಕರೆ ಕೃಷಿ ಭೂಮಿಯಲ್ಲಿ ಭತ್ತದ ನಾಟಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮ ಅನುಕೂಲಕ್ಕಾಗಿ ಆಕೇಶಿಯದಂತಹ ಮರಗಳನ್ನು ನೆಟ್ಟು ಪ್ರಾಣಿಗಳಿಗೆ ಆಹಾರ ಇಲ್ಲದಂತೆ ಮಾಡಿದ್ದೇವೆ. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಬೇಕಾಗುವಂತಹ ಹಣ್ಣಿನ ಮರಗಳನ್ನು ಬೆಳೆಸಬೇಕಾಗಿದೆ. ಇದಕ್ಕೆ ಪರಿಹಾರವಾಗಿ ಪ್ರತಿ ಕ್ಷೇತ್ರದ ಅರಣ್ಯದಲ್ಲಿ ಕನಿಷ್ಠ 100 ಎಕರೆ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು. ಅರಣ್ಯ ಉಳಿದರೆ ಮಾತ್ರ ನೈಸರ್ಗಿಕ ಆಮ್ಲಜನಕವನ್ನು ಸಮಾಜಕ್ಕೆ ಕೊಡುಗೆ ರೂಪದಲ್ಲಿ ನೀಡಲು ಸಾಧ್ಯ’ ಎಂದು ಹೇಳಿದರು.

ಅರೆ ಮಾದನ ಹಳ್ಳಿ ಕಜ್ಕೆಯ ಶಾಖಾ ವಿಶ್ವಕರ್ಮ ಜಗದ್ಗುರು ಪೀಠ ಮಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದೇಶದಲ್ಲಿ ರೈತನ ಸ್ಥಾನ ಅತ್ಯಂತ ದೊಡ್ಡದು. ಹಡಿಲು ಭೂಮಿ ಕೃಷಿಯಿಂದ ರೈತರಿಗೆ ಪ್ರೋತ್ಸಾಹ ನೀಡುತ್ತಿರುವುದು ಅನ್ನದಾತನಿಗೆ ಕೊಟ್ಟ ದೊಡ್ಡ ಕೊಡುಗೆ ಎಂದರು.

ಶಾಸಕ ಕೆ.ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಉದ್ಯಮಿ ಕಾಶಿನಾಥ್ ಶೆಣೈ, ನಾಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ನಾಯ್ಕ, ಉಪಾಧ್ಯಕ್ಷೆ ಸುಮಿತ್ರಾ ಶರತ್ ಶೆಟ್ಟಿ, ಕೇದಾರೋತ್ಥಾನ ಟ್ರಸ್ಟ್  ಕೋಶಾಧಿಕಾರಿ ರಾಘವೇಂದ್ರ ಕಿಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ.ಶಂಕರ್ ಇದ್ದರು.

ಪ್ರತಾಪ್ ಹೆಗ್ಡೆ ಮಾರಾಳಿ ಸ್ವಾಗತಿಸಿದರು. ಚೇರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯ ಕಮಲಾಕ್ಷ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

ಗಿಡ ನೆಡುವ ಕಾರ್ಯಕ್ರಮ

ಬ್ರಹ್ಮಾವರ: ಇಲ್ಲಿನ ಹೆಬ್ರಿ ಸೀತಾನದಿ ಮುಖ್ಯ ರಸ್ತೆಯಲ್ಲಿ 10 ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಸಚಿವ ಅರವಿಂದ ಲಿಂಬಾವಳಿ ಹಾಗೂ ಶಾಸಕ ಕೆ.ರಘುಪತಿ ಭಟ್ ಭಾನುವಾರ ಸಾಂಕೇತಿಕವಾಗಿ ಚಾಲನೆ ನೀಡಿದರು.

ಬ್ರಹ್ಮಾವರದ ಕೃಷಿ ಕೇಂದ್ರದ ಎದುರಿನಿಂದ ಪ್ರಾರಂಭಿಸಿ ರಸ್ತೆಯ ಎರಡೂ ಬದಿಗಳಲ್ಲಿ 3 ಸಾವಿರ ವಿವಿಧ ಜಾತಿಯ ಹಣ್ಣಿನ ಮತ್ತು ಹೂವಿನ ಗಿಡ ಹಾಗೂ ಸುತ್ತಮುತ್ತಲಿನ ಅರಣ್ಯದ ಸರ್ಕಾರಿ, ಖಾಸಗಿ ಮತ್ತು ಆಸುಪಾಸಿನ ಜಾಗದಲ್ಲಿ 7 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಸಚಿವ ಚಾಲನೆ ನೀಡಿದರು.

ಹಲವಾರು ವರ್ಷದಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಶಿವಪ್ಪ ನಾಯ್ಕ ಅವರನ್ನು ಸಚಿವರು ಸನ್ಮಾನಿಸಿದರು.ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್, ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಉಪಾಧ್ಯಕ್ಷೆ ಲಕ್ಷ್ಮೀ ಹಾಗೂ ಅರಣ್ಯ ಇಲಾಖೆ ಪ್ರಮುಖರಾದ ಮಿಲ್ಲೋ ಟ್ಯಾಗೋ, ಪ್ರಕಾಶ ಎಸ್. ನೆಟಾಲ್ಕರ್, ಆಶಿಶ್ ರೆಡ್ಡಿ, ಸುಬ್ರಾಯ ಆಚಾರ್ಯ, ಹರೀಶ್ ಮತ್ತು ಚಾಂತಾರು ಗ್ರಾಮ ಪಂಚಾಯಿತಿ ಸದಸ್ಯರು, ಪಕ್ಷದ ಮುಖಂಡರು, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು