ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಆ.12ರಂದು ಪರ್ಸಿಡ್ ಉಲ್ಕಾವೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಹವ್ಯಾಸಿ ಖಗೋಳ ತಜ್ಞರು ಹಾಗೂ ಖಗೋಳಾಸಕ್ತರು ಆಗಸ್ಟ್‌ನಲ್ಲಿ ಹಲವು ಕೌತುಕಗಳನ್ನು ಕಣ್ತುಂಬಿಕೊಳ್ಳಬಹುದು. ಸೌರಮಂಡಲದ ಅತಿ ದೊಡ್ಡ ಗ್ರಹಗಳ ವಿಯುತಿ ಹಾಗೂ ವರ್ಷದ ಅತ್ಯತ್ತಮ ಪರ್ಸೀಡ್ ಉಲ್ಕಾವೃಷ್ಟಿ ಈ ತಿಂಗಳಲ್ಲಿ ಸಂಭವಿಸಲಿದೆ.

ಆ. 12ರಂದು ಮುಂಜಾನೆ 2 ಗಂಟೆಯ ಹೊತ್ತಿಗೆ ಈಶಾನ್ಯ ದಿಕ್ಕಿನಲ್ಲಿ ಪ್ರಕಾಶಮಾನವಾದ ಬ್ರಹ್ಮಹೃದಯ ನಕ್ಷತ್ರ ಗೋಚರಿಸಲಿದ್ದು, ಅದರ ಮೇಲ್ಭಾಗದಲ್ಲಿ ಪಾರ್ಥ ನಕ್ಷತ್ರ ಪುಂಜ ಕಾಣುತ್ತದೆ. ಪಾರ್ಥ ನಕ್ಷತ್ರಪುಂಜವು ಆಕಾಶದ ಎತ್ತರಕ್ಕೆ ತಲುಪಿದಾಗ ಉಲ್ಕಾವೃಷ್ಟಿ ಸಂಭವಿಸಲಿದೆ ಎಂದು ಪೂರ್ಣ ಪ್ರಜ್ಞ ಅಮೆಚೂರ್ ಆಸ್ಟ್ರೊನಾಮರ್ಸ್‌ ಕ್ಲಬ್‌ನ ಸಂಚಾಲಕ ಡಾ.ಅತುಲ್ ಭಟ್ ತಿಳಿಸಿದರು.

ಪರ್ಸೀಡ್ ಉಲ್ಕಾವೃಷ್ಟಿಯಾದಾಗ ಶುಭ್ರವಾದ ಆಕಾಶದಲ್ಲಿ ಗಂಟೆಗೆ ಗರಿಷ್ಠ 150 ಉಲ್ಕೆಗಳನ್ನು ಕಾಣಬಹುದು. ಆದರೆ, ಈ ವರ್ಷ ಗಂಟೆಗೆ 60 ಉಲ್ಕೆಗಳನ್ನು ವೀಕ್ಷಿಸಬಹುದಾಗಿದೆ. ಆಕಾಶದಲ್ಲಿ ಪಾರ್ಥ ನಕ್ಷತ್ರ ಪುಂಜವನ್ನು ಗುರುತಿಸಲು ಇನ್ನೊಂದು ಮಾರ್ಗವಿದ್ದು, ಉತ್ತರ ದಿಕ್ಕಿನಲ್ಲಿ ಕುಂತಿ ನಕ್ಷತ್ರಪುಂಜದ 5 ನಕ್ಷತ್ರಗಳಿಂದ ರಚನೆಯಾಗುವ ಡಬ್ಲ್ಯೂ ಆಕಾರದ ಸಮೀಪದಲ್ಲಿ ಹಾಗೂ ಪೂರ್ವ ಆಕಾಶದಲ್ಲಿ ವೃಷಭ ರಾಶಿಯಿಂದ ರೂಪುಗೊಂಡ ‘ಎ’ ಆಕಾರದ ಮಧ್ಯದಲ್ಲಿ ಪಾರ್ಥ ನಕ್ಷತ್ರಪುಂಜವನ್ನು ಗುರುತಿಸಬಹುದು ಎಂದು ಮಾಹಿತಿ ನೀಡಿದರು.

20ರಂದು ವಿಯುತಿ:

ಆ.2ರಂದು ಶನಿಗ್ರಹ ವಿಯುತಿ ತಲುಪಿದ್ದು, 20ರಂದು ಗುರುಗ್ರಹ ಕೂಡ ವಿಯುತಿ ತಲುಪಲಿದೆ. ವಿಯುತಿ ಎಂದರೆ ಗ್ರಹವು ಸೂರ್ಯನ ನೇರ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ವಿಯುತಿಯ ಸಮಯದಲ್ಲಿ ಸೂರ್ಯ ಭೂಮಿ ಹಾಗೂ ಗ್ರಹಗಳು ಒಂದೇ ರೇಖೆಯಲ್ಲಿ ಇರುವುದರಿಂದ ಗ್ರಹ ಹುಣ್ಣಿಮೆಯ ಚಂದ್ರನಂತೆ ಸಂಪೂರ್ಣವಾಗಿ ಬೆಳಗುತ್ತದೆ ಎನ್ನುತ್ತಾರೆ ಅವರು.

ಉಲ್ಕಾಪಾತ ಎಂದರೆ ಏನು:

1992ರಲ್ಲಿ ಸ್ವಿಫ್ಟ್-ಟಟ್ಟಲ್ ಎಂಬ ಧೂಮಕೇತು ಸೂರ್ಯನನ್ನು ಸಮೀಪಿಸಿದಾಗ, ಅದು ಚಲಿಸಿದ ಪಥದಲ್ಲಿ ಅವಶೇಷಗಳು ಉಳಿದುಕೊಂಡಿತ್ತು. ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಈ ಅವಶೇಷಗಳು ಭೂಮಿಯ ಚಲನೆಗೆ ಎದುರಾಗಿ ಭೂಮಿಯ ವಾತಾವರಣ ತಲುಪುತ್ತವೆ. ಈ ಪ್ರಕ್ರಿಯೆಯು ಆಕಾಶದಲ್ಲಿ ಬೆಳಕಿನ ರೇಖೆಯು ಹಾದು ಹೋದಂತೆ ನಮ್ಮ ಕಣ್ಣಿಗೆ ಕಾಣುತ್ತದೆ. ಇದನ್ನೇ ಉಲ್ಕಾಪಾತ ಎಂದು ಕರೆಯುತ್ತೇವೆ. ಕಡಿಮೆ ಸಮಯದಲ್ಲಿ ಹೆಚ್ಚು ಉಲ್ಕೆಗಳು ಕಾಣಿಸಿಕೊಂಡಾಗ ಉಲ್ಕಾವೃಷ್ಟಿ ಎನ್ನುತ್ತೇವೆ ಎಂದು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮೇಘನಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು