ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ವಿಶ್ವೇಶತೀರ್ಥರ ಅಗಲಿಕೆಗೆ ಒಂದು ವರ್ಷ

ಅಷ್ಠಮಠಗಳ ಯತಿಗಳ ಹಿರಿಯಣ್ಣನಂತಿದ್ದ ಪೇಜಾವರ ಮಠದ ಹಿರಿಯ ಶ್ರೀಗಳು
Last Updated 28 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಅಸ್ತಂಗತರಾಗಿ (ಡಿ.29) ಒಂದು ವರ್ಷ ಕಳೆದಿದೆ. ಹೊಸ ವರ್ಷದ ಆರಂಭಕ್ಕೆ ಇನ್ನೆರಡು ದಿನಗಳಿರುವಾಗಲೇ ಅವರು ದೇಹ ತ್ಯಜಿಸಿದ್ದರು. ದೈಹಿಕವಾಗಿ ಶ್ರೀಗಳು ಇಲ್ಲ ಎಂಬ ಕೊರಗು ಇಂದಿಗೂ ಅಷ್ಠಮಠ ಹಾಗೂ ಅವರ ಅಸಂಖ್ಯಾತ ಶಿಷ್ಯರು ಹಾಗೂ ಭಕ್ತರನ್ನು ಕಾಡುತ್ತಿದೆ.

ಶ್ರೀಗಳ ಸ್ಮರಣೆ:ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾ ಸೋಂಕಿನಿಂದ ಬಳಲುತ್ತಿದ್ದ ಶ್ರೀಗಳನ್ನು ಕಳೆದ ವರ್ಷ ಡಿ.20ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಣಿಪಾಲದ ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯರ ತಂಡ ಸತತ 9 ದಿನಗಳ ಕಾಲ ಶ್ರೀಗಳಿಗೆ ಚಿಕಿತ್ಸೆ ನೀಡಿತು. ಬೆಂಗಳೂರಿನ ಮಣಿಪಾಲ್‌ ಹಾಗೂ ಏಮ್ಸ್‌ನ ತಜ್ಞ ವೈದ್ಯರ ತಂಡವೂ ಚಿಕಿತ್ಸೆಗೆ ಕೈಜೋಡಿಸಿತು.

ಶ್ರೀಗಳ ಚೇತರಿಕೆಗೆ ನಾಡಿನಾದ್ಯಂತ ಪ್ರಾರ್ಥನೆ, ಹೋಮ–ಹವನಗಳು ನಡೆದವು. ಮುಖ್ಯಮಂತ್ರಿಯಾದಿಯಾಗಿ ನಾಡಿನ ಹಲವು ಗಣ್ಯರು ಆಸ್ಪತ್ರೆ ಬಂದು ಶ್ರೀಗಳು ಗುಣಮುಖರಾಗುವಂತೆ ಹಾರೈಸಿದರು. ಆದರೆ ಯಾರ ಹಾರೈಕೆ, ಹರಕೆಗಳು ಫಲಿಸಲಿಲ್ಲ. 9 ದಿನಗಳ ಸುಧೀರ್ಘ ಜೀವನ್ಮರಣದ ಹೋರಾಟದ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ವಿಶ್ವೇಶತೀರ್ಥ ಶ್ರೀಗಳು ಡಿ.29ರಂದು ಬೆಳಿಗ್ಗೆ 9.20ಕ್ಕೆ ಉಸಿರು ಚೆಲ್ಲಿದರು.

ಶ್ರೀಗಳ ಕೊನೆಯ ಆಸೆಯಂತೆಯೇ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಅಲ್ಲಿಯೇ ವೃಂದಾವನ ಕೂಡ ನಿರ್ಮಾಣವಾಗಿದ್ದು, ಈಚೆಗೆ ಪ್ರಥಮ ಸಂಸ್ಮರಣೆ ಕಾರ್ಯಕ್ರಮವೂ ನೆರವೇರಿತು.

ಕಾಡುತ್ತಿದೆ ಅನುಪಸ್ಥಿತಿ:‘ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಪರ್ಯಾಯ ಮಹೋತ್ಸವ ಹಾಗೂ ಮಠದ ಧಾರ್ಮಿಕ ಉತ್ಸವಗಳಲ್ಲಿ ಪೇಜಾವರ ಶ್ರೀಗಳ ಉಪಸ್ಥಿತಿ ಎದ್ದು ಕಾಣುತ್ತಿತ್ತು. ವಿಭುದೇಶ ತೀರ್ಥ ಶ್ರೀಗಳ ನಂತರ ಅಷ್ಠಮಠಗಳ ಯತಿಗಳ ಪೈಕಿ ಹಿರಿಯಣ್ಣನಂತಿದ್ದ ಶ್ರೀಗಳು, ಕಿರಿಯ ಯತಿಗಳಿಗೆ ಮಾರ್ಗದರ್ಶನ ನೀಡುತ್ತ, ಧಾರ್ಮಿಕ ವಿಚಾರಗಳಲ್ಲಿ ಅಪಸ್ವರಗಳು ಎದ್ದಾಗ ಮುಂದೆ ನಿಂತು ಪರಿಹರಿಸುತ್ತಿದ್ದರು ಎಂದು ಸ್ಮರಿಸಿದರು ಅವರ ಆಪ್ತರಾಗಿದ್ದ ವಾಸುದೇವ ಭಟ್‌.

ಸಮಾಜದ ಎಲ್ಲ ವಿಪ್ಲವಗಳಿಗೆ ತುರ್ತಾಗಿ ಧಾವಿಸುತ್ತಿದ್ದ ಶ್ರೀಗಳ ಅನುಪಸ್ಥಿತಿ ನಾಡಿಗೆ ಕಾಡುತ್ತಿದೆ. ಕೊರೊನಾ ಮಹಾಮಾರಿ ಆವರಿಸಿರುವ ಈ ಹೊತ್ತಿನಲ್ಲಿ ಶ್ರೀಗಳ ಉಪಸ್ಥಿತಿ ಇರಬೇಕಿತ್ತು. ಸಮಾಜಕ್ಕೆ ಅವರ ಸಂದೇಶಗಳ ಅಗತ್ಯವಿತ್ತು ಎಂಬ ಅಭಿಪ್ರಾಯಗಳು ಸಮಾಜದಲ್ಲಿ ವ್ಯಾಪಕವಾಗಿದೆ ಎಂದು ಸ್ಮರಿಸಿದರು ಅವರು.

‘ಮನೋವೈಶಾಲ್ಯತೆಯೇ ಶಕ್ತಿ’

ವಿವಾದದಿಂದ ಉತ್ಸಾಹ ನೂರ್ಮಡಿಸಿಕೊಂಡಿದ್ದೇನೆ ಎಂದು ಹೇಳುವ, ಭಿನ್ನ ವಿರೋಧಿ ವಿಚಾರಧಾರೆ ಹೊಂದಿದ್ದವರೊಂದಿಗೂ ಮುಕ್ತವಾಗಿ ಚರ್ಚಿಸುವ ಮನೋವೈಶಾಲ್ಯ ಹೊಂದಿದ್ದ ಪೇಜಾವರ ಶ್ರೀಗಳು ಬದುಕಿನುದ್ದಕ್ಕೂ ಟೀಕೆ, ಟಿಪ್ಪಣಿಗಳನ್ನು ಸಮಾನವಾಗಿ ಸ್ವೀಕರಿಸಿದರು. ವಯಸ್ಸು, ಅನುಭವ ಮಾತ್ರವಲ್ಲ; ಪಾಂಡಿತ್ಯ, ಪಟುತ್ವ ಹಾಗೂ ಸಾಮರ್ಥ್ಯದ ನೆಲೆಯಲ್ಲಿಯೂ ಬಹಳ ಎತ್ತರದಲ್ಲಿದ್ದರು. ಸಮನ್ವಯ ಹಾಗೂ ಸಮತ್ವದ ದೃಷ್ಟಿಯಲ್ಲಿ ಎಲ್ಲರನ್ನು ಒಟ್ಟಾಗಿ ಮುನ್ನಡೆಸಿಕೊಂಡು ಹೋಗುವ ಚಿಂತನೆಯಿದ್ದ ಯತಿ ಪರಂಪರೆಯ ಕೊನೆಯ ಕೊಂಡಿ ಪೇಜಾವರ ಶ್ರೀಗಳು ಎಂದು ಹೇಳಬಹುದು. ಹಿಂದೆಯೂ ದೊಡ್ಡ ಹೆಮ್ಮರವೊಂದು ಉರುಳಿದಾಗ ನಾಡಿಗೆ ವಿಪತ್ತುಗಳು ಕಾಡಿತ್ತು. ಹಾಗೆಯೇ ಪೇಜಾವರ ಶ್ರೀಗಳನ್ನು ಕಳೆದುಕೊಂಡ ಬಳಿಕವೂ ಕೊರೊನಾ ವಿಪತ್ತು ಕಾಡುತ್ತಿದೆ ಎಂದರು ವಾಸುದೇವ್ ಭಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT