ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ನೈಟ್‌ಕರ್ಫ್ಯೂನಲ್ಲಿ ‘ಪೆರ್ಡೂರು ಯಕ್ಷೋತ್ಸವ’

ಪೆರ್ಡೂರು ಮೇಳದ ಅಭಿಮಾನಿಗಳಿಂದ ಕಾಲಮಿತಿ ಉಪಕ್ರಮ
Last Updated 1 ಜನವರಿ 2022, 7:23 IST
ಅಕ್ಷರ ಗಾತ್ರ

ಹಿರಿಯಡಕ: ಕೋವಿಡ್‌, ಕೊರೊನಾ ಓಮೈಕ್ರಾನ್ ಹರಡುವಿಕೆ ತಡೆಯಲು ರಾಜ್ಯದಾದ್ಯಂತ ಡಿ.28 ರಿಂದ 10 ದಿನ ರಾತ್ರಿ ಕರ್ಫ್ಯೂ ವಿಧಿಸಿದ ಹಿನ್ನಲೆಯಲ್ಲಿ, ಈಗಷ್ಟೇ ಆರಂಭವಾದ ಬಡಗುತಿಟ್ಟಿನ ಡೇರೆ ಮೇಳ ಪೆರ್ಡೂರು ಮೇಳದ ಪ್ರದರ್ಶನ ತಿರುಗಾಟವನ್ನು ಮುಂದುವರಿಸುವ ಸಲುವಾಗಿ ಮೇಳದ ಅಭಿಮಾನಿಗಳು ಪೆರ್ಡೂರಿನಲ್ಲಿ ಪೌರಾಣಿಕ ಪ್ರಸಂಗಳ ‘ಪೆರ್ಡೂರು ಯಕ್ಷೋತ್ಸವ’ ಆಯೋಜಿಸಿದ್ದಾರೆ.

ಎರಡು ವರ್ಷ ನಿರ್ಬಂಧಗಳಿಂದ ಕರಾವಳಿಯ ಯಕ್ಷಗಾನ ನಂಬಿಕೊಂಡು ಜೀವನ‌ ನಡೆಸುತ್ತಿದ್ದವರು, ಕಲಾವಿದರು ಜೀವನೋಪಾಯಕ್ಕಾಗಿ ಬೇರೆ ಉದ್ಯೋಗ ವನ್ನು ಅರಸಿದ್ದರು. ಈ ಬಾರಿ ಎಲ್ಲ ಮೇಳಗಳು ನವೆಂಬರ್ ತಿಂಗಳ ಮಧ್ಯದಿಂದ ತಮ್ಮ ತಿರುಗಾಟವನ್ನು ಆರಂಭಿಸಿದ್ದವು. ಆದರೆ ನೈಟ್ ಕರ್ಫ್ಯೂ ಯಕ್ಷಗಾನ ಮೇಳಗಳ ಉತ್ಸಾಹಕ್ಕೆ ತಣ್ಣೀರೆರಚಿದೆ. ಅನೇಕ ಹರಕೆ ಬಯಲಾಟ ಮೇಳಗಳು ಸರ್ಕಾರದ ಆದೇಶದಂತೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9.30 ರವರೆಗೆ ಯಕ್ಷಗಾನ ಪ್ರದರ್ಶನವನ್ನು ನಡೆಸುತ್ತಿವೆ.

ನೈಟ್ ಕರ್ಫ್ಯೂ ಸಮಸ್ಯೆ: ನೈಟ್ ಕರ್ಫ್ಯೂ ಕಾರಣ ಡೇರೆ ಮೇಳಗಳಾದ ಪೆರ್ಡೂರು ಮೇಳ ಹಾಗೂ ಸಾಲಿಗ್ರಾಮ ಮೇಳಗಳು ಹೆಚ್ಚು ತೊಂದರೆ ಅನುಭವಿಸಿಸುತ್ತಿವೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ವಿವಿಧೆಡೆ ಯಕ್ಷಗಾನ ಪ್ರದರ್ಶನ ನೀಡುವ ಈ ಮೇಳದ ಪ್ರದರ್ಶನಗಳಿಗೆ ವಿಶೇಷ ಆಕರ್ಷಣೆ, ನಿಗದಿತ ಪ್ರವೇಶ ದರ, ಪ್ರತಿ ಪ್ರದರ್ಶನಕ್ಕಾಗಿ ಲಕ್ಷಗಟ್ಟಲೆ ಮೊತ್ತದ ಹೂಡಿಕೆ ಮಾಡಿ ಸುಮಾರು‌ 2-3 ತಿಂಗಳು ಮೊದಲೇ ಪ್ರಸಂಗದ ಆಯೋಜನೆ, ಟಿಕೆಟ್, ಪ್ರಚಾರ ಆರಂಭಿಸಿರುತ್ತಾರೆ. ಸಂಘಕಟರಿಗೆ ಉತ್ತಮಗಳಿಕೆಯೂ ಆಗುತಿತ್ತು. ಯಜಮಾನರಿಗೂ ಹಾಗೂ ಸಂಘಟಕರಿಗೂ ಕಷ್ಟಕರವಾಗಿದೆ‌.

ಪೆರ್ಡೂರು ಮೇಳಕ್ಕೆ ಬೆಂಬಲ: ಪೆರ್ಡೂರು ಅನಂತಪಧ್ಮನಾಭ ಯಕ್ಷಗಾನ ಮಂಡಳಿಯು ನವೆಂಬರ್ 30 ರಿಂದ 37 ನೇ ವರ್ಷದ ತಿರುಗಾಟ ಆರಂಭಿಸಿತ್ತು. ನೈಟ್ ಕರ್ಫ್ಯೂ ಕಾರಣ ತೀರ್ಥಹಳ್ಳಿ, ಸಾಗರ, ಸೇರಿದಂತೆ ವಿವಿಧ ಕಡೆ ಮೇಳದ ಪ್ರದರ್ಶನವನ್ನು ಆಯೋಜಿಸಿದ್ದ ಸಂಘಟಕರು ತಮ್ಮ ಪ್ರದರ್ಶನವನ್ನು ಮುಂದೂಡಿದ್ದಾರೆ. ಯಕ್ಷಗಾನ ಪ್ರದರ್ಶನ ಸ್ಥಗಿತವಾಗುವ ಭೀತಿ ಉಂಟಾಗಿತ್ತು. ಆದರೆ ಪೆರ್ಡೂರು ಮೇಳದ ಅಭಿಮಾನಿಗಳು ಡಿ.29 ರಿಂದ ಜ.6 ರವರೆಗೆ ರಾತ್ರಿ 6.30 ರಿಂದ 10 ಗಂಟೆಯವರೆಗೆ ಪೆರ್ಡೂರು ದೇವಸ್ಥಾನದ ಮುಂಭಾಗ 'ಪೆರ್ಡೂರು ಯಕ್ಷೋತ್ಸವ' ಆಯೋಜಿಸಿದ್ದಾರೆ.

ಜ.1 ರಂದು ಬುಕ್ಕಿಗುಡ್ಡೆಯ ಯಕ್ಷಾಭಿಮಾನಿ ಗಳ ವತಿಯಿಂದ 'ದಕ್ಷಯಜ್ಞ' ಜ.3 ರಂದು ಶಂಭುಶಂಕರ ಶೆಟ್ಟಿ ಇವರ ವತಿಯಿಂದ 'ಚಂದ್ರಹಾಸ' ಜ.4 ರಂದು ಸುಬ್ರಾಯ ಕಲ್ಯಾಣ ಮಂಟಪದ ಗೆಳೆಯರ ವತಿಯಿಂದ 'ಯಕ್ಷಲೋಕ ವಿಜಯ', ಜ.5 ರಂದು ವಿಶ್ವಕರ್ಮ ಕಾರ್ಪೆಂಟರ್ ಬಳಗ ಪಕ್ಕಾಲು ವತಿಯಿಂದ 'ಕೃಷ್ಣಾರ್ಜುನ' ಹಾಗೂ ಜ.6 ರಂದು ಕೂಡ ಪ್ರದರ್ಶನ ನಡೆಯಲಿದೆ.

‘ಕಾಲಮಿತಿ ಪ್ರದರ್ಶನ’
ನೈಟ್ ಕರ್ಫ್ಯೂನಿಂದಾಗಿ ಪ್ರದರ್ಶನ ನಿಲ್ಲಿಸಬೇಕಾದ ಸಂದರ್ಭ ಬಂದಾಗ ಅಭಿಮಾನಿಗಳು ಪ್ರತಿದಿನ ಕಾಲಮಿತಿ ಪ್ರದರ್ಶನವನ್ನು ಆಯೋಜಿಸಿದ್ದಾರೆ. ಇದು ಅನಂತಪಧ್ಮನಾಭ ದೇವರ ಅನುಗ್ರಹ. ನನ್ನ 37 ವರ್ಷಗಳ ಯಜಮಾನಿಕೆಯ ಸಮಯದಲ್ಲಿ. ಕಲಾಸಕ್ತರು ಮೇಳದ ಮೇಲಿನ ಅಭಿಮಾನದಿಂದ ಪ್ರದರ್ಶನ ಆಯೋಜನೆ ಮಾಡಿರುವುದು ಇದೇ ಮೊದಲು ಎಂದುಪೆರ್ಡೂರು ಮೇಳದ ಯಜಮಾನ ವೈ.ಕರುಣಾಕರ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.

ಪ್ರದರ್ಶನ ಮುಂದಕ್ಕೆ
'ಜನವರಿ 1ರಂದು ಆದಿಉಡುಪಿ ಬೈಪಾಸ್ ಬಳಿ ಸಾಲಿಗ್ರಾಮ ಮೇಳದ ಕಲಾವಿದರಿಂದ ಅಪರೂಪದ ಅಟ್ಟಳಿಗೆ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ರಾಜ್ಯ ಸರ್ಕಾರವು ನೈಟ್ ಕರ್ಫ್ಯೂ ವಿಧಿಸಿದ್ದರಿಂದ ಪ್ರದರ್ಶನವನ್ನು ಮುಂದೂಡಲಾಗಿದೆ‌. ಕಳೆದ 2 ತಿಂಗಳಿನಿಂದ ತಯಾರಿ ನಡೆಸಲಾಗಿತ್ತು. ಕಾಲಮಿತಿಯ ಈ ಪ್ರಸಂಗದ ಪ್ರದರ್ಶನ ಕಷ್ಟ. ನಿಯಮಗಳು ಸಡಿಲಿಕೆಯಾದ ಕೂಡಲೇ ಪ್ರದರ್ಶನ ಆಯೋಜಿಸಲಾಗುವುದು' ಎಂದು ಪಡುಅಲೆವೂರು ಯಕ್ಷಾಭಿಮಾನಿ ಬಳಗದ ಶ್ರೀವತ್ಸ ಉಪಾಧ್ಯ ತಿಳಿಸಿದರು.

*

ನೈಟ್ ಕರ್ಫ್ಯೂ ಸಮಯದಲ್ಲಿ ಪೆರ್ಡೂರು ಮೇಳದಿಂದ ಆಯೋಜನೆಗೊಂಡಿದ್ದ ಪ್ರದರ್ಶನಗಳು ಮುಂದೂಡಿಕೆ ಆದಾಗ ಅಭಿಮಾನಿಗಳು ಜೊತೆಯಾಗಿ 'ಪೆರ್ಡೂರು ಯಕ್ಷೋತ್ಸವ'ದ ಮೂಲಕ ಯಕ್ಷಗಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
–ಅಭಿಮಾನಿಗಳು, ಪೆರ್ಡೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT