ಶನಿವಾರ, ಜುಲೈ 24, 2021
22 °C

ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ: ತನಿಖೆಗೆ ಎಸ್‌ಪಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಕಾರ್ಕಳ ತಾಲ್ಲೂಕಿನ ಹಿರ್ಗಾನದ ರಾಧಾಕೃಷ್ಣ ನಾಯಕ್ ಅವರ ಮೇಲೆ ವರ್ಷದ ಹಿಂದಿನ ಸುಳ್ಳು ಪ್ರಕರಣದ ಕಾರಣವಿಟ್ಟುಕೊಂಡು ಕಾರ್ಕಳ ನಗರ ಠಾಣೆಗೆ ಕರೆಸಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಆರೋಪಿಸಿದ್ದಾರೆ.

ರಾಧಾಕೃಷ್ಣ ನಾಯಕ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಕಾರ್ಕಳ ನಗರ ಠಾಣೆಯ ಪಿಎಸ್‌ಐ ವರ್ತನೆ ಖಂಡನೀಯ. ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವರ್ಷದ ಹಿಂದೆ ರಾಧಾಕೃಷ್ಣ ನಾಯಕ್‍ ಹೆಸರಲ್ಲಿ ಫೇಸ್‍ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ದೇಶದ ಸೈನಿಕರ ಬಗ್ಗೆ ಅವಹೇಳನಕಾರಿ ಬರಹ ಹರಿಬಿಡಲಾಗಿತ್ತು. ಈ ಸಂಬಂಧ ರಾಧಾಕೃಷ್ಣ ಸೈಬರ್ ಅಪರಾಧ ಠಾಣೆಗೆ ದೂರು ಕೂಡ ನೀಡಿದ್ದರು. ಆದರೆ, ಕಾರ್ಕಳ ನಗರ ಠಾಣಾಧಿಕಾರಿ ನಕಲಿ ಖಾತೆ ಸೃಷ್ಟಿಸಿ ಸೈನಿಕರಿಗೆ ಅವಹೇಳನ ಮಾಡಿದವರನ್ನು ಪತ್ತೆಹಚ್ಚಿ ಶಿಕ್ಷಿಸುವ ಬದಲು, ದೂರುದಾರನನ್ನೇ ಠಾಣೆಗೆ ಕರೆಸಿ ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಅಡಗಿದೆ ಎಂದು ದೂರಿದ್ದಾರೆ.

ಹಲ್ಲೆ ಘಟನೆ ಸಂಬಂಧ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಅಮಾಯಕ ಕಾರ್ಯಕರ್ತನಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಜಿಲ್ಲಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.

ತನಿಖೆಗೆ ಡಿಎಸ್‌ಪಿಗೆ ಸೂಚನೆ: ಎಸ್‌ಪಿ

ಕಾರ್ಕಳದ ಹಿರ್ಗಾನದ ರಾಧಾಕೃಷ್ಣ ನಾಯಕ್ ಮೇಲೆ ಕಾರ್ಕಳ ನಗರ ಠಾಣೆ ಪಿಎಸ್‌ಐ ನಡೆಸಿದ್ದಾರೆ ಎನ್ನಲಾದ ಹಲ್ಲೆ ಘಟನೆ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕುಂದಾಪುರ ಡಿಎಸ್‌ಪಿಗೆ ಸೂಚಿಸಲಾಗಿದೆ. ವರದಿ ಸಲ್ಲಿಕೆಯಾದ ನಂತರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಎಸ್‌ಪಿ ಎನ್‌.ವಿಷ್ಣುವರ್ಧನ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು