ಮಂಗಳವಾರ, ಏಪ್ರಿಲ್ 20, 2021
32 °C

ಕರಾವಳಿ ವೈದ್ಯನಿಗೆ ಪ್ರಧಾನಿ ಮೋದಿ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಬ್ರಹ್ಮಾವರ ತಾಲ್ಲೂಕು ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಮೈದಾನದಲ್ಲಿ ಭಾನುವಾರ ನಡೆದ ಜನೌಷಧ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯ ಡಾ.ಪದ್ಮನಾಭ ಕಾಮತ್ ಭಾಗವಹಿಸಿದ್ದರು.

ಸಂವಾದದಲ್ಲಿ ಮಾತನಾಡಿದ ಡಾ.ಪದ್ಮನಾಭ ಕಾಮತ್‌ ‘ಮೂರು ವರ್ಷಗಳಿಂದ ಜನೌಷಧ ಅಭಿಯಾನದ ಭಾಗವಾಗಿರುವುದಕ್ಕೆ ಸಂತಸವಿದೆ. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ತುರ್ತುಚಿಕಿತ್ಸೆ ಸಿಗದೆ ಹೃದಯಾಘಾತದಿಂದ  ಮೃತಪಡುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಈ ಸಮಸ್ಯೆಗೆ ಮೂಲದಲ್ಲಿಯೇ ಪರಿಹಾರ ನೀಡಲು ಜನೌಷಧ ಕೇಂದ್ರಗಳಲ್ಲಿ ಇಸಿಜಿ ಯಂತ್ರ ಅಳವಡಿಸಲಾಯಿತು. ಆರಂಭದಲ್ಲಿ ಕೆಲವರು ಹುಚ್ಚು ಎಂದು ಮೂದಲಿಸಿದರು. ದೃತಿಗೆಡದೆ ಮತ್ತೆ 6 ಜನೌಷಧ ಕೇಂದ್ರಗಳಲ್ಲಿ ಇಸಿಜಿ ಯಂತ್ರಗಳನ್ನು ಹಾಕಿದೆ. ಅದರ ಫಲವಾಗಿ ಇದುವರೆಗೂ 100ಕ್ಕೂ ಹೆಚ್ಚು ಜನರಲ್ಲಿ ಹೃದ್ರೋಗ ಸಮಸ್ಯೆ ಪತ್ತೆ ಹಚ್ಚಿ ಅವರ ಜೀವ ಉಳಿಸಲು ನೆರವಾಯಿತು’ ಎಂದು ಪ್ರಧಾನಿ ಮೋದಿ ಅವರಿಗೆ ವೈದ್ಯ ಡಾ.ಪದ್ಮನಾಭ ಕಾಮತ್ ವಿವರಿಸಿದರು.

‘ಜನೌಷಧಕ್ಕೆ ಬೆಂಬಲವಾಗಿ ನಿಂತಿದ್ದಕ್ಕೆ ಹಲವು ಪ್ರಶ್ನೆಗಳು, ಟೀಕೆಗಳು ಎದುರಾದವು. ಇದಕ್ಕೆಲ್ಲ ಜನೌಷಧ ಜನಪಯೋಗಿ ಎಂಬುದು ನನ್ನ ಉತ್ತರವಾಗಿತ್ತು’ ಎಂದು ಡಾ.ಪದ್ಮನಾಭ ಕಾಮತ್ ಪ್ರಧಾನಿಗೆ ವಹೇಳಿದರು.

ಜನೌಷಧ ಕೇಂದ್ರಗಳಲ್ಲಿ ಇಸಿಜಿ ಸೇವೆ ಆರಂಭಿಸಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ ‘ನಮ್ಮ ಕಲ್ಪನೆಗೆ ನೀವು ಮೂರ್ತರೂಪ ಕೊಟ್ಟಿದ್ದೀರಿ’ ಎಂದು ಅಭಿನಂದಿಸಿದರು.

ಸಂವಾದದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಾ.ಪದ್ಮನಾಭ್ ಕಾಮತ್‌ ‘ಆರಂಭದಲ್ಲಿ ಜನೌಷಧದ ಬಗ್ಗೆ ಜನರಲ್ಲಿ ಕೀಳರಿಮೆ ಇತ್ತು. ಜನೌಷಧ ಬಳಕೆಗೆ ಚೀಟಿ ಬರೆದಾಗ ವೈದ್ಯರಿಗೆ ಬಗ್ಗೆ ಹುಚ್ಚು ಹಿಡಿದಿದೆ ಎಂದು ನಿಂದಿಸಿದರು. ಈಗ ನಿಧಾನವಾಗಿ ಜನೌಷಧದ ಮಹತ್ವದ ಬಗ್ಗೆ ಸಮಾಜಕ್ಕೆ ಅರಿವಾಗುತ್ತಿದೆ. ಹಣವಿದ್ದವರೂ ಜನೌಷಧದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ’ ಎಂದರು.

2018ರಲ್ಲಿ ಕಾರ್ಡಿಯಾಲಜಿ ಅಟ್ ಡೋರ್‌ಸ್ಟೆಪ್ ಎಂಬ ಆರೋಗ್ಯ ಸೇವೆಯನ್ನು ಗ್ರಾಮೀಣ ಭಾಗಗಳಲ್ಲಿ ಚಾಲನೆ ನೀಡಲಾಯಿತು. ಬಳಿಕ ಅದರ ಅಂಗಸಂಸ್ಥೆಯಾಗಿ ಪಿಎಂಬಿಜೆಕೆ ಕಾಯಕಲ್ಪ ಕಾರ್ಯಕ್ರಮ ಆರಂಭಿಸಲಾಯಿತು. ಈಗ 6 ಜಿಲ್ಲೆಗಳ ಜನೌಷಧ ಕೇಂದ್ರಗಳಲ್ಲಿ ಇಸಿಜಿ ಸೌಲಭ್ಯ ದೊರೆಯುತ್ತಿದೆ ಎಂದು ಡಾ.ಪದ್ಮನಾಭ ಕಾಮತ್ ಹೇಳಿದರು.

ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದದ ಬಳಿಯ ಜನೌಷಧ ಕೇಂದ್ರದ ಮಾಲೀಕರಾದ ಸುಂದರ ಪೂಜಾರಿ ಹಾಗೂ ಜನೌಷಧ ಫಲಾನುಭವಿ ಅಂಗವಿಕಲರಾದ ಸುಧೀರ್ ಪೂಜಾರಿ ಸಹ ಪ್ರಧಾನಿ ಜತೆ ಸಂವಾದಕ್ಕೆ ಆಯ್ಕೆಯಾಗಿದ್ದರು. ಇಬ್ಬರಿಗೂ ಮಾತನಾಡಲು ಅವಕಾಶ ಸಿಗಲಿಲ್ಲ.

ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕ ರಘುಪತಿ ಭಟ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು