ಉಡುಪಿ: ‘ಯಾವುದೇ ಅನುದಾನ ಬಿಡುಗಡೆ ಮಾಡದೆ ಸರ್ಕಾರವು ಕರಾವಳಿ ಜಿಲ್ಲೆಗಳನ್ನು ನಿರ್ಲಕ್ಷಿಸಿದ್ದು, ಈ ಧೋರಣೆ ಮುಂದುವರಿಸಿದರೆ ಮೂರೂ ಜಿಲ್ಲೆಗಳ ಶಾಸಕರು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ’ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.
ನಗರದ ಕಿದಿಯೂರು ಹೋಟೆಲ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಲ್ಕೊರೆತಕ್ಕೆ ಪರಿಹಾರ ಹಾಗೂ ರಸ್ತೆಗಳ ದುರಸ್ತಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
10 ದಿನಗಳೊಳಗೆ ಮುಖ್ಯಮಂತ್ರಿ ಈ ಕುರಿತು ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಧರಣಿ ನಡೆಸುತ್ತೇವೆ. ಸರ್ಕಾರ ಉದ್ಧಟತನ ತೋರಿದರೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನಾಂದೋಲನ ಹಮ್ಮಿಕೊಳ್ಳಲಾಗುವುದು ಎಂದರು.
ಕಳೆದ ವರ್ಷ ಮುಖ್ಯಮಂತ್ರಿ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯಗಳು ಅನುಷ್ಠಾನಕ್ಕೆ ಬಂದಿಲ್ಲ. ಈ ಬಾರಿಯ ಮಳೆಗೆ ಉಡುಪಿ ಜಿಲ್ಲೆಯಲ್ಲಿ ₹240 ಕೋಟಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತ ವರದಿ ಸಲ್ಲಿಸಿದರೂ ಈ ತನಕ ನಯಾ ಪೈಸೆ ಬಿಡುಗಡೆಯಾಗಿಲ್ಲ ಎಂದರು.
ತಾಲ್ಲೂಕು ಮಟ್ಟದ ಆಧಿಕಾರಿಗಳನ್ನು ನಿರಂತರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಶಾಸಕರ ಜೊತೆ ಜಿಲ್ಲಾಡಳಿತವು ಅಸಹಕಾರ ಧೋರಣೆ ಮುಂದುವರಿಸಿದೆ ಎಂದರು.
ಸರ್ಕಾರವು ಸುತ್ತೋಲೆ ಹೊರಡಿಸುವ ಮೂಲಕ ರಾಜ್ಯ ಮಟ್ಟದಲ್ಲಿ11 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲು ಹೊರಟಿದೆ. ಜಿಲ್ಲೆಯಲ್ಲೂ ಅಂದಾಜು 40 ಸಾವಿರದಷ್ಟು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಮುಂದಾಗಿದ್ದು, ಇದರ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನ ನೆಪದಲ್ಲಿ ಜನವಸತಿ ಪ್ರದೇಶಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಾರದು. ಈ ಕುರಿತಂತೆ ವ್ಯಾಪಕ ಚರ್ಚೆ ನಡೆಯಬೇಕು ಎಂದು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತರಿದ್ದರು.