ಉಡುಪಿಯಲ್ಲಿ ನಾಗರಿಕ ರಕ್ಷಣಾ ಘಟಕ

7
ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಗೃಹರಕ್ಷಕದಳ, ನಾಗರಿಕ ರಕ್ಷಣೆ ಇಲಾಖೆ ಐಜಿಪಿ ಡಿ.ರೂಪಾ ಮನವಿ

ಉಡುಪಿಯಲ್ಲಿ ನಾಗರಿಕ ರಕ್ಷಣಾ ಘಟಕ

Published:
Updated:
Deccan Herald

ಉಡುಪಿ: ಬೆಂಗಳೂರು ಮಾದರಿಯಲ್ಲಿ ಉಡುಪಿ ಹಾಗೂ ಮಂಗಳೂರಿನಲ್ಲಿ ನಾಗರಿಕ ರಕ್ಷಣಾ ಘಟಕ ರಚಿಸಲಾಗುವುದು ಎಂದು ರಾಜ್ಯ ಗೃಹರಕ್ಷಕದಳ ಹಾಗೂ ನಾಗರಿಕ ರಕ್ಷಣೆ ಇಲಾಖೆ ಐಜಿಪಿ ಡಿ.ರೂಪಾ ಹೇಳಿದರು.‌

ಜಿಲ್ಲಾ ಗೃಹರಕ್ಷಕ ದಳದ ಕಚೇರಿಗೆ ಬುಧವಾರ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ನಾಗರಿಕ ರಕ್ಷಣಾ ಘಟಕದ ಕಟ್ಟಡ ನಿರ್ಮಾಣವಾಗಿದ್ದು, ಮುಖ್ಯ ವಾರ್ಡ್‌ನ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಕಾರವಾರದಲ್ಲಿ 10 ಮಂದಿ, ಮಂಗಳೂರಿನಲ್ಲಿ ಮೂವರು, ಉಡುಪಿಯಲ್ಲಿ ಇಬ್ಬರು ಅರ್ಜಿ ಹಾಕಿದ್ದಾರೆ. ನೇಮಕಾತಿ ಸಮಿತಿ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಸಲಿದೆ ಎಂದರು.

ಪ್ರಾಕೃತಿಕ ವಿಕೋಪಗಳು ಎದುರಾದಾಗ ನಾಗರಿಕರ ರಕ್ಷಣೆಗೆ ಧಾವಿಸುವುದು, ಪ್ರವಾಹ ಬಂದಾಗ, ಲಭ್ಯ ವಸ್ತುಗಳನ್ನು ಬಳಸಿ ತೆಪ್ಪ ಕಟ್ಟುವುದು, ಬೋಟ್‌ಗಳನ್ನು ನಿರ್ಮಿಸುವುದು, ತುರ್ತು ರಕ್ಷಣಾ ಕಾರ್ಯಕ್ಕೆ ಅಗತ್ಯ ಸಾಮಾಗ್ರಿಗಳನ್ನು ಸಿದ್ಧಪಡಿಸುವ ಬಗ್ಗೆ ನಾಗರಿಕ ರಕ್ಷಣಾ ಘಟಕಕ್ಕೆ ತರಭೇತಿ ನೀಡಲಾಗುವುದು ಎಂದು ರೂಪಾ ತಿಳಿಸಿದರು.

ಬೆಂಗಳೂರಿನ ಹಲಸೂರಿನಲ್ಲಿರುವ ಕೇಂದ್ರ ಹಾಗೂ ನಾಗ್ಪುರದಲ್ಲಿರುವ ನಾಗರಿಕ ರಕ್ಷಣಾ ಕೇಂದ್ರದಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ನಾಗರಿಕ ರಕ್ಷಣಾ ಘಟಕ ನಿರ್ಮಾಣವಾದ ಬಳಿಕ ಜಿಲ್ಲೆಯ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಘಟಕಕ್ಕೆ ಸೇರಬಹುದು ಎಂದರು.‌

ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರಾಕೃತಿಕ ವಿಕೋಪಗಳು ಎದುರಾದಾಗ ನಾಗರಿಕರ ರಕ್ಷಣೆಗೆ ಧಾವಿಸುವುದು, ಸಮಿತಿಯ ಸದಸ್ಯರ ಕರ್ತವ್ಯ. ಅವರ ಸೇವೆಗೆ ಪ್ರತಿಯಾಗಿ ಸರ್ಕಾರ ಗೌರವ ಧನವನ್ನೂ ನೀಡಲಿದೆ ಎಂದರು.

ಬೆಂಗಳೂರಿನಲ್ಲಿ ವೈದ್ಯರು, ಸಾಫ್ಟ್‌ವೇರ್ ಉದ್ಯೋಗಿಗಳು, ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ನಾಗರಿಕ ರಕ್ಷಣಾ ಘಟಕಕ್ಕೆ ಸೇರ್ಪಡೆಯಾಗಿದ್ದಾರೆ. ಉಡುಪಿಯ ಜನರೂ ಇಲಾಖೆಯ ಜತೆ ಕೈಜೋಡಿಸಬೇಕು ಎಂದು ರೂಪಾ ಮನವಿ ಮಾಡಿದರು.

ಖಾಯಂ ಸಾಧ್ಯವಿಲ್ಲ:

ಕಾಯ್ದೆಯ ಪ್ರಕಾರ ಅವಶ್ಯಕತೆ ಇದ್ದಾಗ ಮಾತ್ರ ಗೃಹರಕ್ಷಕ ಸಿಬ್ಬಂದಿಯ ಸೇವೆಯನ್ನು ಬಳಸಿಕೊಳ್ಳಲು ಅವಕಾಶವಿದೆ. ಹೋಂ ಗಾರ್ಡ್ಸ್‌ಗಳ ಸೇವೆಯನ್ನು ಖಾಯಂಗೊಳಿಸಲು ಸಾಧ್ಯವಿಲ್ಲ. ಖಾಯಂ ಆಗಬೇಕಾದರೆ ಕಾಯ್ದೆಯನ್ನೇ ಬದಲಾಯಿಸಬೇಕಾಗುತ್ತದೆ. ನಿಷ್ಕಾಮ ಸೇವೆಗೆ ಪ್ರತಿಯಾಗಿ ಅವರಿಗೆ ಗೌರವಧನ ನೀಡಲಾಗುತ್ತಿದೆ ಎಂದು ರೂಪಾ ಹೇಳಿದರು.

ರಾಜ್ಯದಲ್ಲಿ 25 ಸಾವಿರ ಹೋಂ ಗಾರ್ಡ್ಸ್‌ಗಳಿದ್ದು, ಅವರಲ್ಲಿ 12 ಸಾವಿರ ಮಂದಿಗೆ ವಿವಿಧ ಇಲಾಖೆಗಳಲ್ಲಿ ಪ್ರತಿನಿತ್ಯ ಕೆಲಸ ನೀಡಲಾಗುತ್ತಿದೆ. ಕಳೆದ ಚುನಾವಣೆ ಸಂದರ್ಭ ಹೋಂಗಾರ್ಡ್ಸ್‌ಗಳ ದಿನಭತ್ಯೆಯನ್ನು ಸರ್ಕಾರ ಹೆಚ್ಚಿಸಿದೆ. ಈಗ, ಮತ್ತೆ ಭತ್ಯೆ ಹೆಚ್ಚಳಕ್ಕೆ ಸಿಬ್ಬಂದಿ ಮನವಿ ಮಾಡಿದ್ದು, ಸದ್ಯ ಸಾಧ್ಯವಿಲ್ಲ; ಮುಂದೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಸಮವಸ್ತ್ರ ಪೂರೈಕೆ, ಸಮಾನವಾಗಿ ಸೇವೆಯನ್ನು ಬಳಸಿಕೊಳ್ಳಲು ರೊಟೆಷನ್‌ ಪಾಲಿಸಿ ಜಾರಿ ಮಾಡಲು ಸಾಫ್ಟ್‌ವೇರ್ ಸಿದ್ಧಪಡಿಸಲಾಗುತ್ತಿದೆ. ಮೂರು ತಿಂಗಳಿನಿಂದ ಗೌರವಧನ ಬಿಡುಗಡೆಯಾಗದಿರುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳಿಗೆ ಅನುದಾನ ಬಿಡುಗಡೆಯಾಗದ ಕಾರಣ ಅಲ್ಲಿ ನಿಯೋಜಿತವಾಗಿರುವ ಗೃಹರಕ್ಷಕ ದಳದ ಸಿಬ್ಬಂದಿಗೆ ಸಮಸ್ಯೆ ಎದುರಾಗಿದೆ. ಶೀಘ್ರವೇ ಬಗೆಹರಿಯಲಿದೆ ಎಂದರು.

ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ಗೃಹರಕ್ಷಕರಿಗೆ ಆದ್ಯತೆ ನೀಡಬೇಕು ಎಂಬ ಪ್ರಸ್ತಾವವನ್ನು ಸರ್ಕಾರ ಒಪ್ಪಿಲ್ಲ ಎಂದರು.

ಗೃಹರಕ್ಷಕದಳದಲ್ಲೂ ಸವಾಲುಗಳಿವೆ. ಇಲಾಖೆಯಲ್ಲಿ ಹಣಕಾಸು ಅಕ್ರಮಗಳನ್ನು ತಡೆಯಲು ಸಿಬ್ಬಂದಿಗೆ ಕಡ್ಡಾಯ ಹಾಜರಾತಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ, ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗಷ್ಟೇ ವೇತನ ಸಿಗಲಿದ್ದು, ಹಣ ದುರುಪಯೋಗಕ್ಕೆ ತಡೆ ಬೀಳಲಿದೆ ಎಂದು ರೂಪಾ ಹೇಳಿದರು.

ಜಿಲ್ಲಾ ಕಮಾಂಡೆಂಟ್‌ ಡಾ.ಪ್ರಶಾಂತ್ ಶೆಟ್ಟಿ, ಸೆಕೆಂಡ್‌ ಇನ್ ಕಮಾಂಡೆಂಟ್‌ ರಾಜೇಶ್‌.ಕೆ.ಸಿ, ಉಪ ಕಮಾಂಡೆಂಟ್‌ ಡಿ.ರಮೇಶ್‌ ಅವರೂ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !