ಶನಿವಾರ, ಜುಲೈ 24, 2021
28 °C
‘ಮಾದರಿ’ ಸರ್ಕಾರಿ ಕ್ವಾರಂಟೈನ್‌

ಉಡುಪಿ: ಜಾಲತಾಣಗಳಲ್ಲಿ ಸದ್ದು ಮಾಡಿದ ಕಾರ್ಕಳದ ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Coronavirus

ಉಡುಪಿ: ಸ್ನಾನಕ್ಕೆ ಬಿಸಿನೀರು, ಸಮಯಕ್ಕೆ ಸರಿಯಾಗಿ ಚಹಾ ತಿಂಡಿ, ಸ್ವಚ್ಛ ಶೌಚಾಲಯಗಳು, ಮಲಗಲು ಚಾಪೆ, ಹೊದಿಕೆ..ಹೀಗೆ, ಮನೆಯಲ್ಲಿ ಸಿಗುತ್ತಿದ್ದ ಎಲ್ಲ ಸೌಲಭ್ಯಗಳು ಇಲ್ಲಿ ಸಿಕ್ಕಿವೆ ಎಂದು ಕಾರ್ಕಳದ ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳಲ್ಲಿರುವವರು ಸಂತಸ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಮುಂಬೈನಿಂದ ಬರಿಗೈಲಿ ತವರಿಗೆ ಬಂದಾಗ ಮನಸ್ಸು ಭಾರವಾಗಿತ್ತು. ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಹೇಗೆ ಉಳಿಯುವುದು ಎಂಬ ಚಿಂತೆ ಇತ್ತು. ಈಗ ಮನಸ್ಸು ನಿರಾಳವಾಗಿದೆ, ಹೋಟೆಲ್‌ಗಳಿಗಿಂತಲೂ ಉತ್ತಮ ವ್ಯವಸ್ಥೆ ಇದೆ. ಒಂದು ಪೈಸೆ ಖರ್ಚಿಲ್ಲದೆ ಸೌಲಭ್ಯಗಳು ಸಿಗುತ್ತಿವೆ ಎಂದು ಕ್ವಾರಂಟೈನ್‌ ನಿವಾಸಿಗಳು ಸಂತಸ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕಾರ್ಕಳ ತಹಶೀಲ್ದಾರ್‌ ಪುರಂದರ್ ಹೆಗಡೆ, ‘ಮುಂಬೈನಿಂದ ನೊಂದು ತವರಿಗೆ ಮರಳುವವರಿಗೆ ಮತ್ತಷ್ಟು ಕಷ್ಟಕೊಡದಂತೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಮೊದಲೇ ಶಾಸಕ ಸುನೀಲ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಅದರಂತೆ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದೆವು’ ಎಂದು ತಿಳಿಸಿದರು.

ಮುಂಬೈನಿಂದ ಉಡುಪಿಗೆ ಬಂದವರಿಗೆ ಗಡಿಯಲ್ಲಿ ಹೆಚ್ಚು ಹೊತ್ತು ಕಾಯಿಸದೆ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ನೋಂದಾಯಿಸಿಕೊಂಡು ನೇರವಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಲಾಯಿತು. ಅಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಸಮಸ್ಯೆಗಳು ಬಾರದಂತೆ ಪ್ರತಿ ಕೇಂದ್ರಕ್ಕೆ ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಹಾಗಾಗಿ, ಸಮಸ್ಯೆ ಉದ್ಭವಿಸಲಿಲ್ಲ ಎಂದರು.

ದೇವಸ್ಥಾನಗಳಿಂದ ಸರದಿಯಲ್ಲಿ ಮಧ್ಯಾಹ್ನ ರಾತ್ರಿ ರುಚಿ ಹಾಗೂ ಶುಚಿಯಾದ ಊಟ ಪೂರೈಕೆಯಾಗುತ್ತಿತ್ತು. ಉದ್ಯಮಿಗಳಿಂದ ನೆರವು ಪಡೆದು ಕ್ವಾರಂಟೈನ್‌ ಕೇಂದ್ರಗಳಲ್ಲಿ ಶುಚಿತ್ವಕ್ಕೆ ಒತ್ತು, ಬಿಸಿನೀರಿನ ವ್ಯವಸ್ಥೆ ಮಾಡಲಾಯಿತು. ಹೋಟೆಲ್‌ಗಳಲ್ಲಿ ಹಣಕೊಟ್ಟು ಪಡೆಯುವ ಸೌಲಭ್ಯಗಳೆಲ್ಲ ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಉಚಿತವಾಗಿ ಸಿಗುತ್ತಿದ್ದವು. ಇದರಿಂದ ಸಂತಸಗೊಂಡು ಅಲ್ಲಿ ಉಳಿದವರೆಲ್ಲ ಸೇರಿ ವಿಡಿಯೋ ಮಾಡಿದ್ದಾರೆ. https://youtu.be/0s-qih6oUfw ಈ ಲಿಂಕ್‌ನಲ್ಲಿ ವಿಡಿಯೋ ವೀಕ್ಷಿಸಬಹುದು ಎಂದು ತಹಶೀಲ್ದಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು