ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಗೆ ಶೀಘ್ರ ನೂತನ ಉಪ ವಿಭಾಗ

ಕಂದಾಯ ಸಚಿವ ಆರ್. ಅಶೋಕ್‌ ಭರವಸೆ
Last Updated 8 ಜನವರಿ 2020, 15:37 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರ ಉಪವಿಭಾಗ ವಲಯದ ಕಾರ್ಯಭಾರ ಕಡಿಮೆ ಮಾಡಲು ಉಡುಪಿಯಲ್ಲಿ ಶೀಘ್ರ ನೂತನ ಉಪವಿಭಾಗ (ಎಸಿ ಕಚೇರಿ) ರಚಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್ ಭರವಸೆ ನೀಡಿದರು.

ಬುಧವಾರ ಉಡುಪಿಯ ಮಿನಿ ವಿಧಾನಸೌಧ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಡುಪಿ ಉಪ ವಿಭಾಗ ರಚನೆ ದಶಕಗಳ ಬೇಡಿಕೆಯಾಗಿದ್ದು, ಶೀಘ್ರ ಬಗೆಹರಿಸಲಾಗುವುದು ಎಂದರು.

ಬಡವರನ್ನು ಅಲೆಸಬೇಡಿ:ಒಂದೇ ಸೂರಿನಡಿ ಕಂದಾಯ ಇಲಾಖೆಯ ಎಲ್ಲ ಸೌಲಭ್ಯಗಳು ಜನರಿಗೆ ಸಿಗಬೇಕು ಎಂಬ ಉದ್ದೇಶದಿಂದ ಪ್ರತಿ ತಾಲ್ಲೂಕಿನಲ್ಲಿ ಮಿನಿ ವಿಧಾನಸೌಧಗಳನ್ನು ನಿರ್ಮಿಸಲಾಗುತ್ತಿದೆ. ಉಡುಪಿ, ಬ್ರಹ್ಮಾವರದಲ್ಲಿ ತಲಾ ₹ 10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡಗಳು ನಿರ್ಮಾಣವಾಗಿವೆ.

ಹೆಬ್ರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ನಿಗಧಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಂಡು ಬಡವರಿಗೆ ಸರ್ಕಾರದ ಸೇವೆಗಳು ಸಿಗುವಂತಾಗಲಿ. ಸಾರ್ವಜನಿಕರನ್ನು ಕಚೇರಿಯಿಂದ ಕಚೇರಿಗೆ ಅಲೆಸದೆ ಕೆಲಸ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಶವ ಸಂಸ್ಕಾರಕ್ಕೆ ಆರ್ಥಿಕ ನೆರವು:ಶವ ಸಂಸ್ಕಾರಕ್ಕೆ ಆರ್ಥಿಕ ನೆರವು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳು 7 ವರ್ಷ ಕಳೆದರೂ ವಿಲೇವಾರಿ ಆಗಿಲ್ಲ. ಬಾಕಿ ಅರ್ಜಿಗಳ ವಿಲೇವಾರಿಗೆ ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಯಿಂದ ಒಪ್ಪಿಗೆ ಪಡೆದಿದ್ದು ₹ 70 ಕೋಟಿ ಬಿಡುಗಡೆಯಾಗಿದೆ. ಬಡವರು ಮೃತಪಟ್ಟ 24 ಗಂಟೆಗಳಲ್ಲಿ ಶವ ಸಂಸ್ಕಾರಕ್ಕೆ ಆರ್ಥಿಕ ನೆರವು ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಅಶೋಕ್ ತಿಳಿಸಿದರು.

ಸ್ಮಶಾನಕ್ಕೆ ಜಾಗ:ಪ್ರತಿ ಹಳ್ಳಿಗಳಲ್ಲಿ ಸ್ಮಶಾನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಅಂತ್ಯಸಂಸ್ಕಾರಕ್ಕೆ ಜಾಗದ ಸಮಸ್ಯೆ ಇರುವ ಗ್ರಾಮಗಳಿಂದ ಅರ್ಜಿಗಳು ಬಂದರೆ ತಕ್ಷಣ ಸ್ಮಶಾನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ,ಕಂದಾಯ ಇಲಾಖೆ ವ್ಯಾಪ್ತಿಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಅಗ್ರಸ್ಥಾನ ಪಡೆದುಕೊಂಡಿದೆ. ಮ್ಯುಟೇಷನ್‌ ವಿತರಣೆ, ಭೂಪರಿವರ್ತನೆ ಅರ್ಜಿ ವಿಲೇವಾರಿ, ಡಿಸಿ ಹಾಗೂ ಎಸಿ ಕೋರ್ಟ್‌ಗಳಲ್ಲಿರುವ ಪ್ರಕರಣ ವಿಲೇವಾರಿ, ಆರ್‌ಟಿಸಿ ವಿತರಣೆಯಲ್ಲಿ ಇತರ ಜಿಲ್ಲೆಗಳಿಗಿಂತ ಮುಂದಿದೆ.

ಪ್ರತಿ ಬಾರಿ ಜಿಲ್ಲೆ ನಂಬರ್ ಸ್ಥಾನ ಪಡೆದಾಗ ಸರ್ಕಾರ ಹೊಗಳಿಕೆಯ ಪ್ರಮಾಣ ಪತ್ರ ನೀಡುತ್ತಿದ್ದು, ಇದರ ಬದಲು, ₹ 5 ಕೋಟಿ ಪ್ರೋತ್ಸಾಹ ಧನ ನೀಡಿದರೆ ಸಾರ್ವಜನಿಕರಿಗೆ ತ್ವರಿತವಾಗಿ ಸೇವೆಗಳನ್ನು ನೀಡಲು ಬಳಸಿಕೊಳ್ಳಲಾಗುವುದು. ಜತೆಗೆ ಇತರೆ ಜಿಲ್ಲೆಗಳಿಗೂ ಉತ್ತೇಜನ ಕೊಟ್ಟಂತಾಗುತ್ತದೆ ಎಂದು ಸಚಿವರು ಸಲಹೆ ನೀಡಿದರು.

ಬಡವರಿಗೆ ನಿವೇಶನ ಹಂಚಿಕೆಯಲ್ಲಿನ ನಿಯಮಗಳನ್ನು ಸರಳೀಕರಣಗೊಳಿಸಿ ಅಗ್ಗದ ದರದಲ್ಲಿ ನಿವೇಶನಗಳು ಸಿತುವಂತಾಗಬೇಕು ಎಂದು ಬೊಮ್ಮಾಯಿ ಕಂದಾಯ ಸಚಿವ ಅಶೋಕ್‌ಗೆ ಮನವಿ ಮಾಡಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರು ಹಂತದಲ್ಲಿದ್ದು, ಉಪ್ಪೂರು ಬಳಿ ಜಿಲ್ಲಾಡಳಿತ ಸರ್ಕಾರದ ಜಾಗ ಕೊಟ್ಟರೆ ಕಾಲೇಜು ಸ್ಥಾಪಿಸಬಹುದು. ಇದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜತೆಗೆ, ಜಿಲ್ಲೆಯಲ್ಲಿಯೇ ಕೃಷಿ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವರಿಗೆ ಮನವಿ ಮಾಡಿದರು.

ಉಡುಪಿ ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದ್ದು, ಉಡುಪಿಗೆ ಕಂದಾಯ ಉಪ ವಿಭಾಗದ ಅವಶ್ಯಕತೆ ಇದ್ದು, ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ರಘುಪತಿ ಭಟ್‌ ಮಾತನಾಡಿದರು. ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರು. ವಸತಿ ಸಚಿವ ಸೋಮಣ್ಣ, ಶಾಸಕ ಸುನೀಲ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್‌, ಜಿಲ್ಲಾ ಪಂಚಾಯಿಸಿ ಸಿಇಒ ಪ್ರೀತಿ ಗೆಹ್ಲೋಟ್‌, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT