ಶುಕ್ರವಾರ, ಜುಲೈ 23, 2021
24 °C
100 ವಿದ್ಯುತ್ ಕಂಬಗಳಿಗೆ ಹಾನಿ; ಹೆಬ್ರಿಯಲ್ಲಿ ಅತಿ ಹೆಚ್ಚು ಮಳೆ

ವರುಣನ ಅಬ್ಬರ: ಮನೆಗಳ ಮೇಲೆ ಮರಬಿದ್ದು ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರಾವಳಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಲವು ಮನೆಗಳು ಕುಸಿದು ಬಿದ್ದಿವೆ. ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.

ಕುಂದಾಪುರ ತಾಲ್ಲೂಕಿನ ಬಸ್ರೂರು ಗ್ರಾಮದ ಗಣಪಯ್ಯ ಗಾಣಿಗ ಅವರ ಮನೆಯ ಮೇಲೆ ಮರಬಿದ್ದಿದ್ದು, ವಾರಿಜ ಹಾಗೂ ವೆಂಕಮ್ಮಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗ್ರಾಮದಲ್ಲಿ ಲಕ್ಷ್ಮೀ ಎಂಬುವರ ಮನೆಯ ಮೇಲೆ, ಶಂಕರನಾರಾಯಣದ ಯೋಗೇಂದ್ರ ಬಳೆಗಾರ, ವಕ್ವಾಡಿ ಗ್ರಾಮದ ವನಜಾಕ್ಷಿ ಶೆಟ್ಟಿಗಾರ್‌, ಬಸ್ರೂರು ಗ್ರಾಮದ ಗಣಪಯ್ಯ ಗಾಣಿಗ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಬೈಂದೂರು ತಾಲ್ಲೂಕಿನ ಕಂಬದಕೋಣೆ ಗ್ರಾಮದಲ್ಲಿ ಮುಕಾಂಬು ಆಚಾರಿ ಅವರ ಮನೆಗೆ, ಶಿರೂರು ಗ್ರಾಮದಲ್ಲಿ ಮಹಮ್ಮದ್‌ ಗೌಸ್‌, ಲಕ್ಷ್ಮಣ ಮೊಗವೀರ ಅವರ ಮನೆಗೆ ಹಾನಿಯಾಗಿದೆ. ಕಾರ್ಕಳ ತಾಲ್ಲೂಕಿನ ಮುಲ್ಲಡ್ಕ ಗ್ರಾಮದಲ್ಲಿ ವಸಂತಿ ಅವರ ಮನೆಯ ಮೇಲೆ ಮರ ಬಿದ್ದಿದೆ.

ಬ್ರಹ್ಮಾವರ ತಾಲ್ಲೂಕಿನ ಹೇರಾಡಿ ಗ್ರಾಮದಲ್ಲಿ ಕೃಷ್ಣ ನಾಯ್ಕ, ಆರೂರು ಗ್ರಾಮದ ರಾಧಾಬಾಯಿ ಅವರ ನಿವಾಸ, ವಡ್ಡರ್ಸೆ ಗ್ರಾಮದ ಜಯ ಪೂಜಾರ್ತಿ ಅವರ ಮನೆಗಳು ಗಾಳಿಮಳೆಯಿಂದ ಹಾನಿಯಾಗಿದೆ.

ಕಾಪು ತಾಲ್ಲೂಕಿನ ಮೂಡಬೆಟ್ಟು ಗ್ರಾಮದಲ್ಲಿ ಲೀಲಾ ಅವರ ಮನೆ, ಶಿರ್ವ ಗ್ರಾಮದ ಎಂ.ಎಚ್.ಹುಸೇನ್, ಪಲಿಮಾರು ಗ್ರಾಮದ ಮಾಧವ ದೇವಾಡಿಗ, ಎಲ್ಲೂರು ಗ್ರಾಮದ ಬಶೀರ್ ಸಾಹೇಬ್, ಯೇಣಗುಡ್ಡೆ ಗ್ರಾಮದ ಅಮ್ಮಾಬಿ, ಕೋಟೆ ಗ್ರಾಮದ ಜಲಜ ಮರಕಾಲ್ತಿ, ಮೂಡಬೆಟ್ಟು ಗ್ರಾಮದ ವೆಂಕಟ ರಮಣ ಶೆಣೈ, ಕೋಟೆ ಗ್ರಾಮದ ಕಾಂಚನ ಅವರ ಮನೆಗಳಿಗೂ ಹಾನಿಯಾಗಿದೆ. ಕಾಪು ತಾಲ್ಲೂಕಿನ ಕೋಟೆ ಗ್ರಾಮದಲ್ಲಿರುವ ಗ್ರಾಮ ಕರಣಿಕರ ಕಚೇರಿ ಮೇಲೆ ಮರ ಬಿದ್ದಿದೆ.

100 ವಿದ್ಯುತ್ ಕಂಬಗಳು ಧರೆಗೆ:

ಬುಧವಾರ ಹಾಗೂ ಗುರುವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ 100 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಉಡುಪಿಯಲ್ಲಿ 74 ಹಾಗೂ ಕುಂದಾಪುರದಲ್ಲಿ 26 ಕಂಬಗಳಿಗೆ ಹಾನಿಯಾಗಿದೆ. 2.15 ಕಿ.ಮೀ ವಿದ್ಯುತ್ ಸಂಪರ್ಕ ಹಾಳಾಗಿದ್ದು, ₹ 10.55 ಲಕ್ಷ ಹಾನಿಯಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಂದಾಪುರ ತಾಲ್ಲೂಕಿನ ಕುಳಂಜೆ ಗ್ರಾಮದ ಶಂಕರ ನಾಯ್ಕ ಅವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಗಿಡಗಳಿಗೆ ಹಾನಿಯಾಗಿದೆ. ಹಲವು ಕಡೆ ಭತ್ತದ ನೇಜಿ ಮಳೆನೀರಿಗೆ ಕರಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ ಉಡುಪಿ ತಾಲ್ಲೂಕಿನಲ್ಲಿ 3.3 ಸೆಂ.ಮೀ, ಬ್ರಹ್ಮಾವರ ತಾಲ್ಲೂಕಿನಲ್ಲಿ 5 ಸೆಂ.ಮೀ, ಕಾಪು ತಾಲ್ಲೂಕಿನಲ್ಲಿ 2.8 ಸೆಂ.ಮೀ, ಕುಂದಾಪುರ ತಾಲ್ಲೂಕಿನಲ್ಲಿ 5.3 ಸೆಂ.ಮೀ, ಬೈಂದೂರು ತಾಲ್ಲೂಕಿನಲ್ಲಿ 4.7 ಸೆಂ.ಮೀ, ಕಾರ್ಕಳ ತಾಲ್ಲೂಕಿನಲ್ಲಿ 3.5 ಸೆಂ.ಮೀ, ಹೆಬ್ರಿ ತಾಲ್ಲೂಕಿನಲ್ಲಿ 11 ಸೆಂ.ಮೀ ಮಳೆ ಬಿದ್ದಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 5.2 ಸೆಂಮೀ ಮಳೆಯಾಗಿದೆ.

ಕಟಪಾಡಿಯಲ್ಲಿ ಮನೆಯ ಮೇಲೆ ಬಿದ್ದ ಮರ

ಕಟಪಾಡಿಯ ವಿಶ್ವನಾಥ ದೇವಸ್ಥಾನ ಎದುರಿಗಿದ್ದ ಬೃಹತ್ ಮರವೊಂದು ಬುಡಸಹಿತ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಕಾಪೌಂಡ್‌ ಹಾಗೂ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಯಾರಿಗೂ ಪೆಟ್ಟಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.