ಉಡುಪಿ | ರಂಗಭೂಮಿ ರಂಗೋತ್ಸವ ಫೆ.1ರಿಂದ 4

ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯ 58 ವರ್ಷಕ್ಕೆ ಕಾಲಿಡುತ್ತಿದ್ದು ಫೆ.1ರಿಂದ 4ರವರೆಗೆ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಪಟದಲ್ಲಿ ರಂಗಭೂಮಿ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಂಗಭೂಮಿ ರಂಗೋತ್ಸವದಲ್ಲಿ ಫೆ.1ರಂದು ಸಂಜೆ 5.45ಕ್ಕೆ ರಂಗಭೂಮಿ ರಂಗೋತ್ಸವವನ್ನು ಕರ್ನಾಟಕ ಜಾನಪದ ವಿವಿ ಕುಲಪತಿ ಪ್ರೊ.ಸಿ.ಟಿಗುರುಪ್ರಸಾದ್ ಉದ್ಘಾಟಿಸಲಿದ್ದಾರೆ.
ಮಾಹೆ ಸಹ ಕುಲಾಧಿಪತಿ ಅಧ್ಯಕ್ಷತೆ ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಕಲಾಂಜಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ರಂಗಾಯಣ ನಿರ್ದೇಶಕ ಸಂದೇಶ್ ಜವಳಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ್ ಭಾಗವಹಿಸಲಿದ್ದಾರೆ.
2ರಂದು ಸಂಜೆ 5ಕ್ಕೆ ಜಾನಪದ ವೈಭವ ಕಾರ್ಯಕ್ರಮ ನಡೆಯಲಿದ್ದು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನಿಂದ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಜಾನಪದ ಪ್ರತಿಭಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ವೇಳೆ ತಲ್ಲೂರು ಶಿವರಾಮ ಶೆಟ್ಟಿ ಅವರ ನಿತ್ಯ ಸತ್ಯ–ಬಾಳ ಬೆಳಕು ಕೃತಿ ಬಿಡುಗಡೆಯಾಗಲಿದೆ. ಬಳಿಕ ಸುಗಮ ಸಂಗೀತ ಕಾರ್ಯಕ್ರಮ ಇರಲಿದೆ.
3ರಂದು ಸಂಜೆ 5.45ಕ್ಕೆ 43ನೇ ರಾಜ್ಯಮಟ್ಟದ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದ್ದು, ಸ್ಪರ್ಧೆಯ ಪ್ರಥಮ ಪ್ರಶಸ್ತಿ ವಿಜೇತ ನಾಟಕವಾದ ವಾಲಿ ವಧೆ ಮರು ಪ್ರದರ್ಶನ ಇರಲಿದೆ.
4ರಂದು ಕಲಾ ಪೋಷಕರಾದ ಉದ್ಯಮಿ ಜಿ.ಶಂಕರ್ ಅವರಿಗೆ ‘ಕರುನಾಡ ಕರುಣಾಳು’ ಬಿರುದಿನೊಂದಿಗೆ ರಂಗಭೂಮಿ ಉಡುಪಿಯ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿ.ಶಂಕರ್ ಅವರೊಂದಿಗೆ ಸಂವಾದ ನಡೆಯಲಿದೆ. ಕಾರ್ಯಕ್ರಮವನ್ನು ಉದ್ಯಮಿ ರಂಜನ್ ಕಲ್ಕೂರ ಉದ್ಘಾಟಿಸಲಿದ್ದಾರೆ. ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಂದ ಕಾರ್ಯಕ್ರಮ ನಡೆಯಲಿದೆ ಎಂದು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು, ಎನ್.ರಾಜಗೋಪಾಲ ಬಲ್ಲಾಳ್, ಸಹ ಕಾರ್ಯದರ್ಶಿ ಶ್ರೀಪಾದ್ ಹೆಗಡೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.