ಶುಕ್ರವಾರ, ಜನವರಿ 27, 2023
27 °C
ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಡಾ.ಎನ್‌.ತಿರುಮಲೇಶ್ವರ ಭಟ್‌

ಅನ್ಯಭಾಷೆಗಳ ಸ್ಪರ್ಶದಿಂದ ಕನ್ನಡಕ್ಕೆ ಧಕ್ಕೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಂಸ್ಕೃತ ಹಾಗೂ ಇಂಗ್ಲೀಷ್‌ ಸ್ಪರ್ಶದಿಂದ ಕನ್ನಡದ ಮಡಿವಂತಿಕೆಗೆ ದಕ್ಕೆಯಾಗುವುದಿಲ್ಲ ಎಂದು ಸಾಹಿತಿ ಹಾಗೂ ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎನ್‌.ತಿರುಮಲೇಶ್ವರ ಭಟ್‌ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲ್ಲೂಕು ಘಟಕದ ಆಶ್ರಯದಲ್ಲಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಶನಿವಾರ ನಡೆದ ಉಡುಪಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾಷೆಗಳು ಬೆಳೆಯುವುದೇ ಮತ್ತೊಂದು ಭಾಷೆಯ ಜತೆಗಿನ ಸಂಪರ್ಕದಿಂದ. ಕವಿ ದ.ರಾ.ಬೇಂದ್ರೆ ಮನೆಯಲ್ಲಿ ಮರಾಠಿ ಮಾತನಾಡುತ್ತಿದ್ದರು. ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮಿಳು, ಡಿ.ವಿ.ಗುಂಡಪ್ಪನವರು ತೆಲುಗು ಮಾತನಾಡುತ್ತಿದ್ದರು. ಆದರೂ ಕನ್ನಡದಲ್ಲಿ ಈ ಮೂವರು ಸಾಹಿತಿಗಳು ಮಾಡಿರುವ ಸಾಧನೆ ಅತ್ಯಂತ ದೊಡ್ಡದು ಎಂದರು.

ಚಿಂತಕಿ ವೀಣಾ ಬನ್ನಂಜೆ ಮಾತನಾಡಿ, ಚಿಂತಕರು, ಲೇಖಕರು ಹಾಗೂ ದಾರ್ಶನಿಕರ ತವರು ನೆಲವಾಗಿರುವ ಉಡುಪಿ ಆಧ್ಯಾತ್ಮಿಕವಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅಕ್ಷರ ಎಂದರೆ ನಾಶವಿಲ್ಲದ್ದು. ಸ್ವಾರ್ಥ ಚಿಂತನೆ ಬದಿಗಿಟ್ಟು ಬರೆದ ಅಕ್ಷರ ಶಾಶ್ವತವಾಗಿ ಉಳಿಯುತ್ತದೆ ಎಂದರು.

ವಿದ್ಯೆ ಮತ್ತು ಅವಿದ್ಯೆ ಎಂಬ ಎರಡು ಪ್ರಕಾರಗಳಲ್ಲಿ ಅಜ್ಞಾನ, ಸಂಮೋಹಗಳಿಂದ ಅವಿದ್ಯೆ ರೂಪುಗೊಂಡರೆ, ವಿದ್ಯೆಯಿಂದ ಆತ್ಮಶೋಧನೆ ಸಾಧ್ಯವಾಗುತ್ತದೆ. ಸಾಹಿತಿಗಳು ಅಳಿದರೂ ಸಾಹಿತ್ಯ ಶಾಶ್ವತವಾಗಿ ಉಳಿಯುತ್ತದೆ ಎಂದರು.

ಭಕ್ತಿಯುಕ್ತ ಸಾಹಿತ್ಯ ನೈಜ ಸಾಹಿತ್ಯ. ಸಾಹಿತಿ ಮೊದಲು ತನ್ನನ್ನು ಅರಿಯಬೇಕು. ಅನ್ಯರ ನಂಬಿಕೆಗಳನ್ನು ಗೌರವಿಸಬೇಕೇ ಹೊರತು ತಿರಸ್ಕರಿಸಬಾರದು ಎಂದರು.

ನಿಕಟಪೂರ್ವ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಧ್ವಜ ಹಸ್ತಾಂತರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನ್ನಡತನ ಬೆಳೆಸುವುದು, ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯ ತುರ್ತಾಗಿ ನಡೆಯಬೇಕು ಎಂದರು.

ಸಂವಿಧಾನದ ಆಶಯಗಳನ್ನು ರಕ್ಷಿಸುವ ಕೆಲಸವನ್ನು ಎಲ್ಲ ಸಾಹಿತಿಗಳು ಮಾಡಿದ್ದಾರೆ. ಪ್ರಸ್ತುತ ಧರ್ಮ, ಜಾತಿಯ ಹೆಸರಿನಲ್ಲಿ ಮನಸ್ಸುಗಳು ದೂರವಾಗುತ್ತಿವೆ. ಸಾಹಿತ್ಯಕ್ಕೆ ಮನರಂಜನೆಯ ಜತೆಗೆ ಸಾಮಾಜಿಕ ಜವಾಬ್ದಾರಿಯೂ ಇದೆ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಸಮ್ಮೇಳನಾಧ್ಯಕ್ಷರ ಪುಸ್ತಕ ಅನಾವರಣಗೊಳಿಸಿದರು.

ಭಾಷಾ ವಿಜ್ಞಾನಿ ಡಾ.ಕೆ.ಪಿ. ರಾವ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಮಳಿಗೆ ಉದ್ಘಾಟಿಸಿದರು.

ಶಾಸಕ ರಘುಪತಿ ಭಟ್, ಹೆಬ್ರಿ ಕಸಾಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಕಾಪು ಅಧ್ಯಕ್ಷ ಪುಂಡಲೀಕ ಮರಾಠೆ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ವಳಕಾಡು ಶಾಲೆ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಕುಮಾರಿ ಉಪಸ್ಥಿತರಿದ್ದರು.

ಕಸಾಪ ಉಡುಪಿ ತಾಲ್ಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್‌ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು