ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಪೀಳಿಗೆಗೆ ಪರಿಸರ ಉಳಿಸೋಣ

ಧರ್ಮಸ್ಥಳದ ಧರ್ಮದರ್ಶಿ ಡಾ.ವೀರೇಂದ್ರ ಹೆಗ್ಗಡೆ ಸಲಹೆ
Last Updated 5 ಜೂನ್ 2019, 15:48 IST
ಅಕ್ಷರ ಗಾತ್ರ

ಉಡುಪಿ:‍ಪರಿಸರ ರಕ್ಷಣೆ ವಿಶ್ವದ ಬಹು ಚರ್ಚಿತ ವಿಷಯವಾಗಿದ್ದು, ಮುಂದಿನ ಪೀಳಿಗೆಗೆ ಸ್ವಲ್ಪವಾದರೂ ಉಪಕಾರ ಮಾಡಬೇಕಿದ್ದರೆ ಪ್ರಕೃತಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಧರ್ಮಸ್ಥಳದ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ಪ್ರತಿಪಾದಿಸಿದರು.

ಸುವರ್ಣ ಗೋಪುರ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪೂರ್ವಭಾವಿಯಾಗಿ ಬುಧವಾರ ರಾಜಾಂಗಣದಲ್ಲಿ ನಡೆದ ಧರ್ಮಗೋಪುರಂ ಹಾಗೂ ಸಸ್ಯ ಗೋಪುರಂ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹವಾಮಾನ ವೈಪರೀತ್ಯ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತಿದೆ. ಮುಂದಿನ 50 ವರ್ಷಗಳ ಭವಿಷ್ಯವನ್ನು ನೆನಪಿಸಿಕೊಂಡರೆ ಭಯವಾಗುತ್ತಿದೆ. ಪ‍ರಿಸರ ಸಂರಕ್ಷಣೆ ಮಾಡದಿದ್ದರೆ ಉಡುಪಿಯೂ ಮುಳುಗಿಹೋಗುವ ಆತಂಕ ಎದುರಾಗಲಿದೆ ಎಂದು ಎಚ್ಚರಿಸಿದರು.

ಪರಿಸರ ರಕ್ಷಣೆ ಸರ್ಕಾರದ ಕೆಲಸ ಮಾತ್ರವಲ್ಲ; ನಮ್ಮ ಪಾತ್ರವನ್ನು ನಿಭಾಯಿಸಲೇಬೇಕು. ಹಿಂದೆ, ಪೇಜಾವರ ಶ್ರೀಗಳು ಲಕ್ಷಾಂತರ ಗೇರು ಗಿಡಗಳನ್ನು ಹಂಚಿದ್ದರು. ಗಿಡಗಳ ರಕ್ಷಣೆಯ ಹೊಣೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ವಹಿಸಿದ್ದರು. ಇಂದಿಗೂ ಸಂಸ್ಥೆ ಗಿಡಗಳ ನಿರ್ವಹಣೆ ಮಾಡುತ್ತಿದೆ ಎಂದರು.

ಧರ್ಮಸ್ಥಳ ಸಂಸ್ಥೆಯಿಂದ ಪರಿಸರ ಸಂರಕ್ಷಣೆಯ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಪರ್ಯಾಯ ಇಂಧನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಸಂಸ್ಥೆಯಿಂದ 1 ಲಕ್ಷ ಗೋಬರ್ ಗ್ಯಾಸ್ ಯುನಿಟ್‌ ಹಾಗೂ ಸೋಲಾರ್ ದೀಪಗಳನ್ನು ವಿತರಿಸಲಾಗಿದೆ. 25 ವರ್ಷಗಳಿಂದ ಅನ್ನಪೂರ್ಣ ಛತ್ರದಲ್ಲಿ ಕಟ್ಟಿಗೆ ಬಳಕೆ ಮಾಡುತ್ತಿಲ್ಲ. ಮರದ ಬಾಗಿಲು, ಕಿಟಕಿಗಳ ಬದಲಾಗಿ ಫೈಬರ್ ಹಾಗೂ ಅಲ್ಯುಮಿನಿಯಂ ಬಾಗಿಲುಗಳನ್ನು ಬಳಸಲಾಗುತ್ತಿದೆ ಎಂದರು.

ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಸುಂದರವಾದ ಚರ್ಚ್‌ಗಳು, ಮಸೀದಿಗಳು, ದೇವಾಲಯಗಳು ಹಾಗೂ ಬೌದ್ಧ ಸ್ಥೂಪಗಳನ್ನು ಕಾಣಬಹುದು. ಇದನ್ನು ನೋಡಿದರೆ ಭಗವಂತನಿಗೆ ಅದ್ಭುತ ಆಲಯಗಳನ್ನು ಕಟ್ಟುವುದೇ ರಾಜ–ಮಹಾರಾಜರ ಗುರಿಯಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ ಎಂದರು.

ದೇವಾಲಯಗಳಿಗೆ ಶೃಂಗಾರ ಏಕೆ ಎಂಬ ಪ್ರಶ್ನೆಗಳು ಏಳುತ್ತವೆ. ಆದರೆ, ಮನುಷ್ಯನ ಯೋಗ್ಯತೆಗೆ ಮೀರಿದ ಆವಾಸಸ್ಥಾನ ಭಗವಂತನಿಗೆ ಅಗತ್ಯವಿದೆ. ದೇವತಾ ಕಾರ್ಯಗಳು, ಆಲಯಗಳನ್ನು ಖರ್ಚು ವೆಚ್ಚದಲ್ಲಿ ಅಳೆಯುವುದು ಸರಿಯಲ್ಲ; ಬದಲಾಗಿ ಭಕ್ತಿಯಿಂದ ಅಳೆಯಬೇಕು ಎಂದರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಮಾತನಾಡಿ, ‘ಕೃಷ್ಣನಿಗೆ 16108 ಪತ್ನಿಯರಿದ್ದರೂ ಎಂಬ ಮಾತು ಭಾಗವತದಲ್ಲಿದ್ದರೂ, ಎಲ್ಲರಲ್ಲಿಯೂ ಲಕ್ಷ್ಮಿಯೇ ನೆಲೆಸಿದ್ದಳು. ಹಾಗಾಗಿ, ರಾಮನಂತೆ ಶ್ರೀಕೃಷ್ಣನೂ ಏಕಪತ್ನಿ ವ್ರತಸ್ಥ’ ಎಂದು ಅಭಿಪ್ರಾಯಪಟ್ಟರು.

ಸುವರ್ಣ ಭೌತಿಕ ಸಂಪತ್ತಿನ ವಿಕಾರವಲ್ಲ; ಲಕ್ಷ್ಮೀದೇವಿನ ಸನ್ನಿದಾನವಿದ್ದಂತೆ. ಬಣ್ಣವನ್ನೇ ಕಳೆದುಕೊಳ್ಳದ ದಾತುವಾಗಿರುವ ಕಾರಣಕ್ಕೆ, ಧಾರ್ಮಿಕ ಕಾರ್ಯಗಳಲ್ಲಿ ಚಿನ್ನವನ್ನು ಬಳಸಲಾಗುತ್ತದೆ ಎಂದರು.

ಪರ್ಯಾಯ ಸಂಕಲ್ಪದಂತೆ ಲಕ್ಷ ತುಳಸಿ ಅರ್ಚನೆ ಸಾಂಗವಾಗಿ ನಡೆಯುತ್ತಿದ್ದು, ದೇವರಿಗೆ ಅರ್ಪಿತವಾದ ತುಳಸಿಯು ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಆಯುರ್ವೇದ ಉತ್ಪನ್ನವಾಗಿ ಸಿದ್ಧಗೊಳ್ಳುತ್ತಿದೆ. ಈ ಮೂಲಕ ಪರಿಸರಕ್ಕೆ ಪೂರಕವಾದ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀಗಳು, ಉದ್ಯಮಿ ಹರಿಯಪ್ಪ ಕೋಟ್ಯಾನ್‌, ಕಟೀಲು ದೇವಸ್ಥಾನದ ಮೊಕ್ತೇಸರರಾದ ವಾಸುದೇವ ಅಸ್ರಣ್ಣ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT