ಶನಿವಾರ, ನವೆಂಬರ್ 28, 2020
22 °C
ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ನಾರಾಯಣ ಸ್ವಾಮಿ

ರಾಜಕೀಯದಲ್ಲಿ ಪರಿಶಿಷ್ಟರೇ ನಿರ್ಣಾಯಕರು: ಅರಿವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‘ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ವರ್ಗದವರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಪರಿಶಿಷ್ಟರನ್ನು ಯಾವ ಸರ್ಕಾರಗಳೂ ಕಡೆಗಣಿಸಲು ಸಾದ್ಯವಿಲ್ಲ ಎಂಬ ಸತ್ಯವನ್ನು ಸಮುದಾಯ ಅರಿಯಬೇಕು' ಎಂದು ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ನಾರಾಯಣ ಸ್ವಾಮಿ ಹೇಳಿದರು.

ಬಿಜೆಪಿ ಎಸ್‌.ಸಿ ಮೋರ್ಚಾದಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಪದಾಧಿಕಾರಿಗಳ ಹಾಗೂ ಮಂಗಳೂರು ವಿಭಾಗ, ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ‘ಅತಿದೊಡ್ಡ ಸಮುದಾಯವಾಗಿದ್ದರೂ ರಾಜಕೀಯದಲ್ಲಿ ಪರಿಶಿಷ್ಟ ವರ್ಗದ ನಾಯಕರ ಭಾಗವಹಿಸುವಿಕೆ ತೀರಾ ಕಡಿಮೆ ಇದೆ. ಬೆರಳೆಣಿಕೆ ಮುಖಂಡರು ಮಾತ್ರ ಬೆಳೆದಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟರಲ್ಲಿ ನಾಯಕತ್ವದ ಗುಣಗಳಿದ್ದರೂ ಪ್ರದರ್ಶನ ಮಾಡದೆ, ನಾಯಕರ ಹಿಂಬಾಲಕರಾಗಿ ಉಳಿದುಕೊಂಡಿದ್ದಾರೆ. ಹೋರಾಟ, ಪ್ರತಿಭಟನೆ, ಹಕ್ಕೊತ್ತಾಯಗಳ ಮೂಲಕ ರಾಜಕೀಯದಲ್ಲಿ ಬೆಳೆಯಬೇಕು. ಸಮಾಜದಲ್ಲಿ ತುಳಿತಕೊಳ್ಳಗಾದವರನ್ನು ಮೇಲೆತ್ತಲು ಹಾಗೂ ನಾಯಕತ್ವ ಪ್ರದರ್ಶನಕ್ಕೆ ಬಿಜೆಪಿ ಎಸ್‌ಸಿ ಮೋರ್ಚಾ ಉತ್ತಮ ವೇದಿಕೆಯಾಗಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಎಸ್‌ಸಿ ಸಮುದಾಯ ರಾಜಕೀಯ ಸೇರಿದಂತೆ ಎಲ್ಲ ರಂಗಗಳಲ್ಲಿ ಹಿಂದೆ ಬಿದ್ದಿದೆ. ಸಮದಾಯದ ಶಕ್ತಿ ಅರಿತು ಎಲ್ಲ ರಂಗಗಳಲ್ಲೂ ಮುಂದೆ ಬರಲು ಶ್ರಮಿಸಬೇಕು. ತುಳಿತಕ್ಕೊಳಗಾದ ಸಮಾಜವನ್ನು ಮೇಲೆತ್ತಬೇಕು ಎಂದು ಕರೆ ನೀಡಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಪರಿಶಿಷ್ಟರ ಉದ್ಧಾರಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆ ಹಾಗೂ ಸವಲತ್ತುಗಳು ಸಮುದಾಯಕ್ಕೆ ತಲುಪಿಸಬೇಕಾದ ಹೊಣೆಗಾರಿಕೆ ಬಿಜೆಪಿ ಎಸ್‌ಸಿ ಮೇರ್ಚಾ ಮೇಲಿದೆ. ಪರಿಶಿಷ್ಟ ವರ್ಗದವರು ಪಕ್ಷದ ಮೇಲಿಟ್ಟಿರುವ ನಿರೀಕ್ಷೆಗಳನ್ನು ಉಳಿಸಿಕೊಳ್ಳಬೇಕು ಎಂದು ಮುಖಂಡರಿಗೆ ಕಿವಿಮಾತು ಹೇಳಿದರು.

ಮಂಡಲದ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ರಾಜ್ಯ ಅಧ್ಯಕ್ಷರು ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಬೇಕು. ಅಧಿಕಾರಗಳ ಬೆನ್ನುಬಿದ್ದು ಪರಿಶಿಷ್ಟರಿಗೆ ಮೀಸಲಾದ ಸೌಲಭ್ಯಗಳನ್ನು ಕೊಡಿಸಬೇಕು. ಪ್ರತಿ ಜಿಲ್ಲೆಯಲ್ಲಿ ಲಭ್ಯವಿರುವ ಡಿಸಿ ಮನ್ನಾಭೂಮಿಯ ಮಾಹಿತಿ ಪಡೆದು, ಭೂರಹಿತರಿಗೆ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಸ್‌ಸಿ ಮೋರ್ಚಾ ಮೇಲಿದೆ ಎಂದರು.

ಶಾಸಕ ಕೆ.ರಘುಪತಿ ಭಟ್ ಸಭೆಯನ್ನು ಉದ್ಘಾಟಿಸಿದರು. ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಕಾರ್ಯದರ್ಶಿ ಜಗದೀಶ್, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳೆಂಜಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ ಇದ್ದರು.

‘ಸವಲತ್ತುಗಳನ್ನು ಸಮುದಾಯಗಳಿಗೆ ತಲುಪಿಸಿ’

ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗೆ ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಗೂ ಬಿಜೆಪಿಯಲ್ಲಿ ಪ್ರತ್ಯೇಕ ಮೋರ್ಚಾಗಳನ್ನು ರಚಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಈ ಅವಕಾಶವನ್ನು ಬಳಸಿಕೊಂಡು ಎಸ್‌ಸಿ ಮೋರ್ಚಾದ ಪದಾಧಿಕಾರಿಗಳು, ಮುಖಂಡರು ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಬೇಕು. ರಾಷ್ಟ್ರಕ್ಕೆ ಶ್ರೇಷ್ಠ ಸಂವಿಧಾನದ ಕೊಡುಗೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಾಧನೆಯ ಮೆಟ್ಟಲುಗಳನ್ನಾಗಿ ಮಾಡಿಕೊಂಡು ಬೆಳೆಯಬೇಕು. ಹೋರಾಟ, ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.