ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ರಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಾಲೆ

6ರಿಂದ9ನೇ ತರಗತಿಯವರಿಗೆ ವಿದ್ಯಾಗಮ–2, ತರಗತಿ ಕಡ್ಡಾಯವಲ್ಲ; ಆನ್‌ಲೈನ್‌ ಮೂಲಕವೂ ಕಲಿಕೆಗೆ ಅವಕಾಶ
Last Updated 29 ಡಿಸೆಂಬರ್ 2020, 14:35 IST
ಅಕ್ಷರ ಗಾತ್ರ

ಉಡುಪಿ: ಜ.1ರಿಂದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ–2, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಲಿವೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅರ್ಧದಿನ ತರಗತಿಗಳು ಮೂರು ಅವಧಿಗೆ ನಡೆಯಲಿವೆ. ಮಕ್ಕಳು, ಶಿಕ್ಷಕರು ಹಾಗೂ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಒಂದು ತಂಡದಲ್ಲಿ 15 ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ ಎಂದರು.

6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಹಾಗೂ 8 ಮತ್ತು 9ನೇ ತರಗತಿಯವರಿಗೆ ಮಧ್ಯಾಹ್ನ 2ರಿಂದ 4.30ರವರೆಗೆ ಶಾಲಾ ಆವರಣದಲ್ಲಿ ವಿದ್ಯಾಗಮ ನಡೆಯಲಿದೆ. ಸ್ವಇಚ್ಛೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಕುರಿತು ಹಾಗೂ ಅನಾರೋಗ್ಯ ಇಲ್ಲದಿರುವ ಬಗ್ಗೆ ಪೋಷಕರು ದೃಢೀಕರಣ ಪತ್ರ ಸಲ್ಲಿಸಬೇಕು. ಶಾಲೆಗೆ ಬರುವಂತೆ ಮಕ್ಕಳಿಗೆ ಒತ್ತಾಯವಿಲ್ಲ, ಆನ್‌ಲೈನ್ ಹಾಗೂ ದೂರದರ್ಶನದ ಮೂಲಕವೂ ಕಲಿಯಬಹುದು ಎಂದರು.

ತರಗತಿ ಆರಂಭಕ್ಕೂ ಮುನ್ನ ಶಾಲೆಯನ್ನು ಸ್ವಚ್ಛಗೊಳಿಸಲಾಗಿದೆ. ಪೋಷಕರ ಸಭೆ ನಡೆಸಿ ಮಕ್ಕಳ ಸುರಕ್ಷತೆ, ವೇಳಾಪಟ್ಟಿ, ಆಹಾರ ಕ್ರಮದ ಬಗ್ಗೆ ಅರಿವು ಮೂಡಿಸಲಾಗಿದೆ. ಶಾಲಾ ಪ್ರಾರಂಭದ ದಿನ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಾಲೆಯಲ್ಲಿ ಶೌಚಾಲಯ ಬಳಕೆ ಬಳಿಕ ಸೋಡಿಯಂ ಹೈಪೊಕ್ಲೋರೈಡ್‌ನಿಂದ ಸ್ವಚ್ಛಗೊಳಿಸಲು ಕ್ರಮ ವಹಿಸಲಾಗಿದೆ. ಶಿಕ್ಷಕರು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಶಾಲೆಗೆ ಹಾಜರಾಗಬೇಕು, 50 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಜತೆಗೆ ಫೇಸ್‌ಶೀಲ್ಡ್ ಬಳಸಲು ಸೂಚಿಸಲಾಗಿದೆ. ಶಾಲೆಯಲ್ಲಿ ಒಂದು ಕೊಠಡಿಯನ್ನು ಐಸೊಲೇಷನ್‌ ಕೋಣೆಯಾಗಿ ಮೀಸಲಿಡಲು ಸೂಚಿಸಲಾಗಿದೆ ಎಂದರು.

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೌಲಭ್ಯ ಇರುವುದಿಲ್ಲ. ವಿದ್ಯಾರ್ಥಿಗಳೇ ನೀರನ್ನು ತರಬೇಕು, ಸಾಮೂಹಿಕ ಪ್ರಾರ್ಥನೆ ಹಾಗೂ ಆಟೋಟಗಳ ಆಯೋಜನೆಗೆ ಅನುಮತಿ ಇಲ್ಲ. ಮಕ್ಕಳು ಕೈತೊಳೆಯಲು ಸೋಪ್‌ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಡಿಪಿಐ ಎಸ್‌.ಎಚ್‌.ನಾಗೂರ, ಡಿಡಿಪಿಯು ಭಗವಂತ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT