ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಪಾಲು, ಸಮಬಾಳಿನ ರಾಜಕೀಯ ಕಥನ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಹೆಬ್ಬೆಟ್ ರಾಮಕ್ಕ’ ಚಿತ್ರತಂಡ ಖುಷಿಯ ಅಲೆಯಲ್ಲಿತ್ತು. ಆ ಖುಷಿಗೆ ಎರಡು ಕಾರಣಗಳಿದ್ದವು. ಮೊದಲನೆಯದು ಚಿತ್ರಕ್ಕೆ ‘ಅತ್ಯುತ್ತಮ ಕನ್ನಡ ಚಿತ್ರ’ ಎಂಬ ರಾಷ್ಟ್ರಪ್ರಶಸ್ತಿ ಬಂದಿದ್ದು. ಇನ್ನೊಂದು ಈ ವಾರ (ಏ.27) ಚಿತ್ರ ಬಿಡುಗಡೆಯಾಗುತ್ತಿರುವುದು. ಈ ಖುಷಿಯ ಅಲೆ ತಂಡದ ಎಲ್ಲರ ಮಾತುಗಳಲ್ಲಿಯೂ ಹೊಮ್ಮುತ್ತಿತ್ತು.

ಮೊದಲು ಮಾತಿಗಿಳಿದವರು ‘ಹೆಬ್ಬೆಟ್ ರಾಮಕ್ಕ’ ಪಾತ್ರ ನಿರ್ವಹಿಸಿರುವ ತಾರಾ. ‘ತುಂಬ ಇಷ್ಟವಾಗುವ ಕಥೆಯನ್ನು ಇಟ್ಟುಕೊಂಡು ಅಷ್ಟೇ ಸರಳವಾಗಿ ಹೇಳಿದ್ದಾರೆ ನಿರ್ದೇಶಕರು’ ಎಂದು ಅವರು ನಿರ್ದೇಶಕರನ್ನು ಹೊಗಳಿದರು. ಹನುಮಂತೇಗೌಡರ ಪ್ರಕಾರ ‘ಸರ್ವರಿಗೂ ಸಮಪಾಲು – ಸಮಬಾಳು ಎಂಬ ಗುರಿ ತಲುಪುವ ದೊಡ್ಡ ರಾಜಕೀಯ ಪ್ರಯೋಗದಲ್ಲಿ ಹೆಬ್ಬೆಟ್ ರಾಮಕ್ಕ ಒಂದು ಸಣ್ಣ ಹನಿ.’ ‘ಈ ಸಿನಿಮಾ ಗೆದ್ದರೆ ಇನ್ನಷ್ಟು ಪ್ರಯೋಗಗಳು ನಡೆಯಲು ಸಾಧ್ಯವಾಗುತ್ತದೆ’ ಎಂಬ ಸದಾಶಯವೂ ಅವರಿಗಿದೆ.

ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಈ ಚಿತ್ರಕ್ಕೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆದಿದ್ದಾರೆ. ‘ಗ್ರಾಮೀಣ ಜಗತ್ತಿನ ಅನಕ್ಷರಸ್ಥ ಮಹಿಳೆ ಈ ಕಥೆಯ ನಾಯಕಿ. ಅಂಥ ಹೆಣ್ಣುಮಗಳು ರಾಜಕೀಯ ವ್ಯವಸ್ಥೆಯಲ್ಲಿ ಅವಕಾಶ ಸಿಕ್ಕರೆ ಹೇಗೆ ಬೆಳೆಯಲು ಸಾಧ್ಯ ಎನ್ನುವುದನ್ನು ನಿರ್ದೇಶಕರು ಚೆನ್ನಾಗಿ ನಿರೂಪಿಸಿದ್ದಾರೆ. ಈ ಚಿತ್ರದಲ್ಲಿನ ಪಾತ್ರಗಳು ತಮ್ಮ ಸಂಭಾಷಣೆಗಳನ್ನು ತಾವೇ ಸೃಷ್ಟಿಸಿಕೊಂಡಿವೆ. ಈ ಕೆಲಸ ನನಗೆ ಸೃಜನಶೀಲ ಸಂತೋಷವನ್ನು ಕೊಟ್ಟಿದೆ’ ಎಂದು ಹೇಳಿಕೊಂಡರು.

‘ಕಥೆ ಮತ್ತು ಬದ್ಧತೆ ಎರಡೂ ಇಟ್ಟುಕೊಂಡು ಮಾಡಿದ ಸಿನಿಮಾ ಇದು. ಈ ಚಿತ್ರಕ್ಕೆ ಕೆಲಸ ಮಾಡುತ್ತ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಎಲ್ಲ ಹಾಡುಗಳ ಸಾಹಿತ್ಯವೂ ತುಂಬಾ ಅರ್ಥಗರ್ಭಿತವಾಗಿವೆ’ ಎಂದರು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ.

ಕೊನೆಯಲ್ಲಿ ಮಾತಿಗಿಳಿದ ನಿರ್ದೇಶಕ ನಂಜುಂಡೇಗೌಡ ಅವರು ರಾಷ್ಟ್ರಮಟ್ಟದಲ್ಲಿ ತಮ್ಮ ಚಿತ್ರಕ್ಕೆ ಇನ್ನಷ್ಟು ಮನ್ನಣೆ ದೊರೆಯಬೇಕಾಗಿತ್ತು ಎಂಬ ಇಂಗಿತವನ್ನು ವ್ಯಕ್ತಪಡಿಸಿಯೇ ಮುಂದುವರಿದರು. ‘ನನ್ನ ತಂಡ ಬಲಿಷ್ಠವಾಗಿದೆ, ಸೃಜನಶೀಲವಾಗಿದೆ. ಆದ್ದರಿಂದಲೇ ಪ್ರಶಸ್ತಿ ಬಂದಿದೆ. ನಾವೆಲ್ಲ ಸಿನಿಮಾ ಮಾಡುವುದು ಜನರಿಗೋಸ್ಕರ. ನನ್ನ ಸಿನಿಮಾದಿಂದ ಸಮಾಜದ ಮೇಲೆ ಅಲ್ಪಸ್ವಲ್ಪ ಪರಿಣಾಮ ಆಗಬಹುದು. ಆದ್ದರಿಂದ ಸಿನಿಮಾವನ್ನು ಜನರಿಗೆ ತಲುಪಿಸುವುದೂ ಅಷ್ಟೇ ಮುಖ್ಯ’ ಎಂದರು. ‘ಸಿನಿಮಾ ಸಿದ್ಧಪಡಿಸಿ ಬಿಡುಗಡೆ ಮಾಡುವವರೆಗೆ ನಮ್ಮ ಜವಾಬ್ದಾರಿ. ಅದನ್ನು ನಾವು ಪೂರೈಸುತ್ತಿದ್ದೇವೆ. ಮುಂದಿನ ಜಬಾಬ್ದಾರಿ ಪ್ರೇಕ್ಷಕರದ್ದು’ ಎಂದೂ ಅವರು ಹೇಳಿದರು.

ಜಾಕ್ ಮಂಜು ಈ ಚಿತ್ರದ ವಿತರಣೆಯ ಹೊಣೆ ಹೊತ್ತಿದ್ದಾರೆ. ಸುಮಾರು 60 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT