ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

16ನೇ ವರ್ಷದ ‘ಭೂಮಿ ಹಬ್ಬ’ ಸಂಪನ್ನ

ಪೆರ್ನಾಲ್‌ನಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ
Published 21 ಆಗಸ್ಟ್ 2024, 7:33 IST
Last Updated 21 ಆಗಸ್ಟ್ 2024, 7:33 IST
ಅಕ್ಷರ ಗಾತ್ರ

ಶಿರ್ವ: ಇಲ್ಲಿಗೆ ಸಮೀಪದ ಪೆರ್ನಾಲ್ ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಕರ್ನಾಟಕ – ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ 16ನೇ ವರ್ಷದ ‘ಭೂಮಿ ಹಬ್ಬ’ ಆಚರಿಸಲಾಯಿತು.

ಭೂಮಿಹಬ್ಬದ ಪೂರ್ವಭಾವಿಯಾಗಿ ಶಿರ್ವ ರೋಟರಿ ಸರ್ಕಲ್‌ನಿಂದ ಪೆರ್ನಾಲ್ ಆದಿವಾಸಿ ಜೀವನ ಶಿಕ್ಷಣ ಕೇಂದ್ರದವರೆಗೆ ಏರ್ಪಡಿಸಿದ್ದ ಜಾಥಾಗೆ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು.

ನಮ್ಮ ನ್ಯಾಯ ಕೂಟ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನ್ಯಾಯಾಧೀಶ ಬಾಲರಾಜ್ ಕೋಡಿಕಲ್ ಧ್ವಜಾರೋಹಣ ನೆರವೇರಿಸಿ, ಸಂಘಟನೆಗೆ ಬಳಸಿದ ಧ್ವಜದ ಹಿನ್ನೆಲೆ ಮತ್ತು ಹಸಿರು, ಹಳದಿ ಬಣ್ಣಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನಯ್ ಅಡ್ವೆ, ತೆಂಗಿನ ಸಸಿ ನೆಟ್ಟರು.

ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಮಿತಾ ಡೋಲು ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಶಿಕ್ಷಣ ಅಗತ್ಯ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಮೂಲಭೂತವಾಗಿ ಬಂದ ಕಲೆ–ಸಂಸ್ಕೃತಿ, ಪರಂಪರೆ ಉಳಿಸಿ–ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಲಿ’ ಎಂದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಶೀಲ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ಬಾಲರಾಜ್ ಕೋಡಿಕಲ್, ಪೆರ್ನಾಲ್ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಐತಪ್ಪ ವರ್ಕಾಡಿ, ಕಾಪು ಕೊರಗಾಭಿವೃದ್ದಿ ಸಂಘದ ಅಧ್ಯಕ್ಷೆ ಸುಂದರಿ ಪಣಿಯೂರು ಭಾಗವಹಿಸಿದ್ದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯೋಜಕ ಕೆ.ಪುತ್ರನ್ ಹೆಬ್ರಿ ಸ್ವಾಗತಿಸಿದರು. ಸುರೇಂದ್ರ ಕಳ್ತೂರು, ವಿಮಲಾ ಕಳ್ತೂರು ನಿರೂಪಿಸಿದರು. ಸಮುದಾಯ ಕಾರ್ಯಕರ್ತೆ ಸುಪ್ರಿಯಾ ಕಿನ್ನಿಗೋಳಿ ವಂದಿಸಿದರು.

ಭೂಮಿ ಹಬ್ಬದ ವಿಶೇಷತೆಗಳು: ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಸಬಿತಾ ಗುಂಡ್ಮಿ, ಮೈಸೂರು ಬುಡಕಟ್ಟು ಸಂಶೋಧನಾ ಕೇಂದ್ರದ ಸಂಶೋಧಕಿ ಕಲಾವತಿ ಸೂರಾಲು, ಹಬ್ಬದ ಸಂದೇಶ ನೀಡಿದರು.

ಬೇಬಿ ಮಧುವನ, ಪ್ರತೀಕ್ಷಾ ಶಂಕರನಾರಾಯಣ ಹಬ್ಬದ ದೀಪ ಪ್ರಜ್ವಲನ ಮಾಡಿದರು. ಗೌರಿ ಪಾದೂರು, ಭಾರತಿ ಅವರು ‘ಕಾಪು ಹಬ್ಬದ ಸವಿ ಜೇನು’ ಹಂಚಿದರು. ಸುಶ್ವಿತಾ ತಂಡದವರು ಧ್ಯೇಯಗೀತೆ ಹಾಡಿದರು. ಸಾಂಸ್ಕೃತಿಕ ಅಭಿವ್ಯಕ್ತಿಯಲ್ಲಿ ಡೋಲು ವಾದನ, ಡೋಲು ಕುಣಿತ, ಹಾಡುಗಳು, ಪ್ರಹಸನ, ನೃತ್ಯ ಕಾರ್ಯಕ್ರಮಗಳು ಜರುಗಿದವು. ಭೂಮಿ ಹಬ್ಬದ ಸಂಯೋಜಕರಾಗಿ ಒಕ್ಕೂಟದ ಕೋಶಾಧಿಕಾರಿ ದಿವಾಕರ ಕಳ್ತೂರು ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT