ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರ್ವ: ಮಟ್ಟುಗುಳ್ಳ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದು ಯಶಸ್ಸು

Published 2 ಏಪ್ರಿಲ್ 2024, 5:17 IST
Last Updated 2 ಏಪ್ರಿಲ್ 2024, 5:17 IST
ಅಕ್ಷರ ಗಾತ್ರ

ಶಿರ್ವ: ಸಾಂಪ್ರದಾಯಿಕ ಶೈಲಿಯಲ್ಲಿ ಹೈನುಗಾರಿಕೆ, ಆಧುನಿಕ ಶೈಲಿಯಲ್ಲಿ ಭತ್ತದ ಕೃಷಿ ಮಾಡಿ ಕೃಷಿರಂಗದಲ್ಲಿ ಗಣನೀಯ ಸಾಧನೆ ಮಾಡಿರುವ ಕಟಪಾಡಿ ಸಮೀಪದ ಮಟ್ಟು ಗ್ರಾಮದ ಯುವ ಪ್ರಗತಿಪರ ಕೃಷಿಕ ರವಿ ಸೇರಿಗಾರ್ ಅವರು ಇದೀಗ ಕಲ್ಲಂಗಡಿ ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ.

ಮಟ್ಟುಗುಳ್ಳದ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದು ಯಶಸ್ಸು ಕಂಡಿರುವ ರವಿ ಶೇರಿಗಾರ್ ಅವರು ‌ಕೃಷಿಕರಿಗೆ ಮಾದರಿ ಎನಿಸಿದ್ದಾರೆ. ಸಾವಯವ ಮಾದರಿಯಲ್ಲಿ ಮಟ್ಟು ಗ್ರಾಮದ ಅಂಬಾಡಿಬೈಲಿನಲ್ಲಿರುವ ಉಪ್ಪುನೀರಿನ ಭತ್ತದ ಗದ್ದೆಯಲ್ಲಿ ಕಲ್ಲಂಗಡಿ ಕೃಷಿ ಮಾಡಿ ಲಾಭ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಬೇಸಿಗೆಯಲ್ಲಿ ಇವರು ಬೆಳೆದ ದೊಡ್ಡ ಗಾತ್ರದ ಕಲ್ಲಂಗಡಿ ಭಾರಿ ಬೇಡಿಕೆ ಗಳಿಸಿಕೊಂಡಿದೆ. ರವಿ ಅವರು ಸುಮಾರು 2 ಎಕರೆಯಷ್ಟು ಗದ್ದೆಯಲ್ಲಿ ಕಲ್ಲಂಗಡಿ ಬೆಳೆದು ಯಶಸ್ಸು ಕಂಡಿದ್ದಾರೆ. ಮಟ್ಟು ನದಿ ತೀರ ಪ್ರದೇಶವಾದ್ದರಿಂದ ಬೇಸಿಗೆಯಲ್ಲಿ ಸಾಕಷ್ಟು ನೀರಿನ ಸೌಲಭ್ಯವಿಲ್ಲದಿದ್ದರೂ ಟೈಗರ್ ಬ್ರ್ಯಾಂಡ್‌ನ ಕಲ್ಲಂಗಡಿ ಹಣ್ಣು, ಇಂಡೊ ಅಮೆರಿಕನ್ ಎಫ್1 ಹೈಬ್ರಿಡ್ ತಳಿಯ ಕಡುಹಸಿರು ಬಣ್ಣದ ಕಲ್ಲಂಗಡಿ ಬೆಳೆಸಿದ್ದಾರೆ. ಉಡುಪಿ ಮತ್ತು ಮಂಗಳೂರು ಮಾರುಕಟ್ಟೆಯಲ್ಲಿ ರವಿ ಅವರ ಕಲ್ಲಂಗಡಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದೆ.

13ರಿಂದ 15 ಕಿಲೋ ತೂಗುವ ಬೃಹತ್ ಗಾತ್ರದ ಕಲ್ಲಂಗಡಿ ಹಣ್ಣುಗಳು ಇವರ ಗದ್ದೆಯಲ್ಲಿ ದೊರೆಯುತ್ತಿದ್ದು, ಈವರೆಗೆ ಸುಮಾರು 5–6 ಟನ್‌ಗಳಷ್ಟು ಕಲ್ಲಂಗಡಿ ಇಳುವರಿ ದೊರೆತಿದೆ. ಮಟ್ಟುಗುಳ್ಳ ಬೆಳೆಗೆ ಹೆಸರುವಾಸಿಯಾದ ಮಟ್ಟಿಬೈಲಿನಲ್ಲಿ ಕಲ್ಲಂಗಡಿ ಬೆಳೆ ಮಾಡುವವರ ಸಂಖ್ಯೆ ವಿರಳ. ಈಚೆಗೆ ನಾಲ್ಕೈದು ವರ್ಷಗಳ ಹಿಂದೆ ಈ ಭಾಗದಲ್ಲಿ ರವಿ ಶೇರಿಗಾರ್ ಮತ್ತು ಗೆಳೆಯರ ಮೂಲಕ ಕಲ್ಲಂಗಡಿ ಪರಿಚಯಿಸಲಾಗಿದೆ. ಮಟ್ಟು ಸೌತೆಕಾಯಿ, ಹೀರೆಕಾಯಿ, ಬೆಂಡೆಕಾಯಿ, ಬೂದುಕುಂಬಳ, ಮಟ್ಟು ಹರಿವೆ ಹಾಗೂ ಮಟ್ಟು ಸೊರೆಕಾಯಿ ಈ ಭಾಗದಲ್ಲಿ ಸಾಕಷ್ಟು ಬೆಳೆಯಲಾಗುತ್ತದೆ. ಈ ಎಲ್ಲಾ ಮಾದರಿಯ ಕೃಷಿಯನ್ನು ರವಿ ಸೇರಿಗಾರ್ ಅವರು ಮಾಡಿ ಯಶ ಕಂಡಿದ್ದಾರೆ.

ರವಿ ಶೇರಿಗಾರ್ ಅವರು ಯಾವುದೇ ಬೆಳೆ ತೆಗೆಯುವುದಿದ್ದರೂ ಸಾವಯವ ಗೊಬ್ಬರ ಮಾತ್ರ ಬಳಸುತ್ತಾರೆ. ಹಟ್ಟಿಗೊಬ್ಬರ ಮತ್ತು ಎರೆಹುಳ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡಿರುವುದರಿಂದ ಈ ಬಾರಿ ಕಲ್ಲಂಗಡಿ ಇಳುವರಿ ಹೆಚ್ಚಾಗಿದೆ. ಮಟ್ಟುವಿನಲ್ಲಿ ಬೆಳೆದ ಕಲ್ಲಂಗಡಿ ಗಾತ್ರ ದೊಡ್ಡದಾಗಿದ್ದು, ಸಿಹಿರುಚಿ  ಹೊಂದಿರುವುದರಿಂದ ಭಾರಿ ಬೇಡಿಕೆ ವ್ಯಕ್ತವಾಗಿದೆ ಎನ್ನುತ್ತಾರೆ ರವಿ.

ಪ್ರತಿವರ್ಷ ಮಳೆಗಾಲದಲ್ಲಿ 8 ಎಕ್ರೆ ಕೃಷಿಭೂಮಿಯಲ್ಲಿ ಭತ್ತದ ಕೃಷಿ ಮಾಡುವ ರವಿ ಶೇರಿಗಾರ್, ಆ ಬಳಿಕ ಮಟ್ಟುಗುಳ್ಳ ಕೃಷಿ ಮಾಡುತ್ತಾರೆ. ಗುಳ್ಳ ಕೃಷಿ ಬಳಿಕ ಈ ಬಾರಿ ಕಲ್ಲಂಗಡಿ ಬೆಳೆಸಿರುವ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಬಗೆಯ ಹಣ್ಣು–ತರಕಾರಿಗಳನ್ನು ಬೆಳೆಯುವ ಇರಾದೆ ಹೊಂದಿದ್ದಾರೆ. ಕೃಷಿ ಇಲಾಖೆ ಅಥವಾ ತೋಟಗಾರಿಕಾ ಇಲಾಖೆ ಮೂಲಕ ರವಿ ಶೇರಿಗಾರ್ ಅವರಿಗೆ ಆರ್ಥಿಕ ಸವಲತ್ತು, ಕೃಷಿಗೆ ಉತ್ತೇಜನ ದೊರೆತಲ್ಲಿ ಸಾವಯವ ಮಾದರಿಯಲ್ಲಿ ವಿಭಿನ್ನ ಬೆಳೆ ಬೆಳೆದು ಉತ್ತಮ ಇಳುವರಿ ಪಡೆಯಲು ಅನುಕೂಲವಾಗಬಹುದು.

ಮಟ್ಟುಗುಳ್ಳದ ಗದ್ದೆಯಲ್ಲಿ ಕಲ್ಲಂಗಡಿ ವಾಣಿಜ್ಯ ಬೆಳೆ
ಮಟ್ಟುಗುಳ್ಳದ ಗದ್ದೆಯಲ್ಲಿ ಕಲ್ಲಂಗಡಿ ವಾಣಿಜ್ಯ ಬೆಳೆ
ಮಟ್ಟುಗುಳ್ಳದ ಗದ್ದೆಯಲ್ಲಿ ಕಲ್ಲಂಗಡಿ ವಾಣಿಜ್ಯ ಬೆಳೆ
ಮಟ್ಟುಗುಳ್ಳದ ಗದ್ದೆಯಲ್ಲಿ ಕಲ್ಲಂಗಡಿ ವಾಣಿಜ್ಯ ಬೆಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT