ಉಡುಪಿ: ಕಷ್ಟಪಟ್ಟು ಜೀವಮಾನ ಪೂರ್ತಿ ದುಡಿದ ಹಣದಲ್ಲಿ ಖರೀದಿಸಿದ ನಿವೇಶನದಲ್ಲಿ ಸ್ವಂತ ಸೂರು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಮಾರಾಟ ಮಾಡಲು ಆಗುತ್ತಿಲ್ಲ. ಕಂದಾಯ ಇಲಾಖೆ ಮಾಡಿದ ತಪ್ಪಿಗೆ 20 ಸಾವಿರಕ್ಕೂ ಹೆಚ್ಚು ನಿವೇಶನದಾರರಿಗೆ ಸಮಸ್ಯೆಯಾಗಿದೆ ಎಂದು ಉಡುಪಿ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಮನೆ, ನಿವೇಶನ ಖರೀದಿಸಿ ಸಂತ್ರಸ್ತರು ಅಳಲು ತೋಡಿಕೊಂಡರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತ ರವಿ ಭಟ್, ಭೂಪರಿವರ್ತಿತ ವಸತಿ ಬಡಾವಣೆಗಳಲ್ಲಿ ಸಮುದಾಯದ ಉಪಯೋಗಕ್ಕೆ ಜಾಗ ಮೀಸಡಬೇಕು ಎಂಬ ನಿಯಮಗಳಿದ್ದರೂ, ಉಡುಪಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಡಾವಣೆಗಳ ನಿರ್ಮಾಣಕ್ಕೆ ಹಾಗೂ ನಿವೇಶನಗಳ ಮಾರಾಟಕ್ಕೆ ಕಂದಾಯ ಇಲಾಖೆ ಅನುವು ಮಾಡಿಕೊಟ್ಟಿತ್ತು.
ಖುದ್ದು ಅಧಿಕಾರಿಗಳೇ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದರಿಂದ ನಿಯಮಬದ್ಧ ಎಂದು ತಿಳಿದು ಸಾವಿರಾರು ಮಂದಿ 1990 ಹಾಗೂ 2000 ದಶಕದಲ್ಲಿ ನಗರಸಭೆ ಹಾಗೂ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭೂಪರಿವರ್ತಿತ ಜಾಗದಲ್ಲಿದ್ದ ನಿವೇಶನ ಹಾಗೂ ಮನೆಗಳನ್ನು ಖರೀದಿಸಿದ್ದರು. ಅಂದಿನ ಉಡುಪಿ ಉಪ ನೋಂದಣಾಧಿಕಾರಿ ನಿವೇಶನಗಳನ್ನು ಖರೀದಿದಾರರ ಹೆಸರಿಗೆ ನೋಂದಣಿಯನ್ನೂ ಮಾಡಿದರು. ಈಗ ಕಾನೂನು ತೊಡಕುಗಳನ್ನು ಮುಂದಿಟ್ಟು, ಮನೆ ಕಟ್ಟಲು ಅನುಮತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮಗಳನ್ನು ಎಸಗಿಲ್ಲದಿದ್ದರೂ ಅಕ್ರಮ ಸಕ್ರಮದಡಿ ಅರ್ಜಿಗಳನ್ನು ಹಾಕುವಂತೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ದಶಕಗಳ ಹಿಂದೆಯೇ ಬಡಾವಣೆಗಳು ಕ್ರಮಬದ್ಧವಾಗಿಲ್ಲದ್ದರಿಂದ ನಿವೇಶನ ನೋಂದಣಿ ಸಾಧ್ಯವಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳಿದ್ದರೆ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಈಗ ನಿಯಮ ಉಲ್ಲಂಘನೆ ನೆಪ ಮುಂದಿಡುತ್ತಿದ್ದಾರೆ ಎಂದು ಸಂತ್ರಸ್ತ ದೇವು ಕನೆಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನಿವೇಶನ ಖರೀದಿಸಿದವರ ಪೈಕಿ ಶೇ 60ಕ್ಕಿಂತ ಹೆಚ್ಚಿನವರು ವೃದ್ಧರಾಗಿದ್ದಾರೆ, ಜೀವನ ಪೂರ್ತಿ ಗಳಿಸಿದ ಹಣದಿಂದ ಸಣ್ಣ ಸಣ್ಣ ನಿವೇಶನ ಖರೀದಿಸಿದ್ದಾರೆ, ಜಿಲ್ಲಾಡಳಿತ ಕೂಡಲೇ ನೆರವಿಗೆ ಧಾವಿಸಬೇಕು, ನಿವೇಶನ ಮಾಲೀಕರಿಂದ ಅಭಿವೃದ್ಧಿ ಶುಲ್ಕ ಪಡೆದು ನಿವೇಶನಗಳನ್ನು ಕ್ರಮಬದ್ಧಗೊಳಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರಾದ ರಾಬರ್ಟ್ ಡಿಸೋಜಾ, ಮೆಲ್ವಿನ್, ತಾರಾನಾಥ್ ಹೆಗಡೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.