ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಬೈಂದೂರು: ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣ;ಕುರುದ್ವೀಪದ ವಿದ್ಯಾರ್ಥಿಗಳಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ಸೌಪರ್ಣಿಕಾ ನದಿ ಮಧ್ಯದಲ್ಲಿರುವ ಕುರುದ್ವೀಪಕ್ಕೆ ದೋಣಿಯಲ್ಲಿ ಹೋಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇಬ್ಬರು ವಿದ್ಯಾರ್ಥಿಗಳನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್. ಎಚ್. ನಾಗೂರ ಗುರುವಾರ ಅಭಿನಂದಿಸಿದರು.

ಶಿಕ್ಷಕ ತಂಡದ ಜತೆಗೆ ದೋಣಿ ಮೂಲಕವೇ ನದಿ ದಾಟಿ ಅಲ್ಲಿನ ನಿವಾಸಿಗಳಾದ ಶಿವಾ ಮತ್ತು ಸರೋಜಾ ದಂಪತಿ ಮಕ್ಕಳಾದ ಸಂಜನಾ ಮತ್ತು ಶಿಲ್ಪಾ ಅವರನ್ನು ಭೇಟಿ ಮಾಡಿ ಪ್ರೋತ್ಸಾಹಿಸಿದರು.

ಸಂಜನಾ ಮತ್ತು ಶಿಲ್ಪಾ ಮರವಂತೆ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು. ನಾವುಂದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಿ ದ್ವಿತೀಯ ಮತ್ತು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಸವಾಲುಗಳನ್ನು ಎದುರಿಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಮನೆಗೆ ತೆರಳಿ ತಂದೆ, ತಾಯಿ ಸಮ್ಮುಖದಲ್ಲಿ ಶಾಲು ಹೊದಿಸಿ, ಹಾರ ಹಾಕಿ, ಸಿಹಿ ತಿನಿಸು ಮತ್ತು ಹಣ್ಣು ನೀಡಿ ಸನ್ಮಾನಿಸಿ, ಶುಭ ಹಾರೈಸಿದರು.

ಶಿಕ್ಷಣ ಮೊಟಕುಗೊಳಿಸದಂತೆ ಸಲಹೆ ನೀಡಿ, ಪಿಯುಸಿ ಸೇರ್ಪಡೆಗೆ ಅಗತ್ಯವಿರುವ ಶುಲ್ಕದ ಮೊತ್ತ ನೀಡಿ ಪ್ರೋತ್ಸಾಹಿಸಿದರು. ಡಿಡಿಪಿಐ ನಾಗೂರ ಅವರ ಕಾರ್ಯ ದ್ವೀಪ ವಾಸಿಗಳ ಮೆಚ್ಚುಗೆ ಗಳಿಸಿತು.

ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನದಂದು ಡಿಡಿಪಿಐ ನಾಗೂರ, ಬೈಂದೂರು ತಹಶೀಲ್ದಾರ್‌ ಶೋಭಾಲಕ್ಷ್ಮೀ ಮತ್ತು ಶಿಕ್ಷಕರು  ವಿದ್ಯಾರ್ಥಿಗಳನ್ನು ಕೇಂದ್ರಕ್ಕೆ ಕರೆತಂದಿದ ಸುದ್ದಿಯಾಗಿತ್ತು. ಈಗ ಉತ್ತೀರ್ಣರಾದ ಅವರ ಮನೆಗೆ ಹೋಗಿ ಅಭಿನಂದಿಸುವ ಮೂಲಕ ಮತ್ತೊಮ್ಮೆ ಸುದ್ದಿ ಆಗಿದ್ದಾರೆ.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಕೆ ಪದ್ಮನಾಭ, ಬೈಂದೂರು ವಲಯ ಪರಿಕ್ಷಾ ನೋಡಲ್ ಅಧಿಕಾರಿ ಕರುಣಾಕರ ಶೆಟ್ಟಿ, ಬ್ರಹ್ಮಾವರ ವಲಯದ ರಾಘವ ಶೆಟ್ಟಿ, ಕ್ಷೇತ್ರ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರಾಮಕೃಷ್ಣ, ರಾಮನಾಥ, ಅಣ್ಣಪ್ಪ ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.