ಶನಿವಾರ, ಏಪ್ರಿಲ್ 17, 2021
23 °C
ಪ್ರತಿದಿನ ನಾಟಕಗಳ ಪ್ರದರ್ಶನ, ರಂಗ ಸಾಧಕರಿಗೆ ಸನ್ಮಾನ

ಮಾರ್ಚ್‌ 22ರಿಂದ ಸುಮನಸಾ ‘ರಂಗಹಬ್ಬ–9’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಸುಮನಸಾ ಕೊಡವೂರು ಸಂಸ್ಥೆಯಿಂದ ಮಾರ್ಚ್‌ 22 ರಿಂದ 28ರವರೆಗೆ ‘ರಂಗಹಬ್ಬ–9’ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಎಂ.ಎಸ್‌.ಭಟ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಪೇಜಾವರ ಮಠದ ಸಹಯೋಗದಲ್ಲಿ ಉಡುಪಿಯ ಭುಜಂಗ ಪಾರ್ಕ್‌ನಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ನಾಟಕೋತ್ಸವವನ್ನು ಉದ್ಯಮಿ ಆನಂದ್ ಸಿ.ಕುಂದರ್ ಉದ್ಘಾಟಿಸಲಿದ್ದಾರೆ. ಶಾಸಕ ರಘುಪತಿ ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸಲಿದ್ದಾರೆ. ಪ್ರತಿದಿನ ರಂಗ ಸಾಧಕರಿಗೆ ಸನ್ಮಾನಿಸಲಾಗುವುದು ಎಂದರು.

ಮಾರ್ಚ್‌ 22ರಂದು ಪಟ್ಲದ ಭೂಮಿಗೀತ ಸಾಂಸ್ಕೃತಿಕ ವೇದಿಕೆಯ ‘ಗೆಲಿಲಿಯೊ’ ಕನ್ನಡ ನಾಟಕ ಪ್ರದರ್ಶನವಾಗಲಿದೆ. ಸುಕುಮಾರ್ ಮುದ್ರಾಡಿ ಅವರಿಗೆ ರಂಗಸಾಧಕ ಸನ್ಮಾನ ಮಾಡಲಾಗುವುದು. 23ರಂದು ಸುಮನಸಾ ಕೊಡವೂರು ಸಂಸ್ಥೆಯ ‘ನೆರಳಿಲ್ಲದ ಮನುಷ್ಯರು’ ನಾಟಕ ಹಾಗೂ ಚಂದ್ರಕಲಾ ಎಸ್‌.ಭಟ್ ಅವರಿಗೆ ರಂಗಸನ್ಮಾನ, 24 ರಂದು ದಿವ್ಯರಂಗ ಸಂಸ್ಥೆಯ ‘ಮಾಯ ಮೋಹಜಾಲ’ ನಾಟಕ ಹಾಗೂ ಚಂದ್ರಶೇಖರ ಸಾಸ್ತಾನ ಅವರಿಗೆ ಸನ್ಮಾನ ಮಾಡಲಾಗುವುದು.

25ರಂದು ಸುಮನಾಸಾ ಕೊಡವೂರು ಸಂಸ್ಥೆಯ ‘ರಾಮಭಕ್ತ ಜಾಂಬವತ’ ನಾಟಕ ಹಾಗೂ ಅಬುಬಕ್ಕರ್ ಅವರಿಗೆ ರಂಗ ಸನ್ಮಾನ, 26ರಂದು ಭೂಮಿಕಾ ಸಂಸ್ಥೆಯ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಹಾಗೂ ಸಂಜೀವ ಕರ್ಕೆರಾ ಅವರಿಗೆ ಸನ್ಮಾನ, 27ರಂದು ಸುಮನಸಾ ಕೊಡವೂರಿನ ‘ಕರುಳ ತೆಪ್ಪದ ಮೇಲೆ’ ನಾಟಕ ಹಾಗೂ ಕೆ.ರಾಘವೇಂದ್ರ ಭಟ್‌ ಅವರಿಗೆ ಗೌರವ, 28ರಂದು ಸನ್ನಿಧಿ ಕಲಾವಿದರಿಂದ ‘ಮಾಯೊದ ಬಲ್ಪು’ ತುಳು ನಾಟಕ ಪ್ರದರ್ಶನ ಹಾಗೂ ಯಕ್ಷಗುರು ದಿ.ಯು.ದುಗ್ಗಪ್ಪ ಸ್ಮರಣಾರ್ಥ ಬಿರ್ತಿ ಬಾಲಕೃಷ್ಣ ಗಾಣಿಗರಿಗೆ ‘ಯಕ್ಷಸುಮ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಯುವಕರಲ್ಲಿ ರಂಗಾಸಕ್ತಿ ಬೆಳೆಸಲು ಕಾಲೇಜು ವಿದ್ಯಾರ್ಥಿಗಳಿಗೆ 27ರಂದು ಮಧ್ಯಾಹ್ನ 2 ರಿಂದ 5ರವರೆಗೆ ಕಿರು ಪ್ರಹಸನ ಸ್ಪರ್ಧೆ ಆಯೋಜಿಸಲಾಗಿದೆ. 26ರಂದು ಪತ್ರಕರ್ತ ಬಾಲಕೃಷ್ಣ ಶಿಬಾರ್ಲ ಅವರ ‘ಕಾಪ’ ತುಳು ನಾಟಕಕೃತಿಯನ್ನು ಚಿಂತಕಿ ಆತ್ರಾಡಿ ಅಮೃತಾ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ ಎಂದು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ವಿನಯ್ ಕುಮಾರ್, ಜೊತೆ ಕಾರ್ಯದರ್ಶಿ ಪ್ರಜ್ಞಾ, ಭಾಸ್ಕರ್ ಪಾಲನ್, ಕೋಶಾಧಿಕಾರಿ ಚಂದ್ರಕಾಂತ್ ಕುಂದರ್, ಯೋಗೀಶ್ ಕೊಳಲಗಿರಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.