ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ ಜನಸ್ಪಂದನ ವಿಸ್ತರಣೆ: ಸಚಿವ ವಿ.ಸುನಿಲ್ ಕುಮಾರ್

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Last Updated 10 ಸೆಪ್ಟೆಂಬರ್ 2022, 13:21 IST
ಅಕ್ಷರ ಗಾತ್ರ

ಉಡುಪಿ: ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನಮಾನಸಕ್ಕೆ ತಿಳಿಸಲು ದೊಡ್ಡ ಬಳ್ಳಾಪುರದಲ್ಲಿ ಜನಸ್ಪಂದನ ಸಮಾವೇಶ ನಡೆಸಲಾಗಿದ್ದು, ಜನರ ಪ್ರತಿಕ್ರಿಯೆ ಆಧರಿಸಿ ರಾಜ್ಯದೆಲ್ಲೆಡೆ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಜನ ಸ್ಪಂದನ ಸಮಾವೇಶದಲ್ಲಿ ಜನರ ಸ್ಪಂದನೆಗೆ ಪೂರಕವಾಗಿ ಹೊಸ ಆಲೋಚನೆಗಳೊಂದಿಗೆ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.

ರಾಜ್ಯಮಟ್ಟದಲ್ಲಿ ನಡೆಯುವ ಮಹಾ ಪುರುಷರ ಜಯಂತಿಗಳು ಬೆಂಗಳೂರು ಕೇಂದ್ರಿತವಾಗಿರಬಾರದು. ಎಲ್ಲ ಜಿಲ್ಲೆಗಳಲ್ಲಿ ನಡೆಯಬೇಕು. ಎಲ್ಲ ಜಾತಿ, ಸಮುದಾಯಗಳು ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ನಾರಾಯಣ ಗುರು ಜಯಂತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡಸಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಮಹಾ ಪುರುಷರ ರಾಜ್ಯಮಟ್ಟದ ಜಯಂತಿಗಳು ನಡೆಯಲಿವೆ ಎಂದು ಸುನಿಲ್ ಕುಮಾರ್ ಹೇಳಿದರು.

ಬೆಂಗಳೂರು ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿಲ್ಲ. ಶತಮಾನಗಳಲ್ಲಿ ಕಂಡು ಕೇಳದ ಮಳೆ ಏಕಾಏಕಿ ಸುರಿದ ಪರಿಣಾಮ ಸಮಸ್ಯೆ ಉಂಟಾಗಿದೆ. ಪರಿಸ್ಥಿತಿಯನ್ನು ಮತ್ತಷ್ಟು ಸಮರ್ಥವಾಗಿ ನಿಭಾಯಿಸಬಹುದಿತ್ತು ಎಂಬುದು ಜನರ ಭಾವನೆ. ಆದರೆ, ಪ್ರಕೃತಿಯ ಮುಂದೆ ಎಲ್ಲರೂ ತಲೆ ಬಾಗಬೇಕು. ಸವಾಲುಗಳ ನಡುವೆ ಇಂಧನ ಇಲಾಖೆ 1500 ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಿದೆ. ಸರ್ಕಾರವೂ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿದೆ ಎಂದರು.

ಪ್ರಾಕೃತಿಕ ವಿಕೋಪ ಸಂಭವಿಸಿದ ಬೆನ್ನಲ್ಲೇ ಕೇಂದ್ರದಿಂದ ನಾಲ್ಕು ತಂಡಗಳು ಹಾನಿ ಪರಿಶೀಲನೆಗೆ ರಾಜ್ಯಕ್ಕೆ ಬಂದಿವೆ. ಬೆಳೆ ಹಾನಿ ಹಾಗೂ ಮೂಲಸೌಕರ್ಯ ಹಾನಿ ಪರಿಶೀಲನೆ ನಡೆಯುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತ ಹಾನಿ ವರದಿಯನ್ನು ಕೇಂದ್ರದ ತಂಡಕ್ಕೆ ಸಲ್ಲಿಸಿದ್ದು ಹೆಚ್ಚಿನ ಪರಿಹಾರಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT