ಸುಪ್ರೀಂ ತೀರ್ಪಿನಿಂದ ಭಕ್ತರ ಭಾವನೆಗಳಿಗೆ ಘಾಸಿ

7
ಧರ್ಮಜಾಗೃತಿ ಅಭಿಯಾನದಲ್ಲಿ ನಟ ಶಿವರಾಂ

ಸುಪ್ರೀಂ ತೀರ್ಪಿನಿಂದ ಭಕ್ತರ ಭಾವನೆಗಳಿಗೆ ಘಾಸಿ

Published:
Updated:
Deccan Herald

ಉಡುಪಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀಪು ಕೋಟ್ಯಂತರ ಭಕ್ತರ ಭಾವನೆಗಳಿಗೆ ಘಾಸಿಯುಂಟು ಮಾಡಿದೆ ಎಂದು ಹಿರಿಯ ನಟ ಶಿವರಾಂ ಹೇಳಿದರು.

ನಗರದ ಎಂಜಿಎಂ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಜಾಗೃತಿ ಅಭಿಯಾನ ಹಾಗೂ ಮಹಾ ಸಹಸ್ರ ಅರ್ಚನೆ ಪೂಜೆ ಸಮಾರಂಭರದಲ್ಲಿ ಅವರು ಮಾತನಾಡಿದರು.

‘ನಿವೃತ್ತಿ ಅಂಚಿನಲ್ಲಿರುವ ನ್ಯಾಯಾಧೀಶರು ಬಾಕಿ ಉಳಿದಿರುವ ಮಹತ್ವದ ಪ್ರಕರಣಗಳನ್ನು ತರಾತುರಿಯಲ್ಲಿ ಇತ್ಯರ್ಥಗೊಳಿಸಲು ಮುಂದಾಗಿದ್ದಾರೆ. ಪ್ರಾರ್ಥನೆ ಮಾಡಲು ಮಸೀದಿಯೇ ಆಗಬೇಕಿಲ್ಲ, ಗಂಡು–ಗಂಡು ಮದುವೆಯಾಗಬಹುದು, ವ್ಯಭಿಚಾರ ಕಾನೂನುಬದ್ಧ, ಅಂತಿಮವಾಗಿ ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂಬ ತೀರ್ಪು ನೀಡಿದ್ದಾರೆ. ಇದರಿಂದ ಭಕ್ತರ ಭಾವನೆಗಳಿಗೆ ನೋವಾಗಿದೆ. ಸುಪ್ರೀಂಕೋರ್ಟ್‌ ತೀರ್ಪು ಪುನರ್ ಪರಿಶೀಲನೆಯಾಗಬೇಕು ಎಂದರು.

ಈ ವಿಚಾರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಪ್ರತಿಭಟನೆ ಮಾಡಿದ ಸಾವಿರಾರು ಭಕ್ತರನ್ನು ಬಂಧಿಸಲು ಆದೇಶಿಸಿದ್ದಾರೆ. ಪಂದಳ ಮನೆತನದ ಹಕ್ಕನ್ನು ಕಸಿದುಕೊಳ್ಳುವ ಹೇಳಿಕೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಶಬರಿಮಲೆ ದೇವಸ್ಥಾನ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸಂಪ್ರದಾಯಗಳನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬರುತ್ತಿದೆ. ಸಂಪ್ರದಾಯಗಳು ಹೀಗಿರಬಾರದು, ಹೀಗಿರಬೇಕು ಎಂದು ಹೇಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮಹಿಳೆಯರ ವಿಚಾರದಲ್ಲಿ ತಾರತಮ್ಯ ನಡೆದಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ದೇವರ ಸ್ಥಾನ ಕೊಡಲಾಗಿದೆ. ಆದರೆ, ಸಮಾನತೆಯ ಹೆಸರಿನಲ್ಲಿ ಅನ್ಯಧರ್ಮೀಯ ಮಹಿಳೆಯರು ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದು ಖಂಡನೀಯ ಎಂದರು.

ರಾಮಚಂದ್ರ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಪ್ರಶ್ನಿಸುವ ಅಧಿಕಾರ ಕೇವಲ 70 ವರ್ಷಗಳ ಹಿಂದೆ ಹುಟ್ಟಿರುವ ಸಂವಿಧಾನಕ್ಕೆ ಇಲ್ಲ. ಸಂಪ್ರದಾಯ ಮೀರಿ ಯಾರೂ ಶಬರಿಮಲೆ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎಂದರು.

ಕೇರಳದಲ್ಲಿ ಸರ್ಕಾರ ಉದ್ಧಟತನ ಪ್ರದರ್ಶಿಸುತ್ತಿದ್ದು, ಪ್ರತಿಭಟನಾನಿರತ 3,580 ಯುವಕರನ್ನು ಬಂಧಿಸಿದೆ. ಡಿವೈಎಫ್‌ಐ ಕಾರ್ಯಕತ್ರು ಪೊಲೀಸರ ವೇಷ ಧರಿಸಿ ದೌರ್ಜನ್ಯ ಎಸಗುತ್ತಿದ್ದಾರೆ. ಇದೆಲ್ಲ ಕೇರಳ ಸಿಎಂ ಕುತಂತ್ರ ಎಂದು ಆರೋಪಿಸಿದರು.

ಮುಖಂಡ ಸುಪ್ರಸಿದ್ಧ ಶೆಟ್ಟಿ ಮಾತನಾಡಿ, ‘ಶಬರಿಮಲೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಆದೇಶವನ್ನಿಟ್ಟುಕೊಂಡು ಭಕ್ತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಇದಕ್ಕೆ ಪ್ರತಿಫಲವಾಗಿ ಮುಂದೆ ಕೇರಳದಲ್ಲಿ ಹಿಂದೂ ಸರ್ಕಾರ ರಚನೆಯಾಗಲಿದೆ. ಅಯ್ಯಪ್ಪ ದೇವಸ್ಥಾನದ ಸಂಸ್ಕೃತಿಗೆ, ಸಂಪ್ರದಾಯಗಳಿಗೆ, ಗೌರವಕ್ಕೆ ಚ್ಯುತಿ ಬಂದರೆ ಯಾವುದೇ ತ್ಯಾಗಕ್ಕೂ ಸಿದ್ಧವಿರುವುದಾಗಿ’ ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜೋಡುಕಟ್ಟೆಯಿಂದ ಆರಂಭವಾದ ಶೋಭಾಯಾತ್ರೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಎಂಜಿಎಂ ಮೈದಾನದಲ್ಲಿ ಸಮಾಪನಗೊಂಡಿತು. 

ಪಂದಳ ರಾಜಮನೆತನದ ಶಶಿಕುಮಾರ್ ವರ್ಮಾ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್‌, ಸೇವಾ ಸಮಾಜದ ಜಿಲ್ಲಾಧ್ಯಕ್ಷರಾದ ಗಿರೀಶ್, ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು, ಉಪಾಧ್ಯಕ್ಷರಾದ ಕಿಶೋರ್ ಡಿ. ಸುವರ್ಣ, ಪಾಂಡುರಂಗ ಮಲ್ಪೆ, ರಾಘವೇಂದ್ರ ರಾವ್ ಕೊಡವೂರು, ಭಜನಾ ಮಂಡಳಿಯ ಜಿಲ್ಲಾಧ್ಯಕ್ಷ ಭೋಜರಾಜ್ ಕಿದಿಯೂರು ಅವರೂ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !