ಸೋಮವಾರ, ಮೇ 17, 2021
25 °C
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ರಾಜ್

ಖಾತ್ರಿ ಯೋಜನೆಯಡಿ 22 ಕೆರೆಗಳಿಗೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಲಶಕ್ತಿ ಅಭಿಯಾನದ ಅಂಗವಾಗಿ ಉಡುಪಿ ತಾಲ್ಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ 79 ಕೆರೆಗಳನ್ನು ಗುರುತಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ 22 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ರಾಜ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಸಂಧ್ಯಾ ಕಾಮತ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ಜಲಶಕ್ತಿ ಅಭಿಯಾನದ ಭಾಗವಾಗಿ ಕರೆಗಳನ್ನು ಹೂಳೆತ್ತಲು ಹಾಗೂ ಪುನರುಜ್ಜೀವನಗೊಳಿಸಲಾಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಧನಂಜಯ ಕುಂದರ್ ಮಾತನಾಡಿ, ಪೊಟ್ಟುಕೆರೆಯಲ್ಲಿ ಕೆರೆಗೆ ಸೇರಿದ 4 ಎಕರೆ ಒತ್ತುವರಿಯಾಗುತ್ತಿದೆ. ಕೂಡಲೇ ಅಧಿಕಾರಿಗಳ ಕೆರೆಯನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಕೊಡಬೇಕು. ಪಟ್ಟಿ ತಯಾರಾಗಿದ್ದರೂ ಫಲಾನುಭವಿಗಳಿಗೆ ಇದುವರೆಗೂ ಮಾಹಿತಿ ರವಾನೆಯಾಗಿಲ್ಲ ಎಂದರು. ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಪ್ರತಿಕ್ರಿಯಿಸಿ ಡೀಮ್ಡ್ ಫಾರೆಸ್ಟ್ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿದ್ದು, 2.5 ಎಕರೆಯಲ್ಲಿ ಸ್ವಾಭಾವಿಕವಾಗಿ 30 ಮರ ಹಾಗೂ ಅರಣ್ಯ ಇಲಾಖೆ ನೆಟ್ಟ 50 ಮರವಿದ್ದರೆ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬರುತ್ತದೆ. ಡೀಮ್ಡ್ ಫಾರೆಸ್ಟ್ ಮತ್ತು ಕಂದಾಯ ಭೂಮಿ ಸಮಸ್ಯೆ ಬಗೆಹರಿದ ಬಳಿಕ ನಿವೇಶನ ವಿತರಣೆಯಾಗಲಿದೆ ಎಂದರು.

ಜನಸಾಮಾನ್ಯರು ಮನೆ ಕಟ್ಟಿಕೊಳ್ಳಲು ಮರಳು, ಕಲ್ಲುಗಳನ್ನು ತರಲು ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಠಿಣ ಕಾನೂನುಗಳು ತೊಡಕಾಗಿವೆ ಎಂದು ಸದಸ್ಯ ಧನಂಜಯ ಕುಂದರ್ ತಿಳಿಸಿದರು.

ಸದಸ್ಯೆ ಶರ್ಮಿಳಾ ಮಾತನಾಡಿ, 82ನೇ ಕುದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ತಿಂಗಳುಗಳಿಂದ ಮರಣ ಪ್ರಮಾಣ ಪತ್ರ ಸಿಗುತ್ತಿಲ್ಲ. ಪರಿಣಾಮ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ ಎಂದರು. ಉತ್ತರಿಸಿದ ತಹಶೀಲ್ದಾರ್, ಒಂದೇ ಹೆಸರಿನ ಮತ್ತೊಂದು ಗ್ರಾಮಕ್ಕೆ ಲಾಗಿನ್ ಬಂದಿದ್ದು, ಶೀಘ್ರವೇ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗುವುದು ಎಂದು ಹೇಳಿದರು.‌

ಕಲ್ಯಾಣಪುರ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಸರಿಪಡಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು. ಜತೆಗೆ ಶಂಕರಪುರ ಮಲ್ಲಿಗೆಗೆ ಮತ್ತಷ್ಟು ಪ್ರಚಾರ ನೀಡುವ ಬಗ್ಗೆಯೂ ಸದಸ್ಯರು ಸಭೆಯಲ್ಲಿ ಚರ್ಚೆ ನಡೆಸಿದರು.

ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿಲ್ಪಾ ಆರ್.ಕೋಟ್ಯಾನ್, ಲೆಕ್ಕಾಧಿಕಾರಿ ಮೆಲ್ವಿನ್ ಥಾಮಸ್ ಸಭೆಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು