ಉಡುಪಿ: ಕಿರಿಯ ವಯಸ್ಸಿನಲ್ಲಿಯೇ 7 ವಿಶ್ವದಾಖಲೆಗಳ ಸಾಧನೆ ಮಾಡಿರುವ ಉಡುಪಿಯ ತನುಶ್ರಿ ಪಿತ್ರೋಡಿ 8ನೇ ವಿಶ್ವದಾಖಲೆಗೆ ಸಜ್ಜಾಗಿದ್ದಾರೆ. 4 ನಿಮಿಷಗಳಲ್ಲಿ ನಾಟ್ಯಶಾಸ್ತ್ರದ 108 ಕರಣಗಳನ್ನು ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತನುಶ್ರೀ ಅವರ ತಂದೆ ಉದಯ ಕುಮಾರ್ ಮಾತನಾಡಿ, ನೃತ್ಯ ಗುರುಗಳಾದ ರಾಮಕೃಷ್ಣ ಕೊಡಂಚ ಅವರ ಮಾರ್ಗದರ್ಶನದಲ್ಲಿ ಏ.4ರಂದು ಸಂಜೆ 4ಗಂಟೆಗೆ ಬನ್ನಂಜೆಯ ನಾರಾಯಣ ಗುರು ಆಡಿಟೋರಿಯಂನಲ್ಲಿ ಭರತನಾಟ್ಯದ ಮೂಲಕ ನಾಟ್ಯಶಾಸ್ತ್ರದ ಕರಣಗಳನ್ನು ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಟ್ಯಗುರು ರಾಮಕೃಷ್ಣ ಕೊಡಂಚ ಮಾತನಾಡಿ, ಕಾಲು ಕೈ ಹಾಗೂ ದೇಹದ ಭಂಗಿಯ ಸಂಯೋಜನೆಯೊಂದಿಗೆ ನಾಟ್ಯಶಾಸ್ತ್ರದ ಕರಣಗಳನ್ನು ಪ್ರದರ್ಶಿಸಬೇಕಾಗಿದ್ದು ತನುಶ್ರೀ ಪಿತ್ರೋಡಿ ಸವಾಲಿನ ಕಾರ್ಯಕ್ಕೆ ಮುಂದಾಗಿದ್ದು ಯಶಸ್ಸು ಸಿಗಲಿ ಎಂದು ಹಾರೈಸಿದರು.
ತನುಶ್ರೀ ಪಿತ್ರೋಡಿ 2017ರ ನ.11ರಂದು ‘ನಿರಾಲಾಂಭ ಪೂರ್ಣ ಚಕ್ರಾಸನ’ ಭಂಗಿಯನ್ನು 1 ನಿಮಿಷಕ್ಕೆ 19 ಬಾರಿ ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದು, 2018ರಲ್ಲಿ ‘ಮೋಸ್ಟ್ ಫುಲ್ ಬಾಡಿ ರೆವಲ್ಯೂಷನ್ ಮೇಂಟೇನಿಂಗ್ ಎ ಚೆಸ್ಟ್ ಸ್ಟಾಂಡ್ ಪೊಸಿಷನ್’ ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಪ್ರದರ್ಶಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
2018ರಲ್ಲಿ ಇಟಲಿಯ ರೋಮ್‌ನಲ್ಲಿ ಯೋಗ ಸಾಧಕರೊಂದಿಗೆ ಯೋಗ ಪ್ರದರ್ಶನ ನೀಡಿ ವಿಶ್ವದಾಖಲೆ ಬರೆದಿದ್ದು, 2019ರಲ್ಲಿ ‘ಮೋಸ್ಟ್ ನಂಬರ್ ಆಫ್ ರೋಲ್ಸ್ ಇನ್ ಧನುರಾಸನ’ ವಿಭಾಗದಲ್ಲಿ 1.40 ನಿಮಿಷದಲ್ಲಿ 96 ಸುತ್ತುಗಳನ್ನು ಹಾಕಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.
2020ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 1.14 ನಿಮಿಷದಲ್ಲಿ 100 ಮೀಟರ್ ಕ್ರಮಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದು, 2021ರಲ್ಲಿ ‘ಮೋಸ್ಟ್ ಬ್ಯಾಕ್‌ವರ್ಡ್ ಬಾಡಿ ಸ್ಕಿಪ್ ಇನ್ ಒನ್ ಮಿನಿಟ್’ ವಿಭಾಗದಲ್ಲಿ ಒಂದು ನಿಮಿಷದಲ್ಲಿ 54 ಬಾರಿ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಬಳಿಕ ಸ್ವಾತಂತ್ರ್ಯೋತ್ಸವದ ದಿನ 43.18 ನಿಮಿಷಗಳಲ್ಲಿ 245 ಯೋಗ ಭಂಗಿಗಳ ಪ್ರದರ್ಶಿಸಿ ಗೋಲ್ಡನ್ ಬುಕ್ ರೆಕಾರ್ಡ್ ಮಾಡಿದ್ದಾರೆ.
ರಾಜ್ಯಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿರುವ ತನುಶ್ರೀ ಯೋಗ ರತ್ನ ಪ್ರಶಸ್ತಿ, ನಾಟ್ಯಮಯೂರಿ ಬಿರುದು ಪಡೆದಿದ್ದಾರೆ. 505 ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಬಾಲಪ್ರತಿಭೆ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಾಲಕಿಯ ಮುಡಿಗೇರಿದೆ.
ಸುದ್ದಿಗೋಷ್ಠಿಯಲ್ಲಿ ಸುರಭಿ ರತನ್, ವಿಜಯ ಕೋಟ್ಯಾನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.