ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಅಜಾತ ಶತ್ರು ಆಸ್ಕರ್‌ಗೆ ಅಂತಿಮ ನಮನ

ದಾರಿಯುದ್ದಕ್ಕೂ ಪುಷ್ಪಮಳೆಗರೆದ ಅಭಿಮಾನಿಗಳು ಕಾರ್ಯಕರ್ತರು; ಅಂತಿಮ ದರ್ಶನಕ್ಕೆ ಹೊರ ಜಿಲ್ಲೆಗಳಿಂದ ಬಂದಿದ್ದ ಮುಖಂಡರು
Last Updated 14 ಸೆಪ್ಟೆಂಬರ್ 2021, 13:36 IST
ಅಕ್ಷರ ಗಾತ್ರ

ಉಡುಪಿ: ಕಾಂಗ್ರೆಸ್‌ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಿಗ್ಗೆ ಮಂಗಳೂರಿಂದ ಉಡುಪಿಗೆ ತರಲಾಯಿತು. ಆಂಬುಲೆನ್ಸ್ ಸಾಗುವ ಹೆದ್ದಾರಿಯುದ್ದಕ್ಕೂ ಅಭಿಮಾನಿಗಳು, ಕಾರ್ಯಕರ್ತರು, ರಾಜಕೀಯ ಮುಖಂಡರು ನಿಂತು ಪುಷ್ಪ ಮಳೆಗರೆಯುವ ಮೂಲಕ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಬೆಳಿಗ್ಗೆ 9.45ಕ್ಕೆ ಆಸ್ಕರ್ ಕುಟುಂಬದ ಮೂಲ ಚರ್ಚ್‌ ಆಗಿರುವ ನಗರದ ಶೋಕಮಾತಾ ಇಗರ್ಜಿಗೆ ಪಾರ್ಥಿವ ಶರೀರವನ್ನು ತರಲಾಯಿತು. ಅಜಾತಶತ್ರುವಿನ ಅಂತಿಮ ದರ್ಶನ ಪಡೆಯಲು ಪಕ್ಷಬೇಧ ಮರೆತು ರಾಜಕೀಯ ಮುಖಂಡರು ಧಾವಿಸಿದರು. ಪುಷ್ಪ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಜೆರಾಲ್ಡ್‌ ಐಸಾಕ್ ಲೋಬೊ ಪ್ರಾರ್ಥನೆ ಸಲ್ಲಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಧರ್ಮಪ್ರಾಂತ್ಯದ ಸದಸ್ಯರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಇಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಲಿಲ್ಲ. ಗಣ್ಯರು, ಜನಪ್ರತಿನಿಧಿಗಳು ಮಾತ್ರ ಅಂತಿಮ ದರ್ಶನ ಪಡೆದರು.

ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅಂತಿಮ ನಮನ ಸಲ್ಲಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಶಾಸಕ ಯು.ಟಿ.ಖಾದರ್, ಮುಖಂಡರಾದ ರಮಾನಾಥ ರೈ, ಜೆ.ಆರ್.ಲೋಬೊ, ಐವನ್ ಡಿಸೋಜಾ, ಮಂಜುನಾಥ್ ಭಂಡಾರಿ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

ಬಳಿಕ ಪಾರ್ಥಿವ ಶರೀರವನ್ನು ಬ್ರಹ್ಮಗಿರಿಯ ಆಸ್ಕರ್ ಅವರ ನಿವಾಸಕ್ಕೆ ತರಲಾಯಿತು. ಕುಟುಂಬಸ್ಥರು ಹಾಗೂ ಬಂಧುಗಳು ದರ್ಶನ ಪಡೆದರು. ಆಸ್ಕರ್ ಅವರ ಪತ್ನಿ ಬ್ಲಾಸಂ ಫರ್ನಾಂಡಿಸ್‌, ಪುತ್ರ ಓಶನ್‌, ಪುತ್ರಿ ಓಶನಿ ಇದ್ದರು. ಇಲ್ಲಿಯೂ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಕಾರ್ಯರ್ತರು, ಅಭಿಮಾನಿಗಳು ಬಂದು ದರ್ಶನ ಪಡೆದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಧ್ವಜವನ್ನು ಹೊದಿಸಿ ಗೌರವ ಸಲ್ಲಿಸಿ ಮಾತನಾಡಿದ ಅವರು, ಸೆ.16ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಬೆಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಆಸ್ಕರ್ ಪಾರ್ಥಿವ ಶರೀರವನ್ನು ದರ್ಶನಕ್ಕಿಡಲಾಗುವುದು. ಅಂದು ಹಲವು ರಾಷ್ಟ್ರೀಯ ನಾಯಕರು ಭೇಟಿ ನೀಡಲಿದ್ದು, ದರ್ಶನ ಪಡೆಯಲಿದ್ದಾರೆ ಎಂದರು. ಬಳಿಕ ಆಂಬುಲೆನ್ಸ್ ಮೂಲಕ ಮಂಗಳೂರಿನ ಕಾಂಗ್ರೆಸ್‌ ಕಚೇರಿಗೆ ಫಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು.

ಕೇರಳದ ಮುಖಂಡರಾದ ರಮೇಶ್ ಚಿನ್ನಿತ್ತಾಲ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಂಗಳೂರು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಮಿಥುನ್ ರೈ, ಐವನ್ ಡಿ'ಸೋಜ, ಅಭಯಚಂದ್ರ ಜೈನ್, ಗೋಪಾಲ ಪೂಜಾರಿ, ಬಸವರಾಜ್, ಶ್ಯಾಮಲ ಭಂಡಾರಿ, ಎಂ.ಎ.ಗಪೂರ್, ಬಿಜೆಪಿ ಮುಖಂಡ ಕೆ .ಉದಯಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅಂತಿಮ ದರ್ಶನ ಪಡೆದರು.

‘ಕರಾವಳಿಯಲ್ಲಿ ಪಕ್ಷಕಟ್ಟಿದ ನಾಯಕ’
ಆಸ್ಕರ್ ಅವರೊಂದಿಗೆ ನಾಲ್ಕು ದಶಕಗಳ ರಾಜಕೀಯ ಒಡನಾಟವಿತ್ತು. ಸರಳ, ಸಜ್ಜನ ಹಾಗೂ ಪ್ರಾಮಾಣಿಕ ವ್ಯಕ್ತಿತ್ವದ ಆಸ್ಕರ್ ಕೇಂದ್ರ ಹೆದ್ದಾರಿ ಸಚಿವರಾಗಿದ್ದಾಗ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ‌ ಮೇಲ್ದರ್ಜೆಗೇರಿಸಿದರು. ಕಾರ್ಮಿಕ ಸಚಿವರಾಗಿದ್ದಾಗ ಇಎಸ್‌ಐ ಆಸ್ಪತ್ರೆಗಳನ್ನು ಮೆಡಿಕಲ್ ಕಾಲೇಜುಗಳಾಗಿ ಬದಲಾಯಿಸಿ, ಕಾರ್ಮಿಕರ ಮಕ್ಕಳು ಉಚಿತವಾಗಿ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟರು. ಕಾರ್ಮಿಕ ಇಲಾಖೆಗೆ ಬಲ ತುಂಬಿ ಅಗತ್ಯ ಮೂಲಸೌಕರ್ಯ ಒದಗಿಸಿದರು. ಕರಾವಳಿಯಲ್ಲಿ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಹಾಗೂ ಆಸ್ಕರ್ ಫರ್ನಾಂಡಿಸ್‌ ಪಕ್ಷ ಸಂಘಟನೆ ಹಾಗೂ ಪಕ್ಷ ಬಲವರ್ಧನೆಗೆ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್‌ನಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಆಸ್ಕರ್ ಅವರ ನಿಧನದಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ.
–ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

‘ಎಲ್ಲರನ್ನೂ ಪ್ರೀತಿಸುವ ಗುಣ’
ಸರ್ವವನ್ನೂ ಪ್ರೀತಿಸುವ ಗೌರವಿಸುವ ಅಭಿಮಾನಕ್ಕೆ ಮಣಿಯುವ ಗುಣ ಆಸ್ಕರ್ ಫರ್ನಾಂಡಿಸ್ ಅವರದ್ದು. ರಾಜಕೀಯವಾಗಿ, ವೈಚಾರಿಕವಾಗಿ ಬೇರೆ ಬೇರೆ ಅಭಿಪ್ರಾಯಗಳನ್ನು ಹೊಂದಿದ್ದರೂ ಆದರೆ, ವೈಯಕ್ತಿಕ ಗೌರವ, ವಿಶ್ವಾಸ, ಪ್ರೀತಿ ಇತ್ತು. ಆಸ್ಕರ್ ಫರ್ನಾಂಡಿಸ್‌ ಹಾಗೂ ಡಾ.ವಿ.ಎಸ್‌.ಆಚಾರ್ಯ ಕರಾವಳಿ ನೆಲದ ಆಸ್ತಿಯಾಗಿದ್ದರು. ಹಿರಿಯ ತಲೆಮಾರಿನ ನಾಯಕರ ನಿರ್ಗಮನ ಪಕ್ಷಗಳಿಗೆ ಹಾಗೂ ಇಡೀ ರಾಜಕೀಯ ವ್ಯವಸ್ಥೆಗೆ ನೋವುಂಟು ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆದೇಶದಂತೆ ಆಸ್ಕರ್ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುವುದು.
–ಕೋಟ ಶ್ರೀನಿವಾಸ ಪೂಜಾರಿ, ಸಚಿವ

‘ಅಹಂಕಾರ ಇಲ್ಲದ ನಾಯಕ’
ಆಸ್ಕರ್ ಫರ್ನಾಂಡಿಸ್ ಅವರಷ್ಟು ತಾಳ್ಮೆ ಇರುವ ಹಾಗೂ ಅಹಂಕಾರ ಇಲ್ಲದ ನಾಯಕನನ್ನು ಜೀವಮಾನದಲ್ಲಿ ನೋಡಿಲ್ಲ. ಸಣ್ಣ ಹುದ್ದೆಯಿಂದ ಅತಿದೊಡ್ಡ ಹುದ್ದೆಗೇರಿದರೂ ಆಸ್ಕರ್ ಆರಂಭದಲ್ಲಿ ಹೇಗಿದ್ದರೋ ಅಂತಿಮ ಘಟ್ಟದಲ್ಲೂ ಹಾಗೆಯೇ ಇದ್ದರು. ದೆಹಲಿಯಲ್ಲಿ ಸಂಸದರು ಹಾಗೂ ಸಚಿವರನ್ನು ಭೇಟಿಮಾಡಬೇಕಿದ್ದರೆ ಅನುಮತಿ ಪತ್ರ ಕಡ್ಡಾಯವಾಗಿ ಬೇಕು. ಭೇಟಿಗೆ ಸಮಯ ನಿಗದಿ ಮಾಡದಿದ್ದರೂ ಆಸ್ಕರ್ ಅವರನ್ನು ಸಾಮಾನ್ಯ ವ್ಯಕ್ತಿಯೂ ಭೇಟಿ ಮಾಡಬಹುದಿತ್ತು. ಮಧ್ಯರಾತ್ರಿಯೂ ಅವರು ಕಾರ್ಯಕರ್ತರ ಕೈಗೆ ಸಿಗುತ್ತಿದ್ದರು. ಕರಾವಳಿಯ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಸಿಕ್ಕಿದ್ದರೆ ಅದಕ್ಕೆ ಆಸ್ಕರ್ ಕಾರಣ. ಪ್ರಚಾರಕ್ಕಾಗಿ ಎಂದೂ ಕೆಲಸ ಮಾಡಿದವರಲ್ಲ. ಮತ್ತೊಬ್ಬರು ಆಸ್ಕರ್ ಹುಟ್ಟಲು ಸಾಧ್ಯವಿಲ್ಲ.
–ಪ್ರಮೋದ್ ಮಧ್ವರಾಜ್, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT