ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜಮಾಡಿಯಲ್ಲಿ ದುಪ್ಪಟ್ಟು ಸುಂಕ ಕೈಬಿಡಿ

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ ಎಚ್ಚರಿಕೆ
Last Updated 3 ಡಿಸೆಂಬರ್ 2022, 11:29 IST
ಅಕ್ಷರ ಗಾತ್ರ

ಉಡುಪಿ: ಕಾಪು ತಾಲ್ಲೂಕಿನ ಹೆಜಮಾಡಿ ಟೋಲ್ ಗೇಟ್‌ನಲ್ಲಿ ಸುರತ್ಕಲ್ ಟೋಲ್‌ನ ಸುಂಕ ಸಂಗ್ರಹ ಮಾಡಬಾರದು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಅವರಿಗೆ ಮನವಿ ಸಲ್ಲಿಸಲಾಯಿತು.

ಹಲವು ವರ್ಷಗಳ ಹೋರಾಟದ ಪಲವಾಗಿ ಸುರತ್ಕಲ್ ಟೋಲ್ ಮುಚ್ಚಲ್ಪಟ್ಟಿದ್ದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಸಮಾಧಾ‌ನ ತಂದಿತ್ತು. ಇದರ ನಡುವೆ ಸುರತ್ಕಲ್ ಟೋಲ್ ಗೇಟ್‌ನಲ್ಲಿ ಸಂಗ್ರಹಿಸಲಾಗುತ್ತಿದ್ದ ಸುಂಕವನ್ನು ಹೆಜಮಾಡಿ ಟೋಲ್‌ನಲ್ಲಿ ಸಂಗ್ರಹಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ.

ಹೆಜಮಾಡಿಯ ನವಯುಗ್ ಟೋಲ್‌ನಲ್ಲಿ ಸುರತ್ಕಲ್ ಟೋಲ್ ಸಂಗ್ರಹ ಆದೇಶ ಜಾರಿಯಾದರೆ ಎರಡೂ ಜಿಲ್ಲೆಯ ಜನರಿಗೆ ಆರ್ಥಿಕ ಪೆಟ್ಟು ಬೀಳಲಿದೆ. ಉಡುಪಿ ಜಿಲ್ಲೆಯವರ ಮೇಲೆ ಸುಂಕದ ಭಾರ ಹೆಚ್ಚಾಗಿ ಬೀಳಲಿದೆ. ಪಡುಬಿದ್ರೆಯಿಂದ ಮೂಲ್ಕಿಯ ಆರು ಕಿ.ಮೀ ಏಕಮುಖ ಕಾರಿನ ಪ್ರಯಾಣಕ್ಕೆ ₹ 100 ಪಾವತಿಸಬೇಕಾಗುತ್ತದೆ.

ಸುರತ್ಕಲ್, ಪಡುಬಿದ್ರೆ, ಕಾಪು, ಕಾರ್ಕಳ ಮಧ್ಯೆ ನಿತ್ಯ ಸಾಗಾಟ ಮಾಡುವ ಸ್ಥಳೀಯ ಕೆಂಪು ಕಲ್ಲು, ಜಲ್ಲಿ ಮುಂತಾದ ನಿರ್ಮಾಣ ಸಾಮಾಗ್ರಿಗಳನ್ನು ಹೊತ್ತು ಸಾಗುವ ವಾಹನಗಳಿಗೆ ಹಾಗೂ ಜನಸಾಮನ್ಯರಿಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮುಕ್ಕ, ನಂತೂರು ರಸ್ತೆ ನಿರ್ಮಾಣಕ್ಕೆ ಪ್ರತಿಯಾಗಿ ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹಿಸಲಾಗುತ್ತಿತ್ತು. ಮುಕ್ಕ ನಂತೂರು ರಸ್ತೆ ಆರಂಭವಾಗುವುದು ಹೆಜಮಾಡಿ ಟೋಲ್‌ನಿಂದ 10 ಕಿ.ಮೀ ನಂತರದಿಂದ. ಪಡುಬಿದ್ರೆ, ಉಡುಪಿ, ಕಾರ್ಕಳದಿಂದ ಮುಲ್ಕಿ, ಹಳೆಯಂಗಡಿ‌ಗೆ ಹೋಗುವವರು ಹಾಗೂ ಬರುವವರು ಸುರತ್ಕಲ್ ಟೋಲ್ ರಸ್ತೆ ಪ್ರವೇಶ ಮಾಡದಿದ್ದರೂ ಹೆಜಮಾಡಿ ಟೋಲ್‌ನಲ್ಲಿ ಸುಂಕ ಕಟ್ಟಬೇಕಾಗುತ್ತದೆ. ಇದು ಕಾನೂನು ಬಾಹಿರ ನಿರ್ಧಾರ.

ಮುಕ್ಕದಿಂದ ಹೆಜಮಾಡಿ ಭಾಗದ ರಸ್ತೆ ಮಾತ್ರ ನವಯುಗ್ ಸಂಸ್ಥೆಯ ಅಧೀನದಲ್ಲಿದೆ. ಸುರತ್ಕಲ್, ನಂತೂರು ಭಾಗದ ರಸ್ತೆಗೂ ಹೆಜಮಾಡಿ ಟೋಲ್‌ಗೂ ಯಾವುದೇ ಸಂಬಂಧ ಇಲ್ಲ. ಮಂಗಳೂರಿನ ವಾಹನಗಳಿಗೆ ಸುರತ್ಕಲ್ ಟೋಲ್‌ಗೇಟ್‌ನಲ್ಲಿ‌ ಹಿಂದೆ ಇದ್ದ ಟೋಲ್ ರಹಿತ ಪ್ರಯಾಣದ ಅವಕಾಶ ಹೆಜಮಾಡಿಯಲ್ಲಿ ಸಿಗಲಿದೆಯೇ ಎಂಬುದು ಅಧಿಕೃತ ವೇದಿಕೆಯಲ್ಲಿ ನಿರ್ಧಾರವಾಗಬೇಕು.

ಸರ್ಕಾರ ದುಪ್ಪಟ್ಟು ಸುಂಕ ವಸೂಲಿ ಮಾಡಿದರೆ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಹೆಜಮಾಡಿ ಟೋಲ್ ಗೇಟ್ ಮುಂಭಾಗ ಭಾರಿ ಪ್ರತಿಭಟನೆ ನಡೆಸಲಿದೆ. ಜಿಲ್ಲಾಡಳಿತ ಹೆದ್ದಾರಿ ಪ್ರಾಧಿಕಾರದ ಆದೇಶಕ್ಕೆ ತಡೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಸಹ ಸಂಚಾಲಕ ಶೇಖರ ಹೆಜಮಾಡಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಕೊಳ್ಕೆಬೈಲ್‌ ಕಿಶನ್ ಹೆಗ್ಡೆ, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಕವಿರಾಜ್, ಪ್ರಶಾಂತ್ ಪೂಜಾರಿ, ಶರತ್ ಶೆಟ್ಟಿ, ಶ್ರೀನಿವಾಸ್ ಹೆಬ್ಬಾರ್, ಸಾಯಿರಾಜ್ ಕಿದಿಯೂರು, ಯತೀಶ್ ಕರ್ಕೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT