ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ ನಿರ್ಮಾಣ

7
ಫೋನ್‌ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ

ಅಪಘಾತ ತಡೆಗೆ ಟ್ರಾಫಿಕ್ ಸಿಗ್ನಲ್‌ ನಿರ್ಮಾಣ

Published:
Updated:
Deccan Herald

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ವ್ಯಾಪ್ತಿಯಲ್ಲಿ ಬರುವ ಸಂತೆಕಟ್ಟೆ, ಕಟಪಾಡಿ, ಅಂಬಲಪಾಡಿ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಸಿಗ್ನಲ್‌ ಆಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಶುಕ್ರವಾರ ನಡೆದ ಸಾರ್ವಜನಿಕರ ಫೋನ್‌ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತೆಕಟ್ಟೆ, ಕಟಪಾಡಿ, ಅಂಬಲಪಾಡಿ ಜಂಕ್ಷನ್ ಸಂಬಂಧಿಸಿದಂತೆ ಹಲವೆಡೆ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ಸಂಚಾರ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೂ ಸಮಸ್ಯೆಗೆ ಪೂರ್ಣ ಪರಿಹಾರ ಸಿಗುತ್ತಿಲ್ಲ. ಸಿಗ್ನಲ್ ಅಳವಡಿಕೆಯಿಂದ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ಥಳೀಯರೊಬ್ಬರು ಕರೆಮಾಡಿ, ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ಹಟ್ಟಿಯಂಗಡಿ ಗ್ರಾಮವು ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಬರುತ್ತಿದೆ. ಇದರಿಂದ ಗ್ರಾಮಸ್ಥರಿಗೆ ದೂರುನೀಡಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಮೊದಲಿದ್ದಂತೆ ಈ ಗ್ರಾಮವನ್ನು ಕುಂದಾಪುರ ಠಾಣಾ ವ್ಯಾಪ್ತಿಗೆ ಸೇರಿಸಬೇಕು ಎಂದು ಮನವಿ ಮಾಡಿದರು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಎಸ್‌ಪಿ ಭರವಸೆ ನೀಡಿದರು.

ಗಂಗೊಳ್ಳಿಯ ಸ್ಮಶಾನದಲ್ಲಿ ಒಂದು ಜಾತಿಯವರು ಮಾತ್ರ ಅಂತ್ಯಸಂಸ್ಕಾರಕ್ಕೆ ಬಳಸುತ್ತಿದ್ದಾರೆ. ಇತರ ಜಾತಿಗಳವರಿಗೆ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಸ್ಪಂದನೆ ಸಿಕ್ಕಿಲ್ಲ. ಅಲ್ಲಿದ್ದ ಸಾರ್ವಜನಿಕ ಸ್ಮಶಾನ ಎಂಬ ಬೋರ್ಡ್‌ ಅನ್ನು ಕೂಡ ಗ್ರಾಮ ಪಂಚಾಯಿತಿ ತೆರವು ಮಾಡಿದೆ. ತಹಶೀಲ್ದಾರ್‌ ಎಲ್ಲ ಜಾತಿಯವರಿಗೆ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡುವಂತೆ ಸೂಚಿಸಿದರೂ ಗ್ರಾಮಪಂಚಾಯಿತಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಸಂಬಂಧ ಕುಂದಾಪುರ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ಅವರಿಗೆ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಲಾಗುವುದು ಎಂದರು.

ಉಡುಪಿ ನಗರಸಭೆ, ಕೆ.ಎಸ್‌.ಆರ್‌.ಟಿ.ಸಿ ಬಸ್ ನಿಲ್ದಾಣದ ಎದುರಿನ ಪಾರ್ಕಿಂಗ್ ಸಮಸ್ಯೆ ಕುರಿತ ದೂರಿಗೆ ಪ್ರತ್ರಿಯಿಸಿದ ಎಸ್ಪಿ, ನಗರ ಹಾಗೂ ಮಣಿಪಾಲದಲ್ಲಿ ಸ್ಥಳಗಳನ್ನು ಗುರುತಿಸಿ ನಗರಸಭೆ ಬಹುಮಹಡಿ ಪಾರ್ಕಿಂಗ್ ಕಟ್ಟಡಗಳನ್ನು ನಿರ್ಮಿಸಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಅಭಿಪ್ರಾಯಪಟ್ಟರು.

ಮಲ್ಪೆ ಬಂದರಿನಲ್ಲಿ ಕೆಲಸಕ್ಕೆ ಬರುವವರು ಮಕ್ಕಳನ್ನು ಜತೆಗೆ ಕರೆ ತರುತ್ತಿರುವ ಬಗ್ಗೆ ಮಾಹಿತಿ ಇದ್ದು, ಮಕ್ಕಳ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಮಲ್ಪೆ ಪಡುಕೆರೆ ಸೇತುವೆ ಮೇಲೆ ಅಡ್ಡಾದಿಡ್ಡಿ ವಾಹನಗಳು ಸಂಚರಿಸುತ್ತವೆ. ಇದರಿಂದ ಸಮಸ್ಯೆಯಾಗಲಿದೆ ಎಂದು ಸಾರ್ವಜನಿಕರು ದೂರಿದರು. ಸಂಚಾರ ಸಮಸ್ಯೆ ಸೂಕ್ತ ಕ್ರಮಕ್ಕಾಗಿ ಸಂಚಾರ ಪೊಲೀಸ್ ಠಾಣಾಧಿಕಾರಿಗಳಿಗೆ ಎಸ್‌ಪಿ ಸೂಚನೆ ನೀಡಿದರು.

ಉಳಿದಂತೆ ಜೂಜಾಟಕ್ಕೆ ಸಂಬಂಧಿಸಿ ಪ್ರತ್ಯೇಕ ಎರಡು ದೂರು, ಮರಳುಗಾರಿಕೆ, ಅಕ್ರಮ ಕಲ್ಲುಗಣಿಗಾರಿಕೆ ಸಂಬಂಧಿಸಿ ದೂರುಗಳು ಕೇಳಿ ಬಂದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !