ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಲಿಪಿಯ ದೊಡ್ಡ ಶಾಸನ ಪತ್ತೆ

ಭಟ್ಕಳ ಸಮೀಪದ ಗುಣವಂತೆಯ ಶಂಭುಲಿಂಗೇಶ್ವರ ದೇಗುಲದಲ್ಲಿ ಸಿಕ್ಕ ಶಾಸನ
Last Updated 25 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಉಡುಪಿ: ಭಟ್ಕಳ ಸಮೀಪದ ಗುಣವಂತೆಯ ಶಂಭುಲಿಂಗೇಶ್ವರ ಸ್ವಾಮಿಯ ದೇಗುಲದ ಹೊರಾಂಗಣದಲ್ಲಿ ತುಳು ಲಿಪಿಯಲ್ಲಿರುವ ದೊಡ್ಡ ಶಾಸನ ಪತ್ತೆಯಾಗಿದೆ ಎಂದು ಉಡುಪಿಯ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್‌.ಎ.ಕೃಷ್ಣಯ್ಯ ತಿಳಿಸಿದ್ದಾರೆ.

ಹಿಂದೆ, ಮಂಗಳೂರಿನ ಪಾಂಡೇಶ್ವರದಲ್ಲಿ ದೊರೆತ ಶಾಸನವೇ ಅತಿದೊಡ್ಡ ತುಳು ಲಿಪಿ ಶಾಸನ ಎಂದು ಪರಿಗಣಿಸಲಾಗಿತ್ತು. ಆದರೆ, ಅದರಲ್ಲಿ ಅಕ್ಷರಗಳು ಸವೆದುಹೋಗಿದ್ದವು. ಗುಣವಂತೆಯಲ್ಲಿ ಈಗ ದೊರೆತಿರುವ ಶಾಸನ ಓದುವಂತಿದೆ. ದೊಡ್ಡದಾಗಿಯೂ ಇದೆ ಎಂದು ಅವರು ತಿಳಿಸಿದ್ದಾರೆ.

ಶಂಭು ಲಿಂಗೇಶ್ವರ ದೇವಾಲಯದಲ್ಲಿ 20 ವರ್ಷಗಳ ಹಿಂದೆ ಈ ಶಾಸನಗಳು ಗರ್ಭಗುಡಿ ಪೌಳಿಯಲ್ಲಿದ್ದವು. ಜೀರ್ಣೋದ್ಧಾರ ಸಂದರ್ಭ ಅವುಗಳನ್ನು ಅರ್ಚಕರು ಸಂರಕ್ಷಣೆ ಮಾಡಿದ್ದಾರೆ.ಬಳಪದ ಕಲ್ಲಿನಲ್ಲಿ ಬರೆದಿರುವ ತುಳು ಲಿಪಿ ಶಾಸನವು 55 ಸೆ.ಮಿ ಉದ್ದ, 33 ಸೆ.ಮಿ ಅಗಲ, ಐದು ಅಕ್ಷರಗಳ ಗಾತ್ರ 1 ಸೆ.ಮೀ ಇದ್ದು, 43 ಸಾಲುಗಳಿವೆ. ಪ್ರತಿ ಸಾಲಿನಲ್ಲಿ 35 ರಿಂದ 40 ಅಕ್ಷರಗಳಿವೆ ಎಂದು ಕೃಷ್ಣಯ್ಯ ಮಾಹಿತಿ ನೀಡಿದ್ದಾರೆ.

ಈ ಪ್ರಾಂತ್ಯದಲ್ಲಿ ಒಂಬತ್ತು ಶಾಸನಗಳು ಇದ್ದು, ಎಲ್ಲವೂ ಸಂರಕ್ಷಿಸಲ್ಪಟ್ಟಿವೆ. ವಿಶೇಷವಾಗಿ ಗೆರೆ ಹಾಕಿದ ಎರಡೂ ಬದಿಯಲ್ಲಿನ ಶಾಸನದ ತುಳು ಲಿಪಿಯು ಕನ್ನಡ ಭಾಷೆಯಲ್ಲಿದೆ. ಬಹುಶಃ ಇಲ್ಲಿರುವ ಎಲ್ಲಾ ಶಾಸನಗಳಿಗಿಂತ ಗುಣವಂತೆಯ ಶಾಸನ ಹಳೆಯದು ಎಂದು ತಿಳಿಸಿದ್ದಾರೆ.

2016ರಲ್ಲಿ ಡಾ.ಸುರೇಶ ತಾಂಡೇಲ್ಕರ್‌ ಅವರ ಸಹಕಾರದೊಂದಿಗೆ ಶಾಸನಗಳನ್ನು ಸರಳವಾಗಿ ಪಡಿಅಚ್ಚು ತೆಗೆಯಲಾಗಿತ್ತು. ಶಾಸನದಲ್ಲಿ ಬರುವ ತುಳುಲಿಪಿ ಅಕ್ಷರಗಳೂ ಭಿನ್ನವಾಗಿವೆ. ಸಂಯಕ್ತಾಕ್ಷರಗಳ ಹೊಂದಾಣಿಕೆಯೂ ವಿಶೇಷವಾಗಿದೆ ಎಂದು ಇತಿಹಾಸ ಹಾಗೂ ಶಾಸನ ಲಿಪಿ ತಜ್ಞ ಸುಭಾಸ್ ನಾಯಕ್ ಶಿರ್ವ ತಿಳಿಸಿದ್ದಾರೆ.

ಶಾಸನದ ಓದುವಿಕೆಯಲ್ಲಿ ಶಿಕ್ಷಕರಾದ ಶ್ರೀಧರಭಟ್, ರವಿ ಆಳ್ವ, ರಾಧಾಕೃಷ್ಣ ಬೆಳ್ಳೂರು ಸಹಕಾರ ನೀಡುತ್ತಿದ್ದಾರೆ. ಲಿಪಿ ಶಾಸ್ತ್ರ ಹಾಗೂ ಶಾಸನೋಕ್ತ ಚೌಕಟ್ಟಿನಲ್ಲಿ ಪೂರ್ವ ಇತಿಹಾಸದ ಅಧ್ಯಯನಕ್ಕೆ ಸಹಕಾರ ನೀಡುವುದಾಗಿ ಕೆರೆಮನೆ ಯಕ್ಷಗಾನ ಕೇಂದ್ರದ ನಿರ್ದೇಶಕ ಶಿವಾನಂದ ಹೆಗ್ಗಡೆ, ಅರ್ಚಕರಾದ ಮಹಾಭಲೇಶ್ವರ ಶಿವರಾಮ ಭಟ್ಟ ಭರವಸೆ ನೀಡಿದ್ದಾರೆ ಎಂದು ಕೃಷ್ಣಯ್ಯ ತಿಳಿಸಿದ್ದಾರೆ.

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ತುಳುಲಿಪಿ ಶಾಸನಗಳ, ಹಸ್ತಪ್ರತಿಗಳ ಐತಿಹಾಸಿಕ ಆಕರಗಳೂ ಅಗತ್ಯ. ಅವುಗಳನ್ನು ಸಂರಕ್ಷಣೆ ಮಾಡಲು ‘ಕಲ್ಲುಬರಹದಿಂದ ತಾಡೊಲೆಗೆ’ ಪರಿಕಲ್ಪನೆಯ ಕ್ರಿಯಾಯೋಜನೆಯಡಿ ಇದುವರೆಗೂ 40 ತುಳುಲಿಪಿ ಶಾಸನಗಳ ಅಧ್ಯಯನ ಹಾಗೂ ಮರು ಅಧ್ಯಯನ ನಡೆಸಲಾಗಿದೆ. ಅಧ್ಯಯನದ ಪ್ರಕಾರ ತುಳು ಭಾಷೆಗೆ 2,600 ವರ್ಷಗಳ ಇತಿಹಾಸವಿದೆ ಎಂದು ‍ಪ್ರೊ.ಎಸ್‌.ಎ.ಕೃಷ್ಣಯ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT