ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯ ಖಚಿತ: ಶೋಭಾ ಕರಂದ್ಲಾಜೆ ವಿಶ್ವಾಸ

ಫಲಿತಾಂಶಕ್ಕೂ ಮುನ್ನದಿನ ವಿಶ್ವಾಸ
Last Updated 22 ಮೇ 2019, 12:48 IST
ಅಕ್ಷರ ಗಾತ್ರ

ಉಡುಪಿ: ದೇಶದೆಲ್ಲೆಡೆ ಬಿಜೆಪಿ ಪರವಾಗಿರುವ ಜನಾಭಿಪ್ರಾಯವನ್ನು ಸಹಿಸದ ವಿರೋಧ ಪಕ್ಷಗಳು ಮತಯಂತ್ರಗಳನ್ನು ಅನುಮಾನದಿಂದ ನೋಡುತ್ತಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಫಲಿತಾಂಶದ ಮುನ್ನಾ ದಿನವಾದ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,‘ಕುಣಿಯಲಾರದವರಿಗೆ ನೆಲಡೊಂಕು’ ಎಂಬ ಪರಿಸ್ಥಿತಿ ವಿರೋಧ ಪಕ್ಷಗಳಿಗೆ ಬಂದಿದೆ. ಗೆಲ್ಲಲು ಸಾಮರ್ಥ್ಯ ಇಲ್ಲದವರು ಮತಯಂತ್ರಗಳನ್ನು ದೂಷಿಸುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಮತಯಂತ್ರದ ಬಗ್ಗೆ ಚಕಾರ ಎತ್ತುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಮತಯಂತ್ರ ಸರಿಯಿಲ್ಲ ಎಂದು ಆರೋಪ ಮಾಡುತ್ತಾರೆ. ಇಲ್ಲಿ ಮತಯಂತ್ರ ದುರ್ಬಲವಲ್ಲ; ಬದಲಾಗಿ ಮಹಾಘಟಬಂಧನ ನಾಯಕರ ಮನಸ್ಥಿತಿ ದುರ್ಬಲವಾಗಿದೆ ಎಂದು ತಿರುಗೇಟು ನೀಡಿದರು.

ಫಲಿತಾಂಶದ ಮೇಲೆ ಕುತೂಹಲ:

ಈ ಬಾರಿಯ ಚುನಾವಣೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೆಮತದಾರರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಲು ಶಕ್ತಿ ಬರಲಿದೆ. ಇದಕ್ಕೆ ಪೂರಕವಾದ ವಾತಾವರಣ ದೇಶದಲ್ಲಿದೆ. ಮೇ 23ರ ಫಲಿತಾಂಶದ ಮೇಲೆ ಕುತೂಹಲ ಹೆಚ್ಚಾಗಿದೆ ಎಂದರು.

ದೊಡ್ಡ ಅಂತರದ ಗೆಲುವು ಖಚಿತ:

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ದೊಡ್ಡ ಅಂತರದ ಗೆಲುವು ಸಾಧಿಸುವ ವಿಶ್ವಾಸವಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಬಿಜೆಪಿ ಅತ್ಯಂತ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ. ಚುನಾವಣಾ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಟ್ಟ ಭರವಸೆಯಂತೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸಂಸದರನ್ನು ಗೆಲ್ಲಿಸಿ ಅವರ ಕೈ ಬಲಪಡಿಸುತ್ತೇವೆ ಎಂದರು.

ದುರ್ಬಲ ಅಸ್ಥಿರ ರಾಜ್ಯ ಸರ್ಕಾರ:

ಕಾಂಗ್ರೆಸ್‌ ನಾಯಕರ ವಿರುದ್ಧ ರೋಷನ್‌ ಬೇಗ್‌ ಹೇಳಿಕೆ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ವಿಶ್ವನಾಥ್ ಅವರಿಂದ ಸಿದ್ದರಾಮಯ್ಯ ವಿರುದ್ಧ ಟೀಕೆ, ರಮೇಶ್ ಜಾರಕಿಹೊಳಿ ಅವರ ಬಂಡಾಯ, ಹೀಗೆ ರಾಜ್ಯ ಸರ್ಕಾರ ಗೊಂದಲಗಳಲ್ಲಿ ಸಿಲುಕಿದ್ದು,ದುರ್ಬಲ ಹಾಗೂ ಅಸ್ಥಿರವಾಗಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಜನರ ಹಿತ ಮರೆತಿದೆ. 160ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಜಾನುವಾರುಗೆ ಮೇವಿಲ್ಲ. ಕುಡಿಯಲು ನೀರಿಲ್ಲ. ಇಂತಹ ದುಸ್ಥಿತಿಯಲ್ಲೂ ಮುಖ್ಯಮಂತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು, ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಈ ಸರ್ಕಾರ ಇದ್ದರೂ ಒಂದೇ, ಬಿದ್ದರೂ ಒಂದೇ ಎಂದು ವಾಗ್ದಾಳಿ ನಡೆಸಿದರು.

‘ಜನ ಸೇವೆಯೇ ಜನಾರ್ಧನನ ಸೇವೆ’ ಎಂಬ ಮಾತಿದೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಜನರ ಸೇವೆ ಮಾಡುವುದನ್ನು ಬಿಟ್ಟು ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ದೇವರು ಕೂಡ ಮುಖ್ಯಮಂತ್ರಿಯ ಕೈ ಹಿಡಿಯುವುದಿಲ್ಲ ಎಂದು ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT