ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟ | ಸಾಸ್ತಾನ ಮೀನು ಮಾರುಕಟ್ಟೆ ಅವ್ಯವಸ್ಥೆ: ಲೋಕಾಯುಕ್ತ ತನಿಖಾಧಿಕಾರಿ ಪರಿಶೀಲನೆ

ಸಾಸ್ತಾನ ಮೀನು ಮಾರುಕಟ್ಟೆ ಅವ್ಯವಸ್ಥೆ, ಕಳಪೆ ಕಾಮಗಾರಿ
Published : 25 ಸೆಪ್ಟೆಂಬರ್ 2024, 5:33 IST
Last Updated : 25 ಸೆಪ್ಟೆಂಬರ್ 2024, 5:33 IST
ಫಾಲೋ ಮಾಡಿ
Comments

ಕೋಟ(ಬ್ರಹ್ಮಾವರ): ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಸ್ತಾನ ಮೀನು ಮಾರುಕಟ್ಟೆ ಕಳಪೆ ಕಾಮಗಾರಿ ದೂರಿನನ್ವಯ ಪರಿಶೀಲನೆಗಾಗಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದರು.

ಮೀನುಗಾರಿಕಾ ಇಲಾಖೆ ಮೂಲಕ ನಬಾರ್ಡ್‌ ಅನುದಾನದಡಿ ಹೈದರಾಬಾದ್‌ನ ಎನ್‌ಎಫ್‌ಡಿವಿ ಸಂಸ್ಥೆಯು ಸುಮಾರು ₹2 ಕೋಟಿ ವೆಚ್ಚದಲ್ಲಿ ಮೀನುಮಾರುಕಟ್ಟೆ ಕಾಮಗಾರಿ ನಡೆಸಿತ್ತು. ಕಳಪೆ ಕಾಮಗಾರಿ ಮತ್ತು ಮೀನು ಮಾರುಕಟ್ಟೆಯ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಥೋಮಸ್ ರೋಡ್ರಿಗಸ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತದ ಐ.ಒ. ಶುಭ ಟಿ. ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು.

ಪ್ರಸ್ತುತ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಥೋಮಸ್ ರೋಡ್ರಿಗಸ್ ಲೋಕಾಯುಕ್ತ ಅಧಿಕಾರಿಗಳಿಗೆ ಮನದಟ್ಟು ಮಾಡಿ ಕಟ್ಟಡ ಕಾಮಗಾರಿಯಲ್ಲಿ ಕಳಪೆ, ಅಲ್ಲಿನ ನಿರುಪಯುಕ್ತ ನೀರು ಹೋಗುವ ಕಾಲುವೆ, ಶೌಚಾಲಯ ಸೇರಿದಂತೆ ವಿವಿಧ ಅಂಗಡಿ ಕೋಣೆಗಳ ಕಾಮಗಾರಿಗಳ ಹಾಗೂ ನಿರ್ವಹಣೆಯ ರೀತಿಯನ್ನು ಮನದಟ್ಟು ಮಾಡಿದರು.

ಇದಕ್ಕೆ ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿ ಶುಭ ಪಂಚಾಯಿತಿ ಪಿಡಿಒ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಹಾಗೂ ಮೀನುಗಾರಿಕಾ ಇಲಾಖೆಗಳ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಲೋಪಗಳ ಪಟ್ಟಿ ಮಾಡಿ ತನಿಖೆ ನಡೆಸುವುದಾಗಿ ತಿಳಿಸಿದರು.

ಮಹಿಳಾ ಮೀನುಗಾರರ ಅಳಲು:

ಸ್ಥಳದಲ್ಲಿದ್ದ ಮಹಿಳಾ ಮೀನುಗಾರರು 19 ಒಣ ಮೀನು ಮಾರಾಟ ಮಳಿಗೆಗಳನ್ನು ಮೀನುಗಾರರಿಗೆ ನೀಡುವ ಬದಲು ಗ್ರಾಮ ಪಂಚಾಯಿತಿ ಏಲಂ ಮೂಲಕ ಖಾಸಗಿ ವ್ಯಾಪಾರಸ್ಥರಿಗೆ ಅಕ್ರಮವಾಗಿ ನೀಡಿದ್ದಾರೆ. ಕಟ್ಟಡದ ನೀಲನಕ್ಷೆಯಲ್ಲಿ 200 ಮಹಿಳಾ ಮಾರಾಟಗಾರರು ಕೂರುವ ವ್ಯವಸ್ಥೆ ತೋರಿಸಲಾಗಿದ್ದರೂ, ಪ್ರಸ್ತುತ ಕೇವಲ 64 ಜನ ಮಾರಾಟಗಾರರು ಕುಳಿತುಕೊಳ್ಳಲು ಯೋಗ್ಯವಾಗಿದೆ. ಅಲ್ಲದೆ ಅಸಮರ್ಪಕ ಕಾಮಗಾರಿಯಿಂದ ಮಾರುಕಟ್ಟೆಯ ಪ್ರತಿ ವ್ಯವಸ್ಥೆಯು ಅವ್ಯವಸ್ಥೆಗೆ ಆಗರವಾಗಿದೆ. ನಮಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿ ಅಳಲನ್ನು ತೋಡಿಕೊಂಡರು.

ಈ ಸಂದರ್ಭ ನಿರ್ಮಿತಿ ಕೇಂದ್ರದ ಎಂಜಿನಿಯರ್ ಗಣೇಶ, ಕೆಎಫ್‌ಡಿಸಿ ಮಂಗಳೂರಿನ ಸೀನಿಯರ್‌ ಮ್ಯಾನೇಜರ್ ಮಲ್ಲೇಶ್ ,ಪ್ರಾಜೆಕ್ಟ್ ಇಂಜಿನಿಯರ್ ಮನೋಹರ್, ಲೋಕೋಪಯೋಗಿ ಪರಿಶೀಲನಾ ಇಂಜಿನಿಯರ್ ಸಮ್ರಾಟ್ ಗೌಡ, ಐರೋಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮಾಶಂಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT