ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರ್ವ: ಸಂಕಷ್ಟದಲ್ಲಿ ಸಾಂಪ್ರದಾಯಿಕ ಕೈರಂಪಣಿ ಮೀನುಗಾರರು

ಕರಾವಳಿಯಲ್ಲಿ ಪ್ರತಿಕೂಲ ಹವಾಮಾನ, ಸಮುದ್ರಕ್ಕಿಳಿಯದ ಸಾಂಪ್ರಾದಾಯಿಕ ಕೈರಂಪಣಿ ದೋಣಿಗಳು
Published 21 ಮೇ 2024, 6:02 IST
Last Updated 21 ಮೇ 2024, 6:02 IST
ಅಕ್ಷರ ಗಾತ್ರ

ಶಿರ್ವ: ಕರಾವಳಿಯಲ್ಲಿ ಪ್ರತಿಕೂಲ ಹವಾಮಾನ ಕಾರಣದಿಂದಾಗಿ ಸಮುದ್ರದಲ್ಲಿ ನೀರಿನ ಅಬ್ಬರ ಹೆಚ್ಚಿದ್ದು, ವಿಪರೀತ ಗಾಳಿಯಿಂದಾಗಿ ಕಡಲ ಅಲೆಗಳು ಉಗ್ರ ಸ್ವರೂಪ ತಾಳಿವೆ. ಕಟಪಾಡಿಯ ಮಟ್ಟು ಕರಾವಳಿ ತೀರದಲ್ಲಿ ಕೈರಂಪಣಿ ಮೀನುಗಾರರು ಸೋಮವಾರ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿಲ್ಲ. ಕಸುಬಿಲ್ಲದೆ ದಡದಲ್ಲೇ ಉಳಿದ ಸಾಂಪ್ರದಾಯಿಕ ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ.

ಮಳೆ–ಗಾಳಿಯಿಂದ ಕೂಡಿದ ಪ್ರತಿಕೂಲ ವಾತಾವರಣ ಉಂಟಾಗಿರುವುದರಿಂದ ಕಡಲು ಪ್ರಕ್ಷಬ್ಧಗೊಳ್ಳುವ ಸಂಭವವಿರುವುದರಿಂದ ಮೇ 20ರಿಂದ 22ರ ತನಕ ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಕಾ ಇಲಾಖೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ದುಡಿಮೆಯಿಲ್ಲದೆ ದಡದಲ್ಲೇ ಉಳಿದಿರುವ ಮೀನುಗಾರರು ಕಂಗಾಲಾಗಿದ್ದಾರೆ.

ಮಲ್ಪೆ ಪಡುಕರೆಯಿಂದ ಕಾಪು ಕೈಪುಂಜಾಲ್ ತನಕ ಏಳೆಂಟು ಕಿಲೋ ಮೀಟರ್ ಸಮುದ್ರ ತೀರ ಪ್ರದೇಶದಲ್ಲಿ ನೂರಾರು ಕೈರಂಪಣಿ ದೋಣಿಗಳು ಮೀನುಗಾರಿಕೆ ನಿರತವಾಗಿದ್ದು, ನೂರಾರು ಮೀನುಗಾರರ ಕುಟುಂಬಗಳು ಕೈರಂಪಣಿ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದಾರೆ. ಕೈರಂಪಣಿ ಮೀನುಗಾರರು ಬೂತಾಯಿ, ಬಂಗುಡೆ, ಸಿಲ್ವರ್ ಮೀನು ಸೇರಿದಂತೆ ಇನ್ನಿತರ ಸಣ್ಣ ಪುಟ್ಟ ಮೀನುಗಳ ಮೀನುಗಾರಿಕೆ ಮಾಡಿ ಜೀವನೋಪಾಯ ಕಂಡುಕೊಂಡಿದ್ದು, ಸಾಂಪ್ರದಾಯಿಕ ಮೀನುಗಾರಿಕೆಯೇ ಜೀವನಾಧಾರವಾಗಿದೆ.

ಪ್ರತಿನಿತ್ಯ ಮುಂಜಾನೆ ಸೂರ್ಯ ಮೂಡುವ ಮೊದಲು ಕಡಲಿಗಿಳಿದು ಕಡಲತೀರಕ್ಕೆ ಅನತಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಈ ಭಾಗದ ಮೀನುಗಾರರು ಕಡಲನ್ನೇ ನಂಬಿಕೊಂಡಿದ್ದಾರೆ. ತೀವ್ರ ಮತ್ಸ್ಯಕ್ಷಾಮ ಎದುರಿಸುತ್ತಿರುವ ಮೀನುಗಾರರು ಮತ್ತೆ ಪ್ರತಿಕೂಲ ವಾತಾವರಣದಿಂದಾಗಿ ಆಕಾಶದತ್ತ ದಿಟ್ಟಿ ಹಾಯಿಸಿ ಕುಳಿತಿದ್ದಾರೆ.

ಕೈರಂಪಣಿ ಮೀನುಗಾರರು ಹಿಡಿದ ಮೀನನ್ನು ಸೂರ್ಯೋದಯ ಬಳಿಕ ಕಡಲ ತಡಿಯಲ್ಲೇ ವಿಲೇವಾರಿ ಅಥವಾ ಮಾರಾಟ ಮಾಡುತ್ತಾರೆ. ಸ್ಥಳೀಯರು ಅವರಿಂದ ಕೊಂಡುಕೊಳ್ಳುತ್ತಾರೆ. ಬೇಡಿಕೆಯಿಲ್ಲದೆ ಮೀನು ಉಳಿದಲ್ಲಿ ಮತ್ತೆ ಮಲ್ಪೆ ಬಂದರು ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಏಲಂ ಮಾಡುತ್ತಾರೆ. ಸಮುದ್ರ ದಡದಲ್ಲಿ ಹಿಡಿದು ತಂದ ಎಲ್ಲಾ ಮೀನು ಮಾರಾಟವಾದರೆ ಉತ್ತಮ ದರ ಸಿಗುತ್ತದೆ. ಮಲ್ಪೆ ಬಂದರಿಗೆ ಕೊಂಡು ಹೋಗಲು ಮತ್ತೆ ಪ್ರಯಾಣ ವೆಚ್ಚವೂ ತಗಲುತ್ತದೆ. ಇದೀಗ ಪ್ರತಿಕೂಲ ವಾತಾವರಣದಿಂದ ಮೀನುಗಾರಿಕೆ ಸ್ಥಗಿತಗೊಂಡಲ್ಲಿ ಕರಾವಳಿಯ ಸಾಂಪ್ರದಾಯಿಕ ಮೀನುಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸಲಿದ್ದಾರೆ ಎನ್ನುವುದು ಹಿರಿಯ ಮೀನುಗಾರರ ಅಂಬೋಣ.

ಮೀನುಗಾರರು ಮಟ್ಟುವಿನಲ್ಲಿ ದಡಸೇರಿಸುತ್ತಿರುವ ಕೈರಂಪಣಿ ದೋಣಿ
ಮೀನುಗಾರರು ಮಟ್ಟುವಿನಲ್ಲಿ ದಡಸೇರಿಸುತ್ತಿರುವ ಕೈರಂಪಣಿ ದೋಣಿ

‘ಸರ್ಕಾರ ನೆರವು ನೀಡಬೇಕು’

ಕರಾವಳಿಯಲ್ಲಿ ಹೆಚ್ಚಿನವರು ಸಾಂಪ್ರದಾಯಿಕ ಕೈರಂಪಣಿ ಮೀನುಗಾರಿಕೆ ಅವಲಂಬಿಸಿದ್ದಾರೆ. ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಆಗಾಗ ಪ್ರತಿಕೂಲ ವಾತಾವರಣ ನಿರ್ಮಾಣವಾದಲ್ಲಿ ಸಂಪಾದನೆಯಿಲ್ಲದೆ ನಮ್ಮ ಬದುಕು ದುಸ್ತರವೆನಿಸುತ್ತದೆ. ಈ ಅವಧಿಯಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಮೀನುಗಾರ ನಾಗೇಶ್ ಸಾಲ್ಯಾನ್ ಮಟ್ಟು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT