ಭಾನುವಾರ, ಜುಲೈ 3, 2022
23 °C

ಉಡುಪಿ: ನಾಲ್ಕು ಜೈನ ಪೀಠ ಶಾಸನಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಾರ್ಕಳ ತಾಲ್ಲೂಕಿನ ಹೊಸ್ಮಾರು ಬಳಿಯ ಗುಮ್ಮೆತ್ತು ಚಂದ್ರನಾಥ ಬಸದಿಯ ಕ್ಷೇತ್ರಕಾರ್ಯದ ವೇಳೆ ನಾಲ್ಕು ಜೈನ ಪೀಠ ಶಾಸನಗಳು ಪತ್ತೆಯಾಗಿವೆ. 13 ರಿಂದ 16ನೇ ಶತಮಾನದ ಅವಧಿಯಲ್ಲಿ ಶಾಸನಗಳು ನಿರ್ಮಾಣವಾಗಿರಬಹುದು ಎಂದು ಸಂಶೋಧಕ ಡಾ.ರವಿಕುಮಾರ್ ಕೆ.ನವಲಗುಂದ ತಿಳಿಸಿದ್ದಾರೆ.

ನಾಲ್ಕು ಜೈನಪೀಠ ಶಾಸನಗಳ ಪೈಕಿ ಒಂದು ಪಂಚಲೋಹದ್ದಾಗಿದ್ದು, ಉಳಿದವು ಹಿತ್ತಾಳೆಯ ಶಾಸನಗಳಾಗಿವೆ. ಚಂದ್ರನಾಥ ಬಸದಿಯ ಶಾಸನಗಳಲ್ಲಿ ಗಣಧರ ಪಾದಪ್ರತಿಮೆಯಲ್ಲಿರುವ ಶಾಸನ ಹಳೆಯದಾಗಿದ್ದು, ಎತ್ತರದ ಜಗತಿಯ ಪೀಠ, ಅದರ ಮೇಲೆ ಕೆಳಮುಖದಲ್ಲಿ ಅರಳಿದ ಕಮಲ ಹಾಗೂ ಸ್ವಚ್ಚಂದವಾಗಿ ಹರಡಿರುವ ಪುಷ್ಕರ ಇದೆ. ಕಮಲದ ಊರ್ಧ್ವದ ಸಮತಟ್ಟಾದ ಜಾಗದಲ್ಲಿ ಗಣಧರ ಪಾದದ್ವಯಗಳನ್ನು ಚಿತ್ರಿಸಲಾಗಿದೆ. ಶಾಸನದ ಕಾಲ ಉಲ್ಲೇಖವಾಗಿಲ್ಲ, ಲಿಪಿದೃಷ್ಟಿಯಿಂದ 13ನೇ ಶತಮಾನ ಎಂದು ಗುರುತಿಸಬಹುದು ಎಂದು ರವಿಕುಮಾರ್ ತಿಳಿಸಿದ್ದಾರೆ.

2ನೇ ಶಾಸನ 13ನೇ ಶತಮಾನಕ್ಕೆ ಸೇರಿದ್ದು ಜೈನರ ಪಂಚಪರಮೇಷ್ಠಿಗಳ ಬಿಂಬದ ಮೇಲೆ ಕೆತ್ತಲಾಗಿದೆ. ‘ಆಳು ಅಮ್ಮಣ ಸೆಟ್ಟಿಯ ಹೆಂಡತಿಯು ಅರಸನಿಗೆ ಪುಣ್ಯ ಲಭಿಸಲಿ ಎಂದು ಪರಪರಮೇಷ್ಠಿಗಳ ಪ್ರತಿಮೆಯನ್ನು ಮಾಡಿಸಿಕೊಟ್ಟಳು’ ಎಂಬುದು ಶಾಸನದ ಸಾರ. ಒಂದೂವರೆ ಗೇಣು ಎತ್ತರದ ಪಂಚಪರಮೇಷ್ಠಿ ಬಿಂಬವು ಹಿತ್ತಾಳೆಯಿಂದ ಮಾಡಲಾಗಿದೆ.

ಮೂರನೇ ಶಾಸನವು ಪಾರ್ಶ್ವನಾಥ ತೀರ್ಥಕರರ ಪಾದಪೀಠದ ಮೇಲಿದೆ. ಇದು 14ನೇ ಶತಮಾನದ ರಚನೆ ಎಂದು ಹೇಳಬಹುದು. ನಾಲ್ಕನೇ ಶಾಸನವನ್ನು ಹಿತ್ತಾಳೆಯದ್ದಾಗಿದ್ದು, ಪ್ರಭಾವಳಿ, ಕೀರ್ತಿಮುಖ, ಏಕಛಾತ್ರ ಮತ್ತು ಯಕ್ಷಯಕ್ಷಿಯರನ್ನು ಹೊಂದಿದೆ. ಕ್ಷೇತ್ರ ಕಾರ್ಯದಲ್ಲಿ ಸಂದೇಶ್ ಜೈನ್‌, ಭರತ್ ರಾಜ್ ಮೂಡಾರು, ವಿಜಯಕುಮಾರ್ ಹೊಸ್ಮಾರು, ಶಮಿತ್ಚಂದ್ರ ಸಹಕರ ನೀಡಿದ್ದಾರೆ ಎಂದು ರವಿಕುಮಾರ್ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು