‘ಉಡುಪಿ ನಗರಸಭೆ: ಮಿಷನ್‌ 28 ಗುರಿ‘

7
32 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕಾರ್ಕಳ, ಕುಂದಾಪುರ, ಪಟ್ಟಣ ಪಂಚಾಯತ್‌ಗೆ ಇಂದು ಅಂತಿಮ

‘ಉಡುಪಿ ನಗರಸಭೆ: ಮಿಷನ್‌ 28 ಗುರಿ‘

Published:
Updated:
Deccan Herald

ಉಡುಪಿ: ಉಡುಪಿ ನಗರಸಭೆಯ 35 ವಾರ್ಡ್‌ಗಳಿಗೆ ಆ.29ರಂದು ಚುನಾವಣೆ ನಡೆಯಲಿದ್ದು, ಸದ್ಯ 32 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ನಗರಸಭೆ, ಕಾರ್ಕಳ ಕುಂದಾಪುರ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಚುನಾವಣೆಗೆ ಜಿಲ್ಲಾಮಟ್ಟದಲ್ಲಿ ಶಾಸಕರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಚುನಾವಣಾ ಸಮಿತಿ ರಚಿಸಲಾಗಿದೆ ಎಂದರು.

ಉಡುಪಿ ನಗರಸಭೆಗೆ ಶಾಸಕ ರಘುಪತಿ ಭಟ್‌ ಅವರ ನೇತೃತ್ವದ ಚುನಾವಣಾ ಸಮಿತಿ ರಚಿಸಲಾಗಿದೆ. ಕೊಡವೂರು, ಕಕ್ಕುಂಜೆ, ಸರಳೆಬೆಟ್ಟು ವಾರ್ಡ್‌ಗಳಿಗೆ ಅಭ್ಯರ್ಥಿಗಳು ಅಂತಿಮವಾಗಿಲ್ಲ. ಉಳಿದಂತೆ 32 ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಕುಂದಾಪುರ, ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯ್ತಿಗಳಿಗೆ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಪಟ್ಟಿ ಅಂತಿಮ ಹಂತದಲ್ಲಿದೆ ಎಂದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, 35 ವಾರ್ಡ್‌ಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯಾರಿಸಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಆಕಾಂಕ್ಷಿಗಳು ಸ್ಪರ್ಧಿಸಲು ಇಚ್ಚಿಸಿದ್ದರು. ಕೊನೆಗೆ ಆಕಾಂಕ್ಷಿಗಳ ಮನವೊಲಿಸಿ, ಎಲ್ಲರ ಸಮ್ಮುಖದಲ್ಲೇ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದರು.

ಉಡುಪಿ ನಗರಸಭೆಯಲ್ಲಿ ಜನವಿರೋಧಿ ಆಡಳಿತ ವೈಖರಿಗೆ ನಾಗರಿಕರು ಬೇಸತ್ತಿದ್ದು, ಮತದಾರರು ಬದಲಾವಣೆ ಬಯಸಿದ್ದಾರೆ. ಕಟ್ಟಡ ಪರವಾನಗಿ ಶುಲ್ಕ ಗರಿಷ್ಠ ₹ 500 ಮಾತ್ರ ಹಾಕಬೇಕು ಎಂಬ ನಿಯಮವಿದ್ದರೂ, ಅದನ್ನು ಉಲ್ಲಂಘಿಸಿ ಚದರ ಅಡಿ ಆಧಾರದ ಮೇಲೆ ಶುಲ್ಕ ಪಡೆಯಲಾಗುತ್ತಿದೆ. ಪರವಾನಗಿ ನವೀಕರಣ ಮಾಡಿಸಿಕೊಳ್ಳುವಂತೆ ಹೋಂಗಾರ್ಡ್ಸ್‌ಗಳನ್ನು ಬಿಟ್ಟು ಕಟ್ಟಡ ಮಾಲೀಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ರಘುಪತಿ ಭಟ್ ಆರೋಪಿಸಿದರು.

ಕಾಂಗ್ರೆಸ್‌ ಹಿಂದಿನ ಪ್ರಣಾಳಿಕೆಗೆ ವಿರುದ್ಧವಾಗಿ ನಗರಸಭೆಯಲ್ಲಿ ಆಡಳಿತ ನೀಡಿದೆ. ಕಸ ವಿಲೇವಾರಿ ಶುಲ್ಕವನ್ನು ಹೆಚ್ಚಿಸಿದೆ. ನಗರಸಭೆಯಲ್ಲಿ ದಲ್ಲಾಳಿಗಳಿಗೆ ಹಣ ನೀಡದೆ, ಕೆಲಸ ಮಾಡಿಸಿಕೊಳ್ಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಆರೋಪಿಸಿದರು.

ಬಿಜೆಪಿ ನಗರಸಭೆಯಲ್ಲಿ ಅಧಿಕಾರಕ್ಕೆ ಬಂದರೆ, ಮೊದಲ ನಗರಸಭೆ ಅಧಿವೇಶನದಲ್ಲೇ ಚದರಡಿ ಆಧಾರದ ತೆರಿಗೆ ವ್ಯವಸ್ಥೆಯನ್ನು ರದ್ದು ಮಾಡಲಾಗುವುದು. ಈ ಬಾರಿ ನಗರಸಭೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ ಎಂದು ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಯಶ್‌ಪಾಲ್‌ ಸುವರ್ಣ, ಪ್ರಭಾಕರ ಪೂಜಾರಿ ಅವರೂ ಇದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !