ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಸೇವೆ: ಉಡುಪಿ ನಂಬರ್ ಒನ್‌

5 ತಿಂಗಳಿನಿಂದ ಮೊದಲ ಸ್ಥಾನ ಕಾಯ್ದುಕೊಂಡಿರುವ ಜಿಲ್ಲೆ
Last Updated 11 ಫೆಬ್ರುವರಿ 2020, 10:21 IST
ಅಕ್ಷರ ಗಾತ್ರ

ಉಡುಪಿ: ಕಂದಾಯ ಇಲಾಖೆ ವ್ಯಾಪ್ತಿಯಡಿ ಬರುವ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಉತ್ತಮ ಸಾಧನೆ ತೋರಿರುವ ಜಿಲ್ಲಾಡಳಿತ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದೆ. ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ಸತತ 5 ತಿಂಗಳಿನಿಂದಲೂ ಉಡುಪಿ ನಂಬರ್‌ ಒನ್‌ ಪಟ್ಟ ಉಳಿಸಿಕೊಂಡಿರುವುದು ವಿಶೇಷ.

ಯಾವ ಜಿಲ್ಲೆಗೆ ಯಾವ ಸ್ಥಾನ

ಜನವರಿ ತಿಂಗಳಲ್ಲಿ ಕಂದಾಯ ಇಲಾಖೆ ಸೇವೆಗಳ ಅನುಷ್ಠಾನದಲ್ಲಿ ಜಿಲ್ಲಾವಾರು ಸಾಧನೆಯ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು, ಉಡುಪಿ 100 ಅಂಕಗಳಿಗೆ 69 ಅಂಕಪಡೆದು ಅಗ್ರಸ್ಥಾನ ಕಾಯ್ದುಕೊಂಡಿದೆ. ಉಳಿದಂತೆ 56.5 ಅಂಕ ಪಡೆದಿರುವ ಚಿತ್ರದುರ್ಗ 2ನೇ ಸ್ಥಾನ, 50.9 ಅಂಕ ಪಡೆದ ಉತ್ತರ ಕನ್ನಡ ಮೂರನೇ ಸ್ಥಾನದಲ್ಲಿದೆ.

ಕೊನೆಯ ಸ್ಥಾನ ಯಾರಿಗೆ

ಬಳ್ಳಾರಿ ಜಿಲ್ಲೆ 14.6 ಅಂಕ ಪಡೆದು ಕೊನೆಯ ಸ್ಥಾನದಲ್ಲಿದ್ದರೆ (30), ಧಾರವಾಡ 16.7, ಯಾದಗಿರಿ 17.2 ಅಂಕಗಳೊಂದಿಗೆ ಕ್ರಮವಾಗಿ 29 ಹಾಗೂ 28ನೇ ಸ್ಥಾನದಲ್ಲಿವೆ.

ರ‍್ಯಾಂಕ್ ನೀಡುವುದು ಹೇಗೆ?

ರೈತರಿಗೆ ಭೂಮಿ ಮ್ಯುಟೇಷನ್‌ ವಿತರಣೆ, 30 ದಿನಗಳೊಳಗೆ ಭೂಮಿ ಮ್ಯುಟೇಷನ್‌ ನೀಡುವುದು, ಕಾಲಮಿತಿಯಲ್ಲಿ ಭೂವ್ಯಾಜ್ಯಗಳನ್ನು ಪರಿಹರಿಸಿ ಭೂಮಿ ಮ್ಯುಟೇಷನ್ ಹಂಚಿಕೆ, ವಸತಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಕೃಷಿ ಭೂಮಿ ಪರಿವರ್ತನೆ ಮಾಡಿಕೊಡುವುದು.

ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿರುವ ಪ್ರಕರಣಗಳ ವಿಲೇವಾರಿ, ಪಹಣಿಯಲ್ಲಿರುವ ಕಾಲಂ 3 ಹಾಗೂ 9ರ ದೋಷ ಸರಿಪಡಿಸುವಿಕೆ, 79 ಎ ಹಾಗೂ 79 ಬಿ ಪ್ರಕರಣಗಳ ವಿಲೇವಾರಿ, ಪೈಕಿ ಆರ್‌ಟಿಸಿ ತಿದ್ದುಪಡಿ, ಭೂಮಿ ಪೋಡಿ, ಜಮೀನು ಸರ್ವೆ,ಹೀಗೆ, ಆಯಾ ಜಿಲ್ಲೆಗಳ ಕಂದಾಯ ಇಲಾಖೆಯ ಕಾರ್ಯ ಸಾಧನೆಯ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.

ಎಲ್ಲ ಸೇವೆಗಳು ನಿಗಧಿತ ಕಾಲಮಿತಿಯೊಳಗೆ ಜನರಿಗೆ ತಲುಪಿಸಿದರೆ ರ‍್ಯಾಂಕ್‌ ಪಟ್ಟಿಯಲ್ಲಿ ಮೇಲೇರಬಹುದು. ಉಡುಪಿ ಜಿಲ್ಲೆ ಮೇಲಿನ ಬಹುತೇಕ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರುವ ಮೂಲಕ ರಾಜ್ಯದ ಗಮನ ಸೆಳೆದಿದೆ.

ಬಡವರಿಗೆ ಕಂದಾಯ ಸೇವೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವುದು ಜಿಲ್ಲಾಡಳಿದ ಉದ್ದೇಶ. ಈ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿ ಫಲಾನುಭವಿಗಳ ಮನೆಬಾಗಿಲಿಗೆ ಪಿಂಚಣಿ ತಲುಪಿಸಲಾಗುತ್ತಿದೆ. ಮೊದಲ ಸ್ಥಾನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಡಳಿತ ಯಂತ್ರಕ್ಕೆ ಮತ್ತಷ್ಟು ಚುರುಕು ನೀಡಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಜಿ.ಜಗದೀಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT