ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತಿಗೆ ಮಠದ ಪರ್ಯಾಯ ಗೀತಾಮಯ

Published 18 ಜನವರಿ 2024, 22:24 IST
Last Updated 18 ಜನವರಿ 2024, 22:24 IST
ಅಕ್ಷರ ಗಾತ್ರ

ಉಡುಪಿ: ಕೋಟಿ ಗೀತಾ ಲೇಖನದ ಸಂಕಲ್ಪ, ಭಗವದ್ಗೀತೆಯ ಮಹತ್ವ ಸಾರಿದ ಸ್ತಬ್ಧಚಿತ್ರಗಳು, ಗೀತಾ ಗಾಯನ, ಶ್ಲೋಕಗಳ ಪಠಣಗಳಿಂದಾಗಿ ಇಲ್ಲಿನ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಪರ್ಯಾಯ ಗೀತಾಮಯವಾಗಿತ್ತು.

‘ವಿಶ್ವ ಗೀತಾ ಪರ್ಯಾಯ’ಕ್ಕೆ ಅನ್ವರ್ಥ ವಾಗುವಂತೆ ಈ ಪರ್ಯಾಯ ವೈಭವೋಪೇತವಾಗಿ ನೆರವೇರಿತು.

ಬುಧವಾರ ಮುಸ್ಸಂಜೆಯಲ್ಲಿ ಪಡುಗಡಲಲ್ಲಿ ನೇಸರ ಮರೆಗೆ
ಸರಿಯುತ್ತಿದ್ದಂತೆಯೇ ಕಡೆಗೋಲು ಶ್ರೀಕೃಷ್ಣನ ನಗರದಲ್ಲಿ ಪರ್ಯಾಯ ಮಹೋತ್ಸವವೂ ರಂಗೇರಿತು. ಇರುಳು ಆವರಿಸುತ್ತಿದ್ದಂತೆಯೇ ನಗರದ ಬೀದಿ ಬೀದಿಗಳಿಗೂ ಭಕ್ತರು ಗುಂಪು ಗುಂಪಾಗಿ ಸಾಗಿಬಂದರು. ಹೊತ್ತು ರಾತ್ರಿ ಹತ್ತಾಗುವಷ್ಟರಲ್ಲಿ ನಗರದಾದ್ಯಂತ ಭಕ್ತ ಗಣ ನೆರೆದಿತ್ತು. ಕನಕನಿಗೊಲಿದ ಭಗವಂತನ ಗುಣಗಾನ, ಹರಿ ನಾಮ ಸ್ಮರಣೆ, ಗೀತಾ ಗಾಯನಗಳಿಂದಾಗಿ ‘ಪರ್ಯಾಯ’ ನಗರಿಯಲ್ಲಿ ಭಕ್ತಿ ಭಾವದ ಲೋಕ ಕಳೆಗಟ್ಟಿತು.

ಗುರುವಾರ ನಸುಕಿನ 1.30ರ ವೇಳೆಗೆ ದಂಡತೀರ್ಥದಲ್ಲಿ ಪವಿತ್ರಸ್ನಾನ ನೆರವೇರಿಸಿ ಜೋಡುಕಟ್ಟೆಗೆ ಶಿಷ್ಯ ಸುಶ್ರೀಂದ್ರ ತೀರ್ಥರ ಜೊತೆಗೆ ಆಗಮಿಸಿದ ಪುತ್ತಿಗೆ ಶ್ರೀಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಪಟ್ಟದ ವಿಠಲ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಯತಿವರ್ಯರಿಬ್ಬರನ್ನು ಶೋಭಾಯಾತ್ರೆಯಲ್ಲಿ ರಥಬೀದಿಗೆ ಕರೆದೊಯ್ಯಲಾಯಿತು.

ಬೆರಗಿನ ಲೋಕ: ವಿದ್ಯುದ್ದೀಪಸಾಲು, ಅಲ್ಲಲ್ಲಿ ಸ್ವಾಗತ ಕಮಾನುಗಳಿಂದ ಅಲಂಕೃತಗೊಂಡು ಝಗಮಗಿಸುತ್ತಿದ್ದ ನಗರ ರಾತ್ರಿ ಇಡೀ ನಿದ್ದೆ ಮಾಡಲಿಲ್ಲ. ಮುಂಜಾವಿನ ಶುಭ ಅವಸರದಲ್ಲಿ ಶೋಭಾಯಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ರಾತ್ರಿ ಇಡೀ ಜಾಗರವಿದ್ದ ಜನಸ್ತೋಮ ವಾಹನದಲ್ಲಿ ಅಳವಡಿಸಿದ ಪಲ್ಲಕ್ಕಿಯಲ್ಲಿ ಯತಿವರ್ಯರಿಬ್ಬರು ಸಾಗಿಬಂದ ದೃಶ್ಯವನ್ನು ಕಣ್ತುಂಬಿಕೊಂಡು ಪುಳಕಿತಗೊಂಡಿತು. ಜೋಡುಕಟ್ಟೆ– ತೆಂಕಪೇಟೆ ಮಾರ್ಗವಾಗಿ ರಥಬೀದಿವರೆಗೆ ಸಾಗಿದ ಶೋಭಾಯಾತ್ರೆ ಭಕ್ತ ಸಮೂಹವನ್ನು ಬೆರಗಿನ ಲೋಕಕ್ಕೆ ಒಯ್ಯಿತು.

ಭವ್ಯ ಶೋಭಾಯಾತ್ರೆ
ಯಲ್ಲಿ ರಥಬೀದಿವರೆಗೆ ಸಾಗಿಬಂದ ಸುಗುಣೇಂದ್ರ ತೀರ್ಥರು ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಾಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠವನ್ನು ಪ್ರವೇಶಿಸಿ ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ, ಸರ್ವಜ್ಞ ಪೀಠವನ್ನು ಏರಿದರು. ಬಳಿಕ ರಾಜಾಂಗಣದಲ್ಲಿ ‘ಪರ್ಯಾಯ ದರ್ಬಾರ್‌’ ನೆರವೇರಿಸಿದರು. ನಾಲ್ಕನೇ ಪರ್ಯಾಯ ಮಹೋತ್ಸವವನ್ನು ನೆರವೇರಿಸಿದ ಸ್ವಾಮೀಜಿ ಇನ್ನೆರಡು ವರ್ಷ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯ, ಕೃಷ್ಣಮಠದ ಉಸ್ತುವಾರಿಯನ್ನು ನಿಭಾಯಿಸಲಿದ್ದಾರೆ.

ಗೀತಾ ಪರ್ಯಾಯದಲ್ಲಿ ರಾಮನ ಸ್ಮರಣೆ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ಸಡಗರ ಪರ್ಯಾಯ ಮಹೋತ್ಸವದಲ್ಲೂ ಕಾಣಸಿಕ್ಕಿತ್ತು. ಅಯೋಧ್ಯೆಯ ಭವ್ಯ ಶ್ರೀರಾಮಮಂದಿರದ ಪ್ರತಿಕೃತಿಯ ಸ್ತಬ್ಧಚಿತ್ರ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಬಿಜೆಪಿ ಈ ಸ್ತಬ್ಧಚಿತ್ರವನ್ನು ಪ್ರಾಯೋಜಿಸಿತ್ತು. ಶೋಭಾ ಯಾತ್ರೆ ಸಾಗಿಬಂದ ಮಾರ್ಗದ ಪಕ್ಕದಲ್ಲಿ ಭಕ್ತರೊಬ್ಬರು ರಾಮಮಂದಿರದ ಭಾರಿ ಗಾತ್ರದ ಪ್ರತಿಕೃತಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ವಿದ್ಯುದ್ದೀಪಗಳಿಂದ ಅಲಂಕೃತವಾಗಿದ್ದ ಈ ಪ್ರತಿಕೃತಿ ಜನರ ಗಮನ ಸೆಳೆಯಿತು. 

‘ಪ್ರಪಂಚ ಪರ್ಯಟನೆ ಇಲ್ಲ’

ಉಡುಪಿ: ‘ಕೃಷ್ಣನಿಗೆ ಸೇವೆ ಹಾಗೂ ಪೂಜೆ ಸಲ್ಲಿಸುವ ಅವಕಾಶ ದೊರೆತಿರುವುದು ಸೌಭಾಗ್ಯವೇ ಸರಿ; ಮುಂದಿನ ಎರಡು ವರ್ಷಗಳ ಕಾಲ ಪ್ರಪಂಚ ಪರ್ಯಟನೆಯನ್ನು ಬದಿಗಿರಿಸಿ ಸಂಪೂರ್ಣವಾಗಿ ಕೃಷ್ಣನ ಪೂಜೆಯಲ್ಲಿ ತೊಡಗಿಸಿಕೊಳ್ಳು ತ್ತೇನೆ’ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಸರ್ವಜ್ಞ ಪೀಠಾರೋಹಣದ ಬಳಿಕ ರಾಜಾಂಗಣದಲ್ಲಿ ನಡೆದ ಸಾಂಪ್ರದಾಯಿಕ ದರ್ಬಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ‘ಸದಾ ಪ್ರಪಂಚ ಸುತ್ತುವ ಪುತ್ತಿಗೆ ಶ್ರೀಗಳು ಕೃಷ್ಣನ ಪೂಜೆಗಾಗಿ 2 ವರ್ಷ ಉಡುಪಿಯಲ್ಲಿ ನಿಲ್ಲುವುದು ಸಾಧ್ಯವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ, ಕೃಷ್ಣನ ಸೇವೆ ಮಾಡುವ ಸುವರ್ಣಾ ವಕಾಶದ ಮುಂದೆ ಯಾವುದೂ ದೊಡ್ಡದಲ್ಲ. ದೇವರು ಕೊಟ್ಟ ಯೋಗವನ್ನು ಬಿಡುವ ಪ್ರಶ್ನೆಯೇ ಇಲ್ಲ. ಶಿಷ್ಯರಾದ ಸುಶ್ರೀಂದ್ರ ತೀರ್ಥರೊಡಗೂಡಿ ಕೃಷ್ಣನ ಪೂಜೆ ಮಾಡುತ್ತೇನೆ’ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT