ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತಿಗೆ ಮಠದ ಪರ್ಯಾಯೋತ್ಸವ ಜ.17.18ರಂದು

ಪರ್ಯಾಯಕ್ಕೆ ಸಿಂಗಾರಗೊಂಡಿದೆ ಉಡುಪಿ
Published 15 ಜನವರಿ 2024, 21:11 IST
Last Updated 15 ಜನವರಿ 2024, 21:11 IST
ಅಕ್ಷರ ಗಾತ್ರ

ಉಡುಪಿ: ಅಷ್ಠಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ಜ.17 ಹಾಗೂ 18ರಂದು ನಡೆಯಲಿದ್ದು ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗಿವೆ. ಇಡೀ ನಗರ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

ಪುತ್ತಿಗೆ ಮಠದ ಹಿರಿಯ ಯತಿಗಳಾದ ಸುಗುಣೇಂದ್ರ ತೀರ್ಥರು ನಾಲ್ಕನೇ ಬಾರಿಗೆ (1976, 1992, 2008) ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. 18ರಂದು ನಸುಕಿನ 1.30ಕ್ಕೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಉಡುಪಿಯ ಜೋಡುಕಟ್ಟೆಗೆ ಆಗಮಿಸುವ ಶ್ರೀಗಳನ್ನು ಅದ್ದೂರಿ ಮೆರವಣಿಗೆಯ ಮೂಲಕ ಕೃಷ್ಣಮಠಕ್ಕೆ ಕರೆತರಲಾಗುತ್ತದೆ.

ಸ್ತಬ್ಧಚಿತ್ರಗಳು, ಜಾನಪದ ಕಲಾತಂಡಗಳು, ವೇದ, ಮಂತ್ರ ಘೋಷ, ಮಂಗಳವಾದ್ಯ ಸಹಿತ ಭಜನಾ ತಂಡಗಳು ಭಾಗವಹಿಸಲಿವೆ. 18ರಂದು ಬೆಳಗಿನ ಜಾವ 5.50ಕ್ಕೆ ಪುತ್ತಿಗೆ ಶ್ರೀಗಳು ಸಂಪ್ರದಾಯದಂತೆ ಅಕ್ಷಯ ಪಾತ್ರೆ ಸ್ವೀಕರಿಸಿ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಈ ಮೂಲಕ ಪುತ್ತಿಗೆ ಮಠದ ಪರ್ಯಾಯ ಅಧಿಕೃತವಾಗಿ ಆರಂಭವಾಗಲಿದ್ದು ಮುಂದಿನ 2 ವರ್ಷ ಕೃಷ್ಣನ ಪೂಜಾ ಕೈಂಕರ್ಯ ಹಾಗೂ ಕೃಷ್ಣಮಠದ ಆಡಳಿತ ನಿರ್ವಹಿಸಲಿದ್ದಾರೆ.

ಪರ್ಯಾಯಕ್ಕೆ ದೇಶ ವಿದೇಶಗಳಿಂದ 1 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದ್ದು ಉಡುಪಿಯಿಂದ ಮಂಗಳೂರಿನವರೆಗೆ ಹಾಗೂ ಕುಂದಾಪುರದಿಂದ ಉಡುಪಿಯವರೆಗಿನ ವಸತಿ ಗೃಹಗಳನ್ನು ಅತಿಥಿಗಳ ವಾಸ್ತವ್ಯಕ್ಕೆ ಕಾಯ್ದಿರಿಸಲಾಗಿದೆ. ಉಡುಪಿ ಸುತ್ತಮುತ್ತ ವಾಸವಿರುವ ನೂರಕ್ಕೂ ಹೆಚ್ಚು ಮಂದಿ ತಮ್ಮ ಮನೆಗಳಲ್ಲಿ ಅತಿಥಿಗಳಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದ್ದಾರೆ. ನಗರಸಭೆಯಿಂದ ಮೊಬೈಲ್ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಕೃಷ್ಣಮಠಕ್ಕೆ ಬರುವ ಭಕ್ತರಿಗೆ ಪ್ರತಿನಿತ್ಯ ಭೋಜನದ ವ್ಯವಸ್ಥೆಗೆ ಪೂರಕವಾಗಿ ನೂರಾರು ಸಂಘ ಸಂಸ್ಥೆಗಳು, ದೇವಸ್ಥಾನಗಳು, ಉದ್ಯಮಿಗಳು ಅಪಾರ ಪ್ರಮಾಣದಲ್ಲಿ ಹೊರೆಕಾಣಿಕೆ ಸಲ್ಲಿಸಿದ್ದಾರೆ. ಪರ್ಯಾಯದ ಅಂಗವಾಗಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಗೋಷ್ಠಿ, ಸಂವಾದಗಳು ನಡೆಯುತ್ತಿವೆ.

ಸುಗುಣೇಂದ್ರ ತೀರ್ಥ ಸ್ವಾಮೀಜಿ ಪುತ್ತಿಗೆ ಮಠ
ಸುಗುಣೇಂದ್ರ ತೀರ್ಥ ಸ್ವಾಮೀಜಿ ಪುತ್ತಿಗೆ ಮಠ
ಉಡುಪಿಯ ಕೃಷ್ಣಮಠ
ಉಡುಪಿಯ ಕೃಷ್ಣಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT