ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ಶಿಲಾಯುಗದ ವೃತ್ತ ಸಮಾಧಿ ಪತ್ತೆ

ನಿವೃತ್ತ ಇತಿಹಾಸ ಸಹ ಪ್ರಾಧ್ಯಾಪಕ ಟಿ.ಮುರುಗೇಶಿ ಮಾಹಿತಿ
Published 21 ಮೇ 2024, 14:14 IST
Last Updated 21 ಮೇ 2024, 14:14 IST
ಅಕ್ಷರ ಗಾತ್ರ

ಉಡುಪಿ: ನಗರದ ತೋಟಗಾರಿಕಾ ಇಲಾಖೆಯ ದೊಡ್ಡಣಗುಡ್ಡೆ ತೋಟದ ಬಳಿಯ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೊಂದಿಕೊಂಡಂತಿರುವ ಅಯ್ಯಗೂಡಿಕಲ ಸ್ಥಳದಲ್ಲಿ ಕಲ್ಗುಪ್ಪೆ, ಶವಸಂಪುಟ ಮತ್ತು ವೃತ್ತ ಸಮಾಧಿಗಳು ಪತ್ತೆಯಾಗಿವೆ ಎಂದು ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಶಿಲಾಯುಗದ ಕಲ್ಮನೆ, ಗುಹಾ, ಮೃತ್‌ಪಾತ್ರೆ, ಕುಂಭ, ನಿಲ್ಸ್‌ಕಲ್ ಸಮಾಧಿಗಳು ವ್ಯಾಪಕವಾಗಿ ಕಂಡುಬರುತ್ತವೆ. ಆದರೆ, ಇತರ ಪ್ರಕಾರದ ಸಮಾಧಿಗಳಾದ ಕಲ್ಗುಪ್ಪೆ, ಶವಸಂಪುಟ ಮತ್ತು ವೃತ್ತ ಸಮಾಧಿಗಳು ಇದುವರೆಗೆ ಪತ್ತೆಯಾಗಿರಲಿಲ್ಲ.

‘ನೈಸರ್ಗಿಕ ಕಲ್ಲುಗಳನ್ನು ವೃತ್ತಾಕಾರ ಅಥವಾ ಅಂಡಾಕಾರದಲ್ಲಿ ಜೋಡಿಸಿ ಇಡಲಾಗಿರುತ್ತದೆ. ವೃತ್ತದ ನಡುವೆ ಸಮಾಧಿ ಇರುತ್ತದೆ. ಇಂಥ ನೂರಾರು ವೃತ್ತ ಸಮಾಧಿಗಳನ್ನು ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಈಗಾಗಲೇ ಸಂಶೋಧಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ದೊಡ್ಡಣಗುಡ್ಡೆಯ ಅಯ್ಯಗೂಡಿಕಲವು ಹಿಂದಿನ ಕಾಲದಲ್ಲಿ ಹದಿನಾರು ಮಾಗಣೆಯ ಸಮಸ್ತರು ಸೇರಿ ನ್ಯಾಯ ತೀರ್ಮಾನ ನಡೆಸುತ್ತಿದ್ದ ಸ್ಥಳ ಎಂದು ತುಳುನಾಡಿನ ಪಾಡ್ದನಗಳ ಪ್ರಕಾರ ಗುರುತಿಸಲಾಗಿದೆ. ಅಲ್ಲಿ ವೃತ್ತಾಕಾರವಾಗಿ ಜೋಡಿಸಿ ಇಟ್ಟಿರುವ ಕಲ್ಲುಗಳ ಮೇಲೆ ಕುಳಿತು ಅಂದಿನ ಹಿರಿಯರು ನ್ಯಾಯ ತೀರ್ಮಾನ ಮಾಡುತ್ತಿದ್ದರೆಂದು ನಂಬಲಾಗಿದೆ. ಆದರೆ, ಪ್ರಸ್ತುತ ಅಧ್ಯಯನಕ್ಕೆ ಒಳಪಟ್ಟ ಅಯ್ಯಗೂಡಿಕಲ ಸಂಪೂರ್ಣವಾಗಿ ಗಿಡ-ಗಂಟಿಗಳಿಂದ ಬೆಳೆದಿರುವುದರಿಂದ ಖಚಿತವಾಗಿ ಅಲ್ಲಿ ಎಷ್ಟು ಕಲ್ಲುಗಳು ಇವೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ತುಳುನಾಡಿನ ಬಹುತೇಕ ಕಡೆ ಇರುವ ವಿವಿಧ ರೀತಿಯ ಶಿಲಾಯುಗದ ಸಮಾಧಿಗಳು ಮಾತೃ ದೇವತೆಯ ಆರಾಧನಾ ಸ್ಥಳಗಳಾಗಿ, ಬೆರ್ಮರಸಾನಗಳಾಗಿ, ಆಲಡೆಗಳಾಗಿ, ನಾಗಾರಾಧನಾ ಕೇಂದ್ರಗಳಾಗಿ, ಶಿವ ಅಥವಾ ಸುಬ್ರಹ್ಮಣ್ಯ ದೇವಾಲಯಗಳಾಗಿ ಬೆಳವಣಿಗೆಯಾಗಿರುವುದು ಬಹುತೇಕ ಖಚಿತವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಮುಂಡಾಲ, ಕೂಸಾಳಾ, ಆದಿದ್ರಾವಿಡ ಜನಾಂಗದ ಆರಾಧ್ಯ ದೈವವಾಗಿರುವ ಬಬ್ಬುಸ್ವಾಮಿ ದೈವಸ್ಥಾನದ ಜತೆ ಶಿಲಾಯುಗದ ವೃತ್ತ ಮಾದರಿ ಸಮಾಧಿ ಕಂಡುಬಂದಿರುವುದು ಆದಿದ್ರಾವಿಡ ಜನಾಂಗ ಮತ್ತು ಬಬ್ಬುಸ್ವಾಮಿಯ ಚಾರಿತ್ರಿಕ ಅಧ್ಯಯನಕ್ಕೆ ಮಹತ್ವದ ಸಾಕ್ಷಿಯಾಗಿದೆ. ಅಯ್ಯ+ಗೂಡಿ+ಕಲ ಎಂಬ ಪದದ ನಿಜವಾದ ಅರ್ಥ ಅಯ್ಯ ಎಂದರೆ ಹಿರಿಯ, ಗೂಡಿ ಎಂದರೆ ಗುಡಿ ಮತ್ತು ಕಲ ಎಂದರೆ ಸ್ಥಳ. ಅಂದರೆ ಸಂಕ್ಷಿಪ್ತವಾಗಿ ಸತ್ತವರ ದಿಬ್ಬ ಎಂದರ್ಥ ಎಂದು ಅವರು ವಿವರಿಸಿದ್ದಾರೆ.

ಈ ಅಧ್ಯಯನಕ್ಕೆ ಪಡುಬಿದ್ರಿಯ ಮಿಂಚಿನಬಾವಿ ಕೋರ್ದಬ್ಬು ಟ್ರಸ್ಟ್‌ ಅಧ್ಯಕ್ಷ ವಾಮನ ಸಾಲಿಯಾನ್, ಟ್ರಸ್ಟಿ ರಮೇಶ್ ಉಚ್ಚಿಲ, ಜಿ. ಸುಂದರ್ ಗುಜ್ಜರಬೆಟ್ಟು, ಬಿ.ಪಿ. ನಾರಾಯಣ ನೇಜಾರು, ಆನಂದ್ ಎಲ್ಲೂರು, ಪಿ.ಜಗ್ಗು ಮಲ್ಲಾರು ಕೈ ಜೋಡಿಸಿದ್ದರು ಎಂದು ಪ್ರೊ.ಟಿ.ಮುರುಗೇಶಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT