ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡುವಂತೆ ವ್ಯಾಪಾರಿಗಳ ಒಕ್ಕೂಟ ಮನವಿ

Last Updated 21 ಮಾರ್ಚ್ 2022, 12:39 IST
ಅಕ್ಷರ ಗಾತ್ರ

ಉಡುಪಿ: ಕಾಪು ಮಾರಿಗುಡಿ ಜಾತ್ರೆ ಸೇರಿದಂತೆ ಕರಾವಳಿಯ ಉತ್ಸವ, ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಮತಿ ನೀಡಬೇಕು ಎಂದು ಬೀದಿಬದಿ ವ್ಯಾಪಾರಿಗಳ ಹಾಗೂ ಜಾತ್ರೆ ವ್ಯಾಪಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರೀಫ್‌ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳಿಂದಲೂ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ. ಆದರೆ, ಈಚೆಗೆ ಹಿಂದೂಗಳ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಜಾಬ್ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗೆ ಅಸಮಾಧಾನಗೊಂಡು ಮುಸ್ಲಿಂ ವ್ಯಾಪಾರಿಗಳು ಬಂದ್ ಮಾಡಿದ್ದಕ್ಕೆ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕಲಾಗಿದೆ. ಆದರೆ, ನಾವೆಲ್ಲ ಬೀದಿ ಬದಿ ವ್ಯಾಪಾರಿಗಳಾಗಿದ್ದು ಬಂದ್‌ಗೆ ಬೆಂಬಲ ನೀಡಿಲ್ಲ. ಆದರೂ, ವ್ಯಾಪಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಈಚೆಗೆ ನಡೆದ ಪೆರ್ಡೂರು ರಥೋತ್ಸವದಲ್ಲೂ ವ್ಯಾಪಾರಕ್ಕೆ ಅನುಮತಿ ನೀಡಲಾಗಿಲ್ಲ. ಮಾರ್ಚ್ 22ರಿಂದ ಆರಂಭವಾಗುವ ಕಾಪು ಮಾರಿ ಜಾತ್ರೆಗೂ ನಿರ್ಬಂಧ ವಿಧಿಸಲಾಗಿದೆ. ಹಲವು ವರ್ಷಗಳಿಂದ ಮಾರಿ ಜಾತ್ರೆಯಲ್ಲಿ ವ್ಯಾಪಾರ ಮಾಡಿಕೊಂಡು ಬಂದಿದ್ದು, ಹಿಂದಿನಂತೆಯೇ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಂಡಿದ್ದೇವೆ. ಮುಂದೆಯೂ ನಡೆದುಕೊಳ್ಳುತ್ತೇವೆ. ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು, ದ್ವೇಷ ಬಿಟ್ಟು ಸೌಹಾರ್ದಯುತವಾಗಿ ಬದುಕೋಣ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಇಬ್ರಾಹಿಂ ತೌಫಿಕ್‌, ಹಮೀದ್ ನೇಜಾರು, ಶಾಹಿದ್ ನೇಜಾರು, ಯಾಸಿನ್ ಕೆಮ್ಮಣ್ಣು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT