ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ವಾಹನ ಚಲಾಯಿಸಿ ತ್ಯಾಜ್ಯ ಸಂಗ್ರಹಿಸಿದ ಉಡುಪಿ ಜಿಪಂ ಸಿಇಒ!

Last Updated 24 ಸೆಪ್ಟೆಂಬರ್ 2022, 13:59 IST
ಅಕ್ಷರ ಗಾತ್ರ

ಹಿರಿಯಡ್ಕ (ಉಡುಪಿ): ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಪ್ರಸನ್ನ ಶನಿವಾರ ಬಡಗಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಂದ ಖುದ್ದು ಕಸ ಸಂಗ್ರಹಿಸಿ ಗಮನ ಸೆಳೆದರು.

ತ್ಯಾಜ್ಯ ಸಂಗ್ರಹಣೆ ಮಾಡುವ ವಾಹವನ್ನು ಚಲಾಯಿಸಿಕೊಂಡು ಹೊರಟ ಸಿಇಒ ಮನೆಯ ಮಾಲೀಕರಿಂದ ತ್ಯಾಜ್ಯವನ್ನು ಪಡೆದರು. ಪ್ರತಿದಿನ ಕಸ ಸಂಗ್ರಹಿಸುವವರಿಗೆ ಕಸವನ್ನು ನೀಡುತ್ತಿದ್ದ ಸಾರ್ವಜನಿಕರಿಗೆ ಖುದ್ದು ಸಿಇಒ ತ್ಯಾಜ್ಯ ಸಂಗ್ರಹಕ್ಕೆ ಬಂದಿದ್ದು ಅಚ್ಚರಿ ತಂದಿತ್ತು. ಸಾರ್ವಜನಿಕರ ಜತೆ ಕೆಲಹೊತ್ತು ಮಾತುಕತೆ ನಡೆಸಿದ ಸಿಇಒ ಸ್ವಚ್ಛತೆಯ ಕುರಿತು ಅರಿವು ಮೂಡಿಸಿದರು.

ಈ ಸಂದರ್ಭ ಪ್ರಜಾವಾಣಿ ಜತೆ ಮಾತನಾಡಿದ ಸಿಇಒ ಎಚ್‌.ಪ್ರಸನ್ನ ‘ಸೆ.15ರಿಂದ ಅ.2ರವರೆಗೆ ಜಿಲ್ಲೆಯಾದ್ಯಂತ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಯುತ್ತಿದ್ದು ಅಭಿಯಾನಕ್ಕೆ ಪ್ರೇರಣೆ ತುಂಬಲು ಹಾಗೂ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಕಸದ ವಾಹನ ಚಲಾಯಿಸಿ ಕಸ ಸಂಗ್ರಹ ಮಾಡಿದ್ದೇನೆ ಎಂದು ತಿಳಿಸಿದರು.

ಕಸ ಸಂಗ್ರಹ ಪ್ರಕ್ರಿಯೆಯಲ್ಲಿ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆ ಅರಿವಿಗೆ ಬಂದಿದೆ. ಕೆಲವರು ಹಣ ಕೊಡಬೇಕು ಎಂಬ ಕಾರಣಕ್ಕೆ, ಹಸಿ ಹಾಗೂ ಒಣ ಕಸ ಬೇರ್ಪಡಿಸಬೇಕು ಎಂಬ ಕಾರಣಕ್ಕೆ ಕಸವನ್ನು ಕೊಡದಿರುವುದು, ರಸ್ತೆಯ ಬದಿಗೆ ಎಸೆಯುತ್ತಿರುವುದು ಕಂಡುಬಂದಿದೆ. ನಿರ್ಜನ ಪ್ರದೇಶಗಳಲ್ಲಿ ಕಸ ಎಸೆದರೆ ವಾತಾವರಣ ಕಲುಷಿತಗೊಳ್ಳುತ್ತದೆ. ನದಿ ಮೂಲಗಳು ಹಾಳಾಗುತ್ತವೆ.

ಸಾರ್ವಜನಿಕರು ನಿರ್ಲಕ್ಷ್ಯ ತೋರದೆ ಕಸವನ್ನು ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ನಾಗರಿಕರು ನೀಡುವ ಸಣ್ಣ ಮೊತ್ತದ ಹಣ ಕಸ ಸಂಗ್ರಹ ಮಾಡುತ್ತಿರುವ ಸಾವಿರಾರು ಮಹಿಳೆಯರ ಬದುಕಿಗೆ ಆಸರೆಯಾಗಿದೆ. ಉದ್ಯೋಗಗಳು ಸೃಷ್ಟಿಯಾಗಿವೆ. ಪರಿಸರ ರಕ್ಷಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಯೋಚಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅ.2ರವರೆಗೂ ಜಿಲ್ಲೆಯಾದ್ಯಂತ ಕಸ ಸಂಗ್ರಹ ವ್ಯವಸ್ಥೆಯ ಬಗ್ಗೆ ವ್ಯಾಪಕ ಪ್ರಚಾರ ನಡೆಸಲಾಗುವುದು. ಇದರ ನಂತರವೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ, ಸುಟ್ಟು ಹಾಕಿ ವಾತಾವರಣ ಕಲುಷಿತಗೊಳಿಸಿದದರೆ ದಂಡ ವಿಧಿಸಲಾಗುವುದು ಎಂದು ಸಿಇಒ ಪ್ರಸನ್ನ ಎಚ್ಚರಿಕೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಕಸ ಸಂಗ್ರಹವಾಗಬೇಕು ಎಂಬ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಗೂ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನವನ್ನು ಶೇ 100ರಷ್ಟು ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿ ಪಣ ತೊಟ್ಟಿದೆ ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT