ಶನಿವಾರ, ಮಾರ್ಚ್ 6, 2021
21 °C
ಕಿಂಡಿ ಅಣೆಕಟ್ಟಿಗೆ ಫೈಬರ್ ಹಲಗೆ ಅಳವಡಿಕೆ

ಉಗ್ಗೇಲ್‌ಬೆಟ್ಟು: ಕೃಷಿ, ಕುಡಿಯುವ ನೀರಿಗೆ ಪರಿಹಾರ

ಎ. ಶೇಷಗಿರಿ ಭಟ್‌ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟಿನಲ್ಲಿ 9 ವರ್ಷಗಳ ಹಿಂದೆ ಮಡಿಸಾಲು ಹೊಳೆಯಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟೆಯ ಅಸಮರ್ಪಕ ನಿರ್ವಹಣೆಯಿಂದಾಗಿ ಕೃಷಿಕರು ಮತ್ತು ನದಿ ತೀರದ ಜನರು ಕುಡಿಯುವ ನೀರಿಗೂ ತತ್ತರಿಸುವಂತಹ ಪರಿಸ್ಥಿತಿಗೆ ಈ ಬಾರಿ ಪರಿಹಾರ ಕಲ್ಪಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ₹80 ಲಕ್ಷ ವೆಚ್ಚದಲ್ಲಿ ಫೈಬರ್‌ಹಲಗೆ ಅಳವಡಿಸುವ ಕಾಮಗಾರಿಗೆ ಚಾಲನೆ ದೊರೆತಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

ಉಪ್ಪೂರು, ಹೇರೂರು, ಹಾವಂಜೆ, ಆರೂರು ಗ್ರಾಮಗಳ ಕೆಲವು ಪ್ರದೇಶಗಳಲ್ಲಿ ಕೃಷಿ ಕೆಲಸಗಳಿಗೆ ಸಿಹಿನೀರು ಲಭ್ಯವಿರಬೇಕೆಂಬ ಉದ್ದೇಶದಿಂದ ಉಪ್ಪುನೀರು ತಡೆಗಟ್ಟಲು ಇಲ್ಲಿ ಕಿಂಡಿ ಅಣೆಕಟ್ಟೆಯನ್ನು ನಿರ್ಮಿಸಲಾಗಿತ್ತು. ಪ್ರತಿ ಮಳೆಗಾಲದ ನಂತರ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಹಲಗೆಗಳನ್ನು ಜೋಡಿಸಿ ಮಣ್ಣನ್ನು ತುಂಬಿ ತಡೆಗೋಡೆ ನಿರ್ಮಿಸಲಾಗುತ್ತಿತ್ತು.

ಆದರೆ ಅಸಮರ್ಪಕ ನಿರ್ವಹಣೆಯಿಂದಾಗಿ ಶೇಖರಣೆಯಾಗಿದ್ದ ನೀರು ಅತೀ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗಿ ಕಡಿಮೆಯಾಗುವ ಸಮಸ್ಯೆಯೊಂದಿಗೆ ಅಧಿಕ ಪ್ರಮಾಣದಲ್ಲಿ ಉಪ್ಪುನೀರು ಒಳಗೆ ನುಗ್ಗಿ  ಕಲುಷಿತವಾಗುತ್ತಿತ್ತು. ನೀರಿನ ಆಶ್ರಯವಿದ್ದ ಕಾರಣ ಮಳೆಗಾಲದ ನಂತರ ನದಿಯ ತೀರದ ಗದ್ದೆಗಳಲ್ಲಿ ಮೆಣಸು, ತೊಂಡೆ, ಬಸಳೆ ಮುಂತಾದ ತರಕಾರಿಗಳನ್ನು ಬೆಳೆಸಿ ಜೀವನ ನಡೆಸುತ್ತಿರುವ ಕೃಷಿಕರು ಉಪ್ಪುನೀರಿನಿಂದಾಗಿ ಕಂಗಾಲಾಗುತ್ತಿದ್ದರು.

ಮರದ ಹಲಗೆ ಮತ್ತು ಬಾಗಿಲ ನಡುವೆ ಮಣ್ಣು ಸರಿಯಾಗಿ ಹಾಕದೆ ಉಪ್ಪು ನೀರು ಮಿಶ್ರವಾಗುತ್ತಿತ್ತು.  ಸಮುದ್ರದ ಉಬ್ಬರದ ಅವಧಿಯಲ್ಲಿ  ಉಪ್ಪು ನೀರು ಜಲಾಶಯದ ನೀರಿನೊಂದಿಗೆ ಮಿಶ್ರವಾಗುವುದನ್ನು ತಡೆಗಟ್ಟಲು ಹೊಸ ತಂತ್ರಜ್ಞಾನವಾದ ಫೈಬರ್‌ಹಲಗೆ ಅಳವಡಿಸಲು ಗ್ರಾಮಸ್ಥರು ಅನೇಕ ವರ್ಷಗಳಿಂದ ಆಗ್ರಹಿಸಿದ್ದರು. ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಆರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೀವ ಕುಲಾಲ, ತಾಲ್ಲೂಕು ಪಂಚಾಯಿತಿ ಸದಸ್ಯೆ ನಳಿನಿ ಪ್ರದೀಪ್ ರಾವ್ ಮತ್ತು ಗ್ರಾಮಸ್ಥರ ಕೋರಿಕೆಯಂತೆ ಇದೀಗ ಸುಮಾರು ₹55 ಲಕ್ಷದಲ್ಲಿ ಫೈಬರ್‌ಹಲಗೆ ಅಳವಡಿಕೆ ಮತ್ತು ₹25 ಲಕ್ಷದಲ್ಲಿ ನದಿ ದಂಡೆ ಕೊರೆತ ತಡೆಗಟ್ಟಲು ಕಲ್ಲುಕಟ್ಟುವ  ಕಾಮಗಾರಿ ಆರಂಭಗೊಂಡಿದೆ.

‘ಫೈಬರ್ ಹಲಗೆ ಅಳವಡಿಸುವುದರಿಂದ ಉಪ್ಪು ನೀರು ತಡೆ, ಸಂಗ್ರಹವಾದ ಸಿಹಿನೀರಿನ ಪೋಲು ತಡೆಯಲು ಸಾಧ್ಯ. ಆದರೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು, ಪ್ರತಿವರ್ಷ ನಿರ್ವಹಣೆ ಮಾಡುವುದೂ ಅಗತ್ಯವಿದೆ. ಅಣೆಕಟ್ಟೆ ಮೇಲೆ, ಕೆಳಗೆ ‌ನಾಲ್ಕೂ ಬದಿಗಳಲ್ಲಿ  ನದಿದಂಡೆ ಸಂರಕ್ಷಣಾ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಮಾಡಿ ಇನ್ನಷ್ಟು ಕೊರೆತ ಆಗುವುದನ್ನು ತಡಗಟ್ಟಬೇಕು’ ಎಂದು  ಗ್ರಾಮಸ್ಥ ರಮೇಶ ಕರ್ಕೇರ ಉಗ್ಗೆಲ್ ಬೆಟ್ಟು ಅಗ್ರಹಿಸಿದ್ದಾರೆ.

ಹಳೆ ಅಣೆಕಟ್ಟೆ ಉಳಿಸಿ:  ‘ಹೊಸ ಕಿಂಡಿ ಅಣೆಕಟ್ಟೆ ಯಿಂದಾಗಿ 60 ವರ್ಷಗಳ ಹಿಂದೆ ನಿರ್ಮಿಸಿದ ಹಳೆಯ ಕಿಂಡಿ ಅಣೆಕಟ್ಟೆಯನ್ನು ನದಿ ತೀರದ ಕೊರೆತವಾಗುತ್ತಿದೆ ಎಂಬ ನೆಪದಲ್ಲಿ ತೆರವುಮಾಡಲುಕಾಮಗಾರಿ ಇಲ್ಲಿ ನಡೆಯುತ್ತಿದೆ. ಇನ್ನೂ ಕೂಡಾ ಸದೃಢವಾಗಿರುವ  ಹಳೆ ಅಣೆಕಟ್ಟೆಯನ್ನು ಉಳಿಸಿಕೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.