ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ಹೋರಾಟದ ನೆನಪುಗಳನ್ನು ಬಿಚ್ಚಿಟ್ಟ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು

ಮುಸ್ಲಿಂ ಮುಖಂಡರಿಂದ ಪೇಜಾವರ ಶ್ರೀಗಳ ಭೇಟಿ
Last Updated 20 ಡಿಸೆಂಬರ್ 2019, 13:35 IST
ಅಕ್ಷರ ಗಾತ್ರ

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಸುಪ್ರೀಂಕೋರ್ಟ್‌ ಶನಿವಾರ ತೀರ್ಪು ಪ್ರಕಟಿಸುತ್ತಿದ್ದಂತೆ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಸಂತಸಗೊಂಡರು. ಅಯೋಧ್ಯೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶ್ರೀಗಳು ಹೋರಾಟದ ದಿನಗಳನ್ನು ಮತ್ತೆ ನೆನಪಿಸಿಕೊಂಡರು.

ಅಯೋಧ್ಯೆಯ ನೆನಪು:

‘ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ಅಯೋಧ್ಯೆ ಪ್ರತಿಭಟನೆತೀವ್ರ ಸ್ವರೂಪ ಪಡೆದು 10 ಮಂದಿಯ ಹತ್ಯೆಯಾಯಿತು. ಆ ಪ್ರತಿಭಟನೆಯಲ್ಲಿ ನನ್ನೊಂದಿಗೆ ಭಾಗವಹಿಸಿದ್ದ ವಿದ್ಯಾಮಾನ್ಯ ತೀರ್ಥರು, ವಿಭುದೇಶ ತೀರ್ಥರು, ಸುಬ್ರಹ್ಮಣ್ಯ ಶ್ರೀಗಳು ಸೇರಿದಂತೆ ಏಳೆಂಟು ಸ್ವಾಮೀಜಿಗಳನ್ನು ಬಂಧಿಸಲಾಯಿತು’ ಎಂದು ಪೇಜಾವರ ಶ್ರೀಗಳು ಅಂದಿನ ಘಟನೆಯನ್ನು ಮೆಲುಕು ಹಾಕಿದರು.

ಜೈನಿನಿಂದ ಬಿಡುಗಡೆಯಾದ ಬಳಿಕ ಸಂತರೆಲ್ಲ ರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುವಾಗ ಮತ್ತೆ ಪೊಲೀಸರು ಬಂಧಿಸಿದರು. ಬಳಿಕ ನ್ಯಾಯಾಲಯದ ಮೊರೆ ಹೋಗಲಾಯಿತು. ಅಂದಿನ ರಾಷ್ಟ್ರಪತಿ ವೆಂಕಟರಾಮನ್‌ ಅವರಿಗೂ ಬಿಡುಗಡೆಗೆ ಕೋರಿ ಅರ್ಜಿ ಕೊಡಲಾಯಿತು. ಅದರಂತೆ ಬಿಡುಗಡೆಯಾಯಿತು, ಜತೆಗೆ ಅಯೋಧ್ಯೆಗೆ ತೆರಳಿ ದೇವರ ದರ್ಶನ ಪಡೆಯುವ ಅವಕಾಶವೂ ದೊರೆಯಿತು ಎಂದು ಶ್ರೀಗಳು ಸ್ಮರಿಸಿದರು.

ವಿ.ಪಿ.ಸಿಂಗ್ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಅಯೋಧ್ಯೆಯಲ್ಲಿ ಕರಸೇವೆಗೆ ಒತ್ತಾಯಿಸಿ ಹಲವು ಸಂಧಾನ ಸಭೆಗಳು, ಪ್ರತಿಭಟನೆಗಳು ನಡೆದವು. ಆದರೂ ಕರಸೇವೆಗೆ ಅವಕಾಶ ಸಿಗಲಿಲ್ಲ. ಬಳಿಕ ಪಿ.ವಿ.ನರಸಿಂಹರಾವ್‌ ಪ್ರಧಾನಿಯಾದಾಗ ಕರಸೇವೆಗೆ ಅವಕಾಶ ಸಿಕ್ಕಿತು.

ಮಸೀದಿ ಮುಟ್ಟದೆ ಸಾಂಕೇತಿಕ ಕರಸೇವೆ ಮಾಡುವುದಾಗಿ ಎಲ್ಲರೂ ಮಾತುಕೊಟ್ಟೆವು. ಆದರೆ,ಸಾಂಕೇತಿಕ ಕರಸೇವೆ ವೇಳೆ ಅನಿರೀಕ್ಷಿತವಾಗಿ ಕರ ಸೇವಕರು ಮಸೀದಿ ಮೇಲೆ ಹತ್ತಿ ಧ್ವಂಸಗೊಳಿಸಲು ಶುರುಮಾಡಿದರು.

ಮಸೀದಿ ಮುಟ್ಟುವುದು ತಪ್ಪು ಎಂದು ಮೈಕ್‌ನಲ್ಲಿ ಹೇಳಿದರೂ ಯಾರೂ ಸ್ಪಂದಿಸಲಿಲ್ಲ, ತಡೆಯಲು ಹೋದಾಗ ಗುಂಡು ತಗುಲಬಹುದು ಎಂದು ಬಿಡಲಿಲ್ಲ. ಕರಸೇವಕರ ಭಾವೋದ್ವೇಗವನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಅಂದಿನ ಕರಾಳ ದಿನಗಳನ್ನು ಪೇಜಾವರ ಸ್ವಾಮೀಜಿ ತೆರೆದಿಟ್ಟರು.

ಬಾಬರಿ ಮಸೀದಿ ಧ್ವಂಸವಾದ ಜಾಗದಲ್ಲಿ ರಾಮನ ಮಂದಿರವಿದ್ದ ಕುರುಕುಗಳು ದೊರೆತವು. ಬಳಿಕ ಮಸೀದಿ ಇದ್ದ ಜಾಗದಲ್ಲಿ ರಾಮಮಂದಿರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಮಸೀದಿ ಧ್ವಂಸಕೃತ್ಯವನ್ನು ಕಂಡರೂ, ಅದರಲ್ಲಿ ಭಾಗವಹಿಸದೆ ದೂರ ಉಳಿದಿದ್ದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT