ಮತ ಹಾಕಿ ಮದುವೆಗೆ ಬಂದರೆ ಉಡುಗೊರೆ!

ಮಂಗಳವಾರ, ಏಪ್ರಿಲ್ 23, 2019
27 °C
ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಜಾಗೃತಿ

ಮತ ಹಾಕಿ ಮದುವೆಗೆ ಬಂದರೆ ಉಡುಗೊರೆ!

Published:
Updated:
Prajavani

ಉಡುಪಿ: ವಿವಾಹ ಆಮಂತ್ರಣ ಪತ್ರಿಕೆಯ ಮೂಲಕ ಮತ ಜಾಗೃತಿ ಸಂದೇಶವನ್ನು ಸಾರುವಂತಹ ವಿಶಿಷ್ಟ ಪ್ರಯತ್ನವೊಂದು ನಡೆದಿದ್ದು, ಎಲ್ಲರ ಗಮನ ಸೆಳೆದಿದೆ.

ಸಾಮಾನ್ಯವಾಗಿ ಆಮಂತ್ರಣ ಪತ್ರಿಕೆಯಲ್ಲಿ ‘ನಿಮ್ಮ ಆಶೀರ್ವಾದವೇ ಉಡುಗೊರೆ’ ಎಂಬ ಒಕ್ಕಣಿಕೆಯನ್ನು ಹಾಕಲಾಗಿರುತ್ತದೆ. ಆದರೆ, ಇಲ್ಲಿ ಮದುವೆಗೆ ಬಂದವರಿಗೇ ವಿಶೇಷ ಉಡುಗೊರೆ ನೀಡಲಾಗುತ್ತಿದೆ. ಬಂದವರಿಗೆಲ್ಲ ಅಲ್ಲ; ಮತಹಾಕಿ ಬಂದವರಿಗೆ ಮಾತ್ರ ಎಂಬುದು ವಿಶೇಷ.

ಮೇ 1ರಂದು ತಲ್ಲೂರು ಪಾರ್ತಿಕಟ್ಟೆ ಶ್ರೀ ಶೇಷಕೃಷ್ಣ ಕನ್ವೆನ್‌ಷನ್ ಸಭಾಭವನದಲ್ಲಿ ಗೌರಿ, ಶ್ರೀನಿವಾಸ್ ದಂಪತಿ ಪುತ್ರ ಗಣೇಶ್ ಕುಮಾರ್ ಪಡುಕೋಣೆ ಹಾಗೂ ಲೀಲಾವತಿ, ನಾರಾಯಣ ದಂಪತಿ ಪುತ್ರಿ ಪೂರ್ಣಿಮಾ ಅವರ ವಿವಾಹ ಮಹೋತ್ಸವ ನಡೆಯಲಿದೆ. ಇವರ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನದ ಜಾಗೃತಿ ಸಂದೇಶ ಮುದ್ರಿಸಲಾಗಿದ್ದು, ಮತದಾನದ ಮಹತ್ವವನ್ನು ಸಾರಲಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ವಿವಾಹದಲ್ಲಿ ಭಾಗಿಯಾದವರಿಗೆ ₹ 250 ಮೌಲ್ಯದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಮತದಾರರು ಬೆರಳಿಗೆ ಹಾಕಿಸಿಕೊಂಡ ಶಾಹಿ ಗುರುತನ್ನು ತೋರಿಸಿದರೆ ಈ ಕೊಡುಗೆ ನಿಮ್ಮದಾಗಲಿದೆ.

ಇದರ ಜತೆಗೆ ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಹೆಬ್ಬಾರ್ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ, ಸೂರ್ಗೋಳಿ ಸರ್ಕಾರಿ ಶಾಲೆಯ ಶಿಕ್ಷಕ ಶ್ರೀನಿವಾಸ್ ಅವರಿಂದ ಪುರಾತನ ಜಾನಪದ ವಸ್ತುಗಳ ಪ್ರದರ್ಶನ ಸಹ ಹಮ್ಮಿಕೊಳ್ಳಲಾಗಿದೆ.

ಸಮಾಜಕ್ಕೆ ಮತದಾನ ಜಾಗೃತಿಯ ಸಂದೇಶ ನೀಡುವುದರ ಜೊತೆಗೆ ಪುಸ್ತಕ ಓದುವ ಹವ್ಯಾಸವನ್ನು ಪ್ರೋತ್ಸಾಹಿಸಿ, ಬೆಳೆಸುವಂತಹ ಪ್ರಯತ್ನಕ್ಕೆ ಕೈಹಾಕಿರುವ ನವ ಜೋಡಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಕೈಗೊಳ್ಳುತ್ತಿರುವ ಮತದಾನ ಜಾಗೃತಿ ಕಾರ್ಯಕ್ರಮಗಳೊಂದಿಗೆ, ಸಾರ್ವಜನಿಕರು ಮತದಾನ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳಿಗೆ ಎಲ್ಲೆಡೆಯಿಂದ ಶ್ಲಾಘನೆ ಸಿಕ್ಕಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !