ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ನಾಯಕನ ಆಯ್ಕೆ ಮತದಾರನ ಕರ್ತವ್ಯ: ನ್ಯಾಯಾಧೀಶರಾದ ಸಿ.ಎಂ.ಜೋಷಿ ಕಿವಿಮಾತು

ರಾಷ್ಟ್ರೀಯ ಮತದಾರರ ದಿನಾಚರಣೆ
Last Updated 25 ಜನವರಿ 2019, 13:44 IST
ಅಕ್ಷರ ಗಾತ್ರ

ಉಡುಪಿ: ದೇಶದ ಅಭಿವೃದ್ಧಿಗೆ ಶ್ರಮಿಸುವ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆಮಾಡಬೇಕಾದ ಮಹತ್ವದ ಜವಾಬ್ದಾರಿ ಮತದಾರನದ್ದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸಿ.ಎಂ.ಜೋಷಿ ಕರೆ ನೀಡಿದರು.

ಪುರಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಚುನಾವಣಾಧಿಕಾರಿ ಜಂಟಿಯಾಗಿ ಆಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಸರ್ಕಾರಗಳು ತೆಗೆದುಕೊಳ್ಳುವ ನಿರ್ಣಯ ದೊಡ್ಡದು. ಜನಪ್ರತಿನಿಧಿಗಳು ಜನಪರವಾಗಿ ಕಾರ್ಯ ನಿರ್ವಹಿಸಿದರೆ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಸಮಾಜಕ್ಕೆ ಒಳಿತು ಮಾಡುವ ನಾಯಕರನ್ನು ಆಯ್ಕೆ ಮಾಡಬೇಕಿದೆ ಎಂದರು.‌

18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ತಪ್ಪದೆ ಮತ ಹಾಕಬೇಕು. ಮತ ಚಲಾವಣೆಯಿಂದ ಹಿಂದೆ ಸರಿದರೆ ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂಬುದನ್ನು ಮರೆಯಬಾರದು. ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳ ಬಗ್ಗೆ ಮತದಾರನಲ್ಲಿ ಅಸಡ್ಡೆ ಇರಬಹುದು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಜವಾಬ್ದಾರಿ ನಿಭಾಯಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿವೇಕಾನಂದ ಎಸ್.ಪಂಡಿತ್ ಮಾತನಾಡಿ, ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ. ಜಾತಿ, ಮತ ಭೇದ ಇಲ್ಲದೆ ಸೂಕ್ತ ವ್ಯಕ್ತಿಯನ್ನು ಆರಿಸಿ ಎಂದು ಸಲಹೆ ನೀಡಿದರು.‌

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್ ಮಾತನಾಡಿ, ಜಿಲ್ಲಾ ಸ್ವೀಪ್ ಸಮಿತಿ ಯುವ ಜನರಲ್ಲಿ ಮತದಾನ ಜಾಗೃತಿಗೆ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಪೋಸ್ಟರ್ ಮೇಕಿಂಗ್ ಸೇರಿದಂತೆ ಹಲವು ಸ್ಪರ್ಧೆಗಳನ್ನು ನಡೆಸಿದೆ. ಕಾಲೇಜುಗಳಲ್ಲಿ ಮತದಾರರ ಜಾಗೃತ ಕ್ಲಬ್‌ ಹಾಗೂ ಕ್ಯಾಂಪಸ್ ಅಂಬಾಸಿಡರ್‌ಗಳನ್ನು ನೇಮಿಸಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಮತದಾನವಾಗುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲೆಯಲ್ಲಿ ಜ.1, 2019ಕ್ಕೆ 18ವರ್ಷ ತುಂಬಿದ ಯುವ ಮತದಾರರ ನೋಂದಣಿಗೆ ಅವಶ್ಯವಿರುವ ಅರ್ಜಿಗಳನ್ನು ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳು ಅರ್ಜಿ ಭರ್ತಿ ಮಾಡಿ ಪ್ರಾಂಶುಪಾಲರಿಗೆ ಸಲ್ಲಿಸಬೇಕು. ಫೆ.14ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

ಪ್ರತಿ ಕಾಲೇಜುಗಳಲ್ಲಿ ವೋಟರ್ ಹೆಲ್ಪ್ ಡೆಸ್ಕ್ ತೆರೆಯಲಾಗುತ್ತಿದ್ದು, ಮತದಾರರ ನೋಂದಣಿ ಸೇರಿದಂತೆ ಅಗತ್ಯ ಮಾಹಿತಿ ನೀಡಲಾಗುವುದು. ಯಾವ ಕಾಲೇಜಿನಲ್ಲಿ ಅತಿ ಹೆಚ್ಚು ಯುವ ಮತದಾರರು ನೋಂದಣಿಯಾಗುತ್ತಾರೊ ಆ ಕಾಲೇಜಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.

ತಾಲ್ಲೂಕು ಕಚೇರಿಯಲ್ಲಿ ಮತದಾರರ ಸಹಾಯ ಕೇಂದ್ರ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 1950 ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಎಎಸ್‌ಪಿ ಕುಮಾರ್ ಚಂದ್ರ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಅತಿ ಹೆಚ್ಚು ಬಾರಿ ಮತದಾನ ಮಾಡಿರುವ ನಾಡದ ಸೂರು ಪಡುಕೋಣೆ ಹಾಗೂ ಉಪ್ಪಿನಕುದ್ರುವಿನ ರಾಧಾಕೃಷ್ಣ ಮಯ್ಯ ಅವರನ್ನು ಸನ್ಮಾನಿಸಲಾಯಿತು. ಯುವ ಮತದಾರರಿಗೆ ಮತದಾರರ ಚೀಟಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT