ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾನಯನ ಇಲಾಖೆ ಅವ್ಯವಹಾರ: ತನಿಖೆಗೆ ಆದೇಶ

ರೈತ ಸಂಪರ್ಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಸೂಚನೆ
Last Updated 23 ಡಿಸೆಂಬರ್ 2018, 16:58 IST
ಅಕ್ಷರ ಗಾತ್ರ

ಉಡುಪಿ: ಜಲಾನಯನ ಇಲಾಖೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು ರೈತರಿಂದ ದೂರಗಳು ಕೇಳಿಬಂದಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಪಡೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ತಿಳಿಸಿದರು.

ಮಣಿಪಾಲದ ರಜತಾದ್ರಿಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರೈತ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಮಾತನಾಡಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಜಲಾನಯನ ಇಲಾಖೆ ವಿರುದ್ಧ ಹಲವು ರೈತರು ಅವ್ಯವಹಾರ ಆರೋಪ ಮಾಡಿದರು. ಆರೋಪಗಳ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರ ನೀಡದಿದ್ದಕ್ಕೆ ಆಕ್ರೋಶಗೊಂಡ ರೈತರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ರೈತ ಮುಖಂಡರೊಬ್ಬರು ಮಾತನಾಡಿ, ಹಾಲಾಡಿ ಗ್ರಾಮ ಪಂಚಾಯಿತಿಯಲ್ಲಿ ಅಗಸ್ಟ್‌ನಲ್ಲಿ ಲ್ಯಾಪ್ಸ್‌ ಆದ ಯೋಜನೆಗೆ ಅಕ್ಟೋಬರ್‌ನಲ್ಲಿ ಸಭೆ ಕರೆದು ಸಮಿತಿ ರಚಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಧಿಕಾರಿ ಹೆಸರಿನಲ್ಲಿ ಜಂಟಿಯಾಗಿ ಬ್ಯಾಂಕ್‌ ಖ್ಯಾತೆ ತೆರೆಯಲಾಗಿದೆ ಎಂದು ದೂರಿದರು.

ಜಲಾನಯನ ಇಲಾಖೆಯಲ್ಲಿ ವಿವಿಧ ಯೋಜನೆಗಳ ಹೆಸರಿನಲ್ಲಿ ಭಾರಿ ಪ್ರಮಾಣದ ಅವ್ಯವಹಾರಗಳು ನಡೆದಿವೆ. ಸತ್ತ ಗಿಡಗಳನ್ನು ನೆಟ್ಟು ಅನುದಾನ ಪಡೆಯಲಾಗಿದೆ. ಕಿಂಡಿ ಅಣೆಕಟ್ಟುಗಳ ಗುತ್ತಿಗೆಯನ್ನು ಸಹ ಇಲಾಖೆಯ ಅಧಿಕಾರಿಗಳೇ ವಹಿಸಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ರೈತ ಮುಖಂಡ ವಿಕಾಸ ಹೆಗ್ಡೆ ಮಾತನಾಡಿ, ಸರ್ಕಾರದಿಂದ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆಗಳು ನಿಜವಾದ ಫಲಾನಿಭವಿಗಳಿಗೆ ತಲುಪುತ್ತಿಲ್ಲ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆರಳೆಣಿಕೆ ಕೃಷಿಕ ಸಂಘಕ್ಕೆ ಫೋನ್‌ ಮೂಲಕ ಮಾಹಿತಿ ನೀಡುತ್ತಿವೆ. ಇದರಿಂದಾಗಿ ಶೇ 80ರಷ್ಟು ರೈತರು ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಕೃಷಿ ಅಧಿಕಾರಿಗಳು ಗ್ರಾಮ ಮಟ್ಟಲ್ಲಿ ರೈತ ಗ್ರಾಮ ಸಭೆ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳ ಸಮಗ್ರ ಮಾಹಿತಿಯನ್ನು ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಭೆಗಳನ್ನು ಆಯೋಜಿಸಿ ರೈತರಿಗೆ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸಚಿವರು ಆದೇಶ ನೀಡಿದರು.

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತು ಈಗಾಗಲೇ 2,800 ರೈತರು ಕಬ್ಬು ಬೆಳೆಯಲು ಸಿದ್ಧರಿರುವುದಾಗಿ ಒಪ್ಪಿಗೆ ಪತ್ರ ನೀಡಿದ್ದಾರೆ ಎಂದು ರೈತ ಸಂಘದ ಮುಖಂಡರು ತಿಳಿಸಿದರು. ಆದರೆಮ ವಾರಾಹಿ ಯೋಜನೆ ಇನ್ನೂ ಪೂರ್ಣಗೊಳ್ಳದಿರುವುದರಿಂದ ಕಬ್ಬು ಬೆಳೆಯಲು ಕಷ್ಟವಾಗಲಿದೆ ಎಂದರು.‌

ವಾರಾಹಿ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಎಡದಂಡೆ ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಬಲದಂಡೆ ಕಾಮಗಾರಿಗೆ ಅಂತಿಮ ಅನುಮೋದನೆ ಬಾಕಿ ಇದೆ ಎಂದು ಮಾಹಿತಿ ನೀಡಿದರು.

ವಾರಾಹಿ ಯೋಜನೆ ವ್ಯಾಪ್ತಿಯ ಬಿಲ್ಲಾಡಿ ಬಳಿ ಕಾಲುವೆ ನಡುವೆ ಬಂಡೆ ಬಂದಿದ್ದು, ಅದನ್ನು ಒಡೆಯದೆ, ಕಾಮಗಾರಿ ಮುಂದುವರಿಸಿರುವುದರಿಂದ ಕಾಲುವೆ ವ್ಯಾಪ್ತಿಯ 3 ಗ್ರಾಮಗಳಿಗೆ ನೀರು ದೊರೆಯುತ್ತಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭತ್ತ ಮತ್ತು ತೆಂಗಿಗೆ ಬೆಂಬಲ ಬೆಲ ನೀಡುವ ಕುರಿತು ಹಾಗೂ ಅಡಿಕೆ ಕೊಳೆ ರೋಗಕ್ಕೆ ಸೂಕ್ತ ಔಷಧಿ ಬಗ್ಗೆ, ಕಾಡುಪ್ರಾಣಿ ಹಾವಳಿಯಿಂದ ಬೆಳೆ ರಕ್ಷಿಸುವ ಬಗ್ಗೆ, ಡೀಮ್ಡ್‌ ಫಾರೆಸ್ಟ್ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಅಡಿಕೆ ತೋಟದ ಬೋಗಸ್‌ ದಾಖಲೆ ತೋರಿಸಿ ಕೊಳೆ ರೋಗದ ಪರಿಹಾರ ಪಡೆದುಕೊಂಡಿರುವ ಕುರಿತು ಹಲವು ದೂರಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಉಸ್ತುವಾರಿ ಸಚಿವೆ ಜಯಮಾಲ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೈತ ಮುಖಂಡರು, ಬಡ ರೈತರ ಮೇಲೆ ಪ್ರಕರಣ ದಾಖಲಿಸುವುದು ಸರಿಯಲ್ಲ. ಇಲಾಖೆಗೆ ಪರಿಹಾರ ಕೋರಿ ಅರ್ಜಿಗಳು ಬಂದ ಸಮಯದಲ್ಲಿ ಸರಿಯಾಗಿ ಪರಿಶೀಲನೆ ನಡೆಸಿದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಕಾಟಾಚಾರಕ್ಕೆ ಸರ್ವೇ ಮಾಡಿ ಪರಿಹಾರ ಬಿಡುಗಡೆ ಮಾಡಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಯಬೇಕು. ಕರ್ತವ್ಯ ಲೋಪ ಎಸಗಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಸಭೆಯಲ್ಲಿ ರೈತರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT