ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ಕರಾವಳಿಗೆ ಕೊಟ್ಟ ಕೊಡುಗೆ ಏನು?: ಪ್ರಮೋದ್ ಮಧ್ವರಾಜ್‌

Last Updated 6 ಜುಲೈ 2018, 12:19 IST
ಅಕ್ಷರ ಗಾತ್ರ

ಉಡುಪಿ: ರಾಜ್ಯ ಬಜೆಟ್‌ನಲ್ಲಿ ಕರಾವಳಿ ಭಾಗಕ್ಕೆ ಯಾವ ಕೊಡುಗೆಗಳು ಸಿಕ್ಕಿಲ್ಲ ಎಂದು ಬಿಜೆಪಿ ನಾಯಕರು ಧರಣಿ ಕೂರುವ ಬದಲು, ಬಜೆಟ್‌ಗೂ ಮುನ್ನವೇ ಕರಾವಳಿ ಭಾಗದ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಬಹುದಿತ್ತು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್‌ ವಾಗ್ದಾಳಿ ನಡೆಸಿದರು.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಜುಲೈ 3ರಂದು ಉಡುಪಿ ಜಿಲ್ಲೆಯ ಶಾಸಕರ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಮಾಡಿತ್ತು. ಬಜೆಟ್‌ ಪ್ರತಿಗಳು ಮುದ್ರಣಕ್ಕೆ ಹೋಗುವ ದಿನ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದರೆ ಬಜೆಟ್‌ನಲ್ಲಿ ಸೇರ್ಪಡೆಯಾಗಲು ಸಾಧ್ಯವೇ ? ಈ ಬಗ್ಗೆ ಸಾಮಾನ್ಯ ಪರಿಜ್ಞಾನ ಕೂಡ ಬಿಜೆಪಿ ನಾಯಕರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡರಿಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚುನಾವಣಾ ಪೂರ್ವದಲ್ಲಿ ಯಾವ ಮನಸ್ಥಿತಿ ಇತ್ತೋ, ಈಗಲೂ ಅದೇ ಮನಸ್ಥಿತಿ ಇದೆ. ರಾಜ್ಯ ಬಜೆಟ್‌ನಲ್ಲಿ ಕರಾವಳಿಗೆ ಏನೂ ಕೊಟ್ಟಿಲ್ಲ ಎಂದು ಕೇಳುವ ಬದಲು, ಕೇಂದ್ರದಲ್ಲಿ ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಉಡುಪಿ ಜಿಲ್ಲೆಗೆ ಯಾವ ಕೊಡುಗೆಗಳನ್ನು ಕೊಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಧ್ವರಾಜ್ ಒತ್ತಾಯಿಸಿದರು.

ಮಲ್ಪೆಯಿಂದ ಆದಿ ಉಡುಪಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ 4 ವರ್ಷಗಳು ಕಳೆದಿವೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಇದುವರೆಗೂ ರಸ್ತೆ ವಿಸ್ತರಣೆ ಆಗಿಲ್ಲ. ಕೇಂದ್ರದ ವಿರುದ್ಧ ಮೊದಲು ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಲಿ ಎಂದರು.

ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ₹ 2,026 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ. ಅಧಿಕಾರಿಗಳೇ ಕೊಟ್ಟ ಮಾಹಿತಿ ಇದು. ಅನುಮಾನವಿದ್ದರೆ ಶಾಸಕರು ಮಾಹಿತಿ ಪಡೆದುಕೊಳ್ಳಲಿ. ನನ್ನ ಅವಧಿಯಲ್ಲಿ ಮಂಜೂರಾದ ಯೋಜನೆಗಳ ಅನುಷ್ಠಾನಕ್ಕೆ ಶಾಸಕರು ಅಡ್ಡಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇಂತಹ ಧೋರಣೆ ಸರಿಯಲ್ಲ. ಅಧಿಕಾರಿಗಳು ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ತಿಳಿಸಲಾಗುವುದು ಎಂದರು.

ಬಿಜೆಪಿ ಹಿಂದುತ್ವದ ಜಪ ಮಾಡುತ್ತದೆ. ಹಿಂದುತ್ವವನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತದೆ. ಆದರೆ, ನಿಜವಾಗಿ ಹಿಂದುತ್ವದ ಪರವಾಗಿರುವ ಕುಮಾರಸ್ವಾಮಿ ಬಜೆಟ್‌ನಲ್ಲಿ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ರಚಿಸಿ ₹ 25 ಕೋಟಿ ಮೀಸಲಿಟ್ಟಿದ್ದಾರೆ ಮಧ್ವರಾಜ್‌ ಹೇಳಿದರು.

ಮೂರು ತಿಂಗಳ ಹಿಂದೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ಕೂಡ ಅನುಷ್ಠಾನವಾಗಲಿದ್ದು, ಉಡುಪಿ ಜಿಲ್ಲೆಗೆ ಅನ್ಯಾಯವಾಗಿಲ್ಲ. ಬಿಜೆಪಿಯವರು ಅನವಶ್ಯಕವಾಗಿ ಚಿಂತಿಸಬೇಕಿಲ್ಲ ಎಂದು ವ್ಯಂಗ್ಯವಾಡಿದರು.

ರೈತರ ಸಾಲಮನ್ನಾ ಮಾಡಲು ₹ 34 ಸಾವಿರ ಕೋಟಿ ಮೀಸಲಿಟ್ಟಾಗ, ಸಹಜವಾಗಿಯೇ ಅಭಿವೃದ್ಧಿ ಯೋಜನೆಗಳಿಗೆ ಕಡಿವಾಣ ಬೀಳುತ್ತವೆ. ಹಾಗೆಯೇ, ಕೆಲವು ಉತ್ಪನ್ನಗಳ ಮೇಲಿನ ತೆರಿಗೆಯೂ ಹೆಚ್ಚಾಗುತ್ತದೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪಕ್ಷದ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಮುಖಂಡರಾದ ನರಸಿಂಹಮೂರ್ತಿ, ಜನಾರ್ಧನ್‌ ಭಂಡಾರ್ಕರ್ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT