ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾಯಕೋತ್ಸವ; ಸ್ತ್ರೀ ಸಬಲೀಕರಣ ಆಶಯ

ಜಿಲ್ಲೆಯಲ್ಲಿ 37,941 ಮನೆಗಳ ಸಮೀಕ್ಷೆ; 5,519 ಮಂದಿಯಿಂದ ಉದ್ಯೋಗ ಚೀಟಿಗೆ ಬೇಡಿಕೆ
Last Updated 12 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಉಡುಪಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಹಾಗೂ ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರ ಸಬಲೀಕರಣವಾಗಬೇಕು ಎಂಬ ಆಶಯದೊಂದಿಗೆ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ‘ಮಹಿಳಾ ಕಾಯಕೋತ್ಸವ’ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದೆ.

ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇರುವ ಹಾಗೂ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಸೇರಿದ ಮಹಿಳೆಯರು ಹೆಚ್ಚಾಗಿರುವ ಗ್ರಾಮ ಪಂಚಾಯಿತಿಗಳನ್ನು ಗುರಿಯಾಗಿಟ್ಟುಕೊಂಡು ‘ಮಹಿಳಾ ಕಾಯಕೋತ್ಸವ’ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿನಿಂದ ತಲಾ ನಾಲ್ಕರಂತೆ 28 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಯೋಜನೆ ಅನುಷ್ಠಾನ ಹೇಗೆ?
ಮಹಿಳಾ ಕಾಯಕೋತ್ಸವ ಕಾರ್ಯಕ್ರಮದಡಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಪ್ರತಿ ಮನೆಗಳಿಗೆ ಪಂಚಾಯಿತಿ ನೇಮಿಸಿದ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ಮಹಿಳಾ ಕಾಯಕೋತ್ಸವದ ಆಶಯ ಹಾಗೂ ಪ್ರಯೋಜನಗಳನ್ನು ಮನದಟ್ಟು ಮಾಡಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಮಹಿಳೆಯರು ಉತ್ಸುಕರಾಗಿದ್ದಾರೆಯೇ ಎಂಬ ಮಾಹಿತಿ ಕಲೆ ಹಾಕಬೇಕು. ಸಮೀಕ್ಷೆ ಸಂದರ್ಭ ಖಾತ್ರಿ ಕೆಲಸಕ್ಕೆ ಬೇಡಿಕೆ ಇಟ್ಟವರಿಗೆ ತಕ್ಷಣ ಜಾಬ್‌ ಕಾರ್ಡ್‌ ವಿತರಿಸಿ ಕೆಲಸ ಕೊಡಬೇಕು.

ಲಾಭ ಏನು?
ಉದ್ಯೋಗ ಖಾತ್ರಿಯಡಿ ಉದ್ಯೋಗ ಚೀಟಿ ಪಡೆದ ಮಹಿಳೆಯರು ವೈಯಕ್ತಿಕವಾಗಿ ದನದ ಹಟ್ಟಿ, ಕೋಳಿ ಗೂಡು, ಕೃಷಿ ಬಾವಿ, ಅಡಿಕೆ ತೋಟಗಳ ನಿರ್ಮಾಣ ಸೇರಿದಂತೆ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಲಾಭ ಪಡೆಯಬಹುದು. ಕೃಷಿ ಭೂಮಿ ಇಲ್ಲದ ಮಹಿಳೆಯರು ವರ್ಷಕ್ಕೆ 150 ದಿನ ಕೂಲಿ ಕೆಲಸ ಪಡೆಯಬಹುದು. ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಬಹುದು ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್‌.

ಜಿಲ್ಲೆಯಲ್ಲಿ ಯೋಜನೆ ಪ್ರಗತಿ
ಮೊದಲ ಹಂತದಲ್ಲಿ 28 ಗ್ರಾಮ ಪಂಚಾಯಿತಿ ವ್ಯಾಪ್ತಿಯ 37,941 ಮನೆಗಳ ಸಮೀಕ್ಷೆ ನಡೆಸಲಾಗಿದೆ. ಬ್ರಹ್ಮಾವರ ತಾಲ್ಲೂಕಿನಲ್ಲಿ 4,867 ಮನೆಗಳ ಸಮೀಕ್ಷೆಯಲ್ಲಿ 428 ಮಂದಿ ಉದ್ಯೋಗ ಚೀಟಿಗೆ ಬೇಡಿಕೆ ಸಲ್ಲಿಸಿದ್ದಾರೆ. ಬೈಂದೂರು ತಾಲ್ಲೂಕಿನಲ್ಲಿ 5,544 ಮನೆಗಳ ಸಮೀಕ್ಷೆಯಲ್ಲಿ 1,599 ಮಂದಿ, ಹೆಬ್ರಿ ತಾಲ್ಲೂಕಿನಲ್ಲಿ 5,350 ಮನೆಗಳ ಸಮೀಕ್ಷೆಯಲ್ಲಿ 508, ಕಾಪುವಿನಲ್ಲಿ 7,175 ಮನೆಗಳ ಸಮೀಕ್ಷೆಯಲ್ಲಿ 275, ಕಾರ್ಕಳದ 5,424 ಮನೆಗಳ ಸಮೀಕ್ಷೆಯಲ್ಲಿ 1,439, ಕುಂದಾಪುರದ 3,318 ಮನೆಗಳ ಸಮೀಕ್ಷೆಯಲ್ಲಿ 266, ಉಡುಪಿಯ 6,263 ಮನೆಗಳ ಸಮೀಕ್ಷೆಯಲ್ಲಿ 1,004 ಮಂದಿ ಉದ್ಯೋಗ ಚೀಟಿಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ.

ಮೊದಲ ಹಂತದ ಮಹಿಳಾ ಕಾಯಕೋತ್ಸವ ಜನವರಿ 15ಕ್ಕೆ ಆರಂಭಗೊಂಡಿದ್ದು, ಫೆ.15ಕ್ಕೆ ಅಂತ್ಯವಾಗಲಿದೆ. ಎರಡನೇ ಹಂತದ ಕಾರ್ಯಕ್ರಮ ಫೆ.15ರಿಂದ ಮಾರ್ಚ್‌ 15ರವರೆಗೆ ನಡೆಯಲಿದೆ. ಎರಡನೇ ಹಂತದಲ್ಲಿ ಪ್ರತಿ ತಾಲ್ಲೂಕಿನಿಂದ ತಲಾ 7 ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಮಹಿಳಾ ಕಾಯಕೋತ್ಸವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT