ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ ನಿಂತ ನೀರಾಗಬಾರದು

‘ಯಕ್ಷಗಾನ ಸಪ್ತೋತ್ಸವ ಕುರುಕ್ಷೇತ್ರ’ಕ್ಕೆ ಎಡನೀರು ಸ್ವಾಮೀಜಿ ಚಾಲನೆ
Last Updated 14 ನವೆಂಬರ್ 2022, 5:40 IST
ಅಕ್ಷರ ಗಾತ್ರ

ಬ್ರಹ್ಮಾವರ: ಕಲೆ ಯಾವತ್ತೂ ನಿಂತ ನೀರಾಗಬಾರದು. ಆದರೆ, ಬೆಳೆಯುವಾಗ ಅದರ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದ ಹಾಗೆ ಬದಲಾವಣೆಯಾಗಬೇಕು ಎಂದು ಎಡನೀರು ಮಠದ ಸಚ್ಚಿದಾನಂದಭಾರತಿ ಸ್ವಾಮೀಜಿ ಹೇಳಿದರು.

ಸಾಲಿಗ್ರಾಮ ಗುಂಡ್ಮಿಯಲ್ಲಿರುವ ಸದಾನಂದ ರಂಗಮಂಟಪದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಐವತ್ತರ ಸಂಭ್ರಮದ ಪ್ರಯುಕ್ತ ಯಕ್ಷಗಾನ ಸಪ್ತೋತ್ಸವ ಕುರುಕ್ಷೇತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನುರಿತ ಕಲಾವಿದರಿಗೆ ಇಂತಹ ಕಲಾ ಕೇಂದ್ರಗಳು ಆಶ್ರಯತಾಣವಾಗಿದೆ.
ಯಕ್ಷಗಾನದ ಪ್ರದರ್ಶನವನ್ನು ತನ್ನ ಮೂಲ ಸ್ವರೂಪದಲ್ಲಿ ಉಳಿಸಿಕೊಂಡಿರುವುದು ಕಲಾಕೇಂದ್ರಗಳು ಮಾತ್ರ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಮಾತನಾಡಿ, ಯಕ್ಷಗಾನದಿಂದ ಕನ್ನಡ ಭಾಷೆ ಉಳಿದಿದೆ. ಕಲಾವಿದರು ಶಿಕ್ಷಣ ಪಡೆದಿದ್ದರೂ, ಅವರ ಜ್ಞಾನಭಂಡಾರ ಅಪಾರವಾಗಿದೆ. ಇಂತಹ ಕಲಾವಿದರನ್ನು ಸರ್ಕಾರ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದರು.

ಇದೇ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಅವರನ್ನು ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಕೇಂದ್ರ ಸರ್ಕಾರದ ರಾಜಸ್ವ ವಿಭಾಗದ ಉಪ ನಿರ್ದೇಶಕ ಹರಿಕೃಷ್ಣ ಮಯ್ಯ, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ, ದಾಂಡೇಲಿಯ ಉದ್ಯಮಿ ಗೈನಾಡಿ ಪ್ರಕಾಶ ಶೆಟ್ಟಿ, ಕಲಾಕೇಂದ್ರದ ಗೌರವಾಧ್ಯಕ್ಷ ಆನಂದ ಸಿ. ಕುಂದರ್ ಇದ್ದರು.

ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಸ್ವಾಗತಿಸಿದರು.

ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘಶ್ಯಾಮ ಹೆಬ್ಬಾರ್‌ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿದರು. ನಂತರ ಪ್ರಸಿದ್ಧ ಕಲಾವಿದರಿಂದ ಪಾರ್ಥ ಸಾರಥ್ಯ, ಭೀಷ್ಮ ಪರ್ವ ಯಕ್ಷಗಾನ ನಡೆಯಿತು.

ಯಕ್ಷ ಸಪ್ತೋತ್ಸವದಲ್ಲಿ ಇಂದು

ಸೋಮವಾರ ಸಂಜೆ 5.30ಕ್ಕೆ ಸಮಾಜಕ್ಕೆ ಯಕ್ಷಗಾನ ಮತ್ತು ಸಾಹಿತ್ಯದ ಕೊಡುಗೆ ವಿಷಯದ ಬಗ್ಗೆ ಕೋಟೇಶ್ವರ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ್‌ ಉಪನ್ಯಾಸ ನೀಡುವರು. ರಾಜ್ಯ ಅಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಿರಣ ಕೊಡ್ಗಿ, ಬೆಂಗಳೂರಿನ ಆನಗಳ್ಳಿ ಕರುಣಾಕರ ಹೆಗ್ಡೆ, ಪಳ್ಳಿ ಕಿಶನ್‌ ಹೆಗ್ಡೆ, ತಿಮ್ಮ ಪೂಜಾರಿ, ರಾಜು ಪೂಜಾರಿ ಉಪಸ್ಥಿತರಿರುವರು. ನಂತರ ದ್ರೋಣ ಸೇನಾಧಿಪತ್ಯ, ಘತೋತ್ಕಚ ವಧೆ, ದ್ರೋಣ ಪರ್ವ ಯಕ್ಷಗಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT